ADVERTISEMENT

ಲಿಂಗಸುಗೂರು| ಡಿ.26ರಂದು ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 12:49 IST
Last Updated 24 ಡಿಸೆಂಬರ್ 2019, 12:49 IST
ಲಿಂಗಸುಗೂರಲ್ಲಿ ಸೋಮವಾರ ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಕುರಿತು ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದರು
ಲಿಂಗಸುಗೂರಲ್ಲಿ ಸೋಮವಾರ ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಕುರಿತು ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದರು   

ಲಿಂಗಸುಗೂರು: ಅಕ್ಷರ ದಾಸೋಹದ ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಲು ಮುಂದಾಗುತ್ತಿರುವ ಸರ್ಕಾರದ ನಿರ್ಧಾರ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಡಿಸೆಂಬರ್‌ 26ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಬಿಸಿಯೂಟ ನೌಕರರ ಸಂಘ ಮನವಿ ಸಲ್ಲಿಸಿತು.

ಸೋಮವಾರ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದ ಅವರು, ಹಲವು ಬಾರಿ ಅಕ್ಷರ ದಾಸೋಹ ಬಿಸಿಯೂಟ ಯೋಜನೆ ನೌಕರರು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಯೂಟ ನೌಕರರನ್ನು ಡಿ ದರ್ಜೆ ನೌಕರರೆಂದು ನೇಮಕಾತಿ ಆದೇಶ ನೀಡಬೇಕು. ಕನಿಷ್ಠ ವೇತನ ಜೊತೆಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. 45ನೇ ಅಂತರರಾಷ್ಟ್ರೀಯ ಸಮ್ಮೇಳನದ ನಿರ್ಣಯ ಜಾರಿಗೆ ತರಬೇಕು. ನೌಕರರನ್ನು ಶಿಕ್ಷಣ ಇಲಾಖೆ ಮೇಲ್ವಿಚಾರಣೆಗೆ ವಹಿಸಬೇಕು. ಅನಗತ್ಯ ದೂರು ಆಧರಿಸಿ ವಜಾ ಮಾಡುವುದನ್ನು ತಡೆಯಬೇಕು. ಯೋಜನೆಯನ್ನು ವರ್ಷದ 12 ತಿಂಗಳು ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ದಲಿತ ಮಹಿಳೆಯರಿಗೆ ಮೀಸಲಾತಿ ಹೆಚ್ಚಿಸಬೇಕು. ಅಡುಗೆ ಹೊಣೆಗಾರಿಕೆ ಮುಖ್ಯಶಿಕ್ಷಕರಿಂದ ಪ್ರತ್ಯೇಕಿಸಬೇಕು. ರಜಾ ದಿನಗಳಲ್ಲಿ ರಜಾ ಸೌಲಭ್ಯ ನೀಡಬೇಕು. ಹೆರಿಗೆ ರಜೆ ಮತ್ತು ಹೆರಿಗೆ ಭತ್ಯೆ ನೀಡಬೇಕು. ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಬಿಸಿಯೂಟ ನೌಕರರಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸ್ಪಂದನೆ ದೊರಕದೆ ಹೋದಲ್ಲಿ ಹಂತ ಹಂತವಾಗಿ ಹೋರಾಟ ಚುರುಕುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ಗೌರವಾಧ್ಯಕ್ಷ ಮೊಹ್ಮದ ಹನೀಫ್‌. ಮುಖಂಡರಾದ ಅಬಿದಾಬೇಗಂ, ಶರಣಮ್ಮ, ಶೈನಜಾಬೇಗಂ, ನೀಲಮ್ಮ, ಲಕ್ಷ್ಮೀದೇವಿ, ಸಿದ್ದಮ್ಮ, ಮಹಾದೇವಿ, ಸುನಿತಾ, ಈರಮ್ಮ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.