ADVERTISEMENT

ನಗರೋತ್ಥಾನ ಯೋಜನೆಯಡಿ ಜಿಲ್ಲೆಗೆ ಅನುದಾನ

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಸಚಿವ ಶಂಕರ ಪಾಟೀಲ ಭಾಷಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 14:41 IST
Last Updated 15 ಆಗಸ್ಟ್ 2022, 14:41 IST
ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 
ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.    

ರಾಯಚೂರು: ಜಿಲ್ಲೆಯಲ್ಲಿ ನಗರೋತ್ಥಾನ ನಾಲ್ಕನೇ ಹಂತದ ಯೋಜನೆಗಳ ಅನುಷ್ಠಾನಕ್ಕೆ 12 ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರವು ಅನುದಾನ ಮಂಜೂರಿಗೊಳಿಸಿದೆ. ಅದರಲ್ಲಿ ಎರಡು ನಗರಸಭೆಗಳಿಗೆ ತಲಾ ₹70 ಕೋಟಿ, ಆರು ಪುರಸಭೆಗಳಿಗೆ ತಲಾ ₹10 ಕೋಟಿ ಹಾಗೂ ಐದು ಪಟ್ಟಣ ಪಂಚಾಯತಗಳಿಗೆ ತಲಾ ₹5 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮಗಾಂಧಿ, ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರೀ ಹಾಗೂ ನೇತಾಜಿ ಸುಭಾಶ್ಚಂದ್ರಬೋಸ್‌ ಅವರಂತಹ ಮಹಾನ್ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದಿದೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹೋರಾಡಿದ ಎಲ್ಲ ಮಹನೀಯರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ ಎಂದರು.

ADVERTISEMENT

ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹಲವಾರು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಫಲವಾಗಿ ರಾಯಚೂರು ಜಿಲ್ಲೆ ಸರ್ವತೋಮುಖ ಅಭಿವೃದ್ಧಿಯೆಡೆಗೆ ದಾಪುಗಾಲು ಹಾಕಿದೆ ಎಂದು ಹೇಳಿದರು.

ಜಿಲ್ಲೆಯ ಜನತೆಯ ಬಹುದಿನಗಳ ಕನಸಾದ ರಾಯಚೂರು ವಿಮಾನ ನಿಲ್ದಾಣವು ಈಗ ನನಸಾಗುವ ಹಂತಕ್ಕೆ ಬಂದಿದೆ. ಈಗಾಗಲೇ ಯರಮರಸ್ ಹೊರವಲಯದಲ್ಲಿ 404ಎಕರೆ ಭೂಮಿಯನ್ನು ಇದಕ್ಕಾಗಿ ಕಾಯ್ದಿರಿಸಲಾಗಿದ್ದು, ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೈಟ್ಸ್ ಇಂಡಿಯಾ ಲಿಮಿಟೆಡ್‌ ಸಂಸ್ಥೆಯ ವಿಸ್ಕೃತ ಯೋಜನಾ ವರದಿಯೊಂದಿಗೆ ₹185.57 ಕೋಟಿ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಲಸಿಕೆ 15,32,466 ಫಲಾನುಭವಿಗಳಿಗೆ ನೀಡಲಾಗಿದೆ. ಜನನಿ ಸುರಕ್ಷಾ ಯೋಜನೆಯಡಿ 2,985 ಫಲಾನುಭವಿಗಳಿಗೆ ₹19.41 ಲಕ್ಷ ಹಾಗೂ ಜನನಿ ಶಿಶುಸುರಕ್ಷಾ ಕಾರ್ಯಕ್ರಮದಡಿ 13083 ಫಲಾನುಭವಿಗಳಿಗೆ ₹39 ಲಕ್ಷ ವೆಚ್ಚ ಮಾಡಲಾಗಿದ್ದು, ಜಿಲ್ಲೆಯಲ್ಲಿ ನಗು-ಮಗು ಯೋಜನೆಯಡಿ ಏಳು ವಾಹನಗಳಿದ್ದು, 600ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಐದು ಜೀವ ಹಾನಿ ಪ್ರಕರಣಗಳಿಗೆ ₹25 ಲಕ್ಷ, ಅಲ್ಲದೆ 12 ಜಾನುವಾರು ಮೃತಪಟ್ಟ ಪ್ರಕರಣಗಳಿಗೆ ಒಟ್ಟು ₹1.17 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಪ್ರಾಥಮಿಕ ವರದಿಯಂತೆ ಜಿಲ್ಲೆಯಲ್ಲಿ 1,646 ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ನಂತರ ನೇರವಾಗಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಈ ಎಲ್ಲ ಸಾಧನೆಗಳನ್ನು ಹೇಳುವುದರ ಜೊತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಎಲ್ಲಾ ಮಹಾನ್ ಚೇತನಗಳಿಗೂ ನಮನ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಹೇಳಿದರು.

ಸಂಸದರ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ನಗರಸಭೆಯ ಅಧ್ಯಕ್ಷೆ ಲಲಿತಾ ಆಂಜನೇಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಉಪವಿಭಾಗಾಧಿಕಾರಿ ರಜನಿಕಾಂತ್, ತಹಸೀಲ್ದಾರ್ ರಾಜಶೇಖರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.