ADVERTISEMENT

ಮಾನ್ವಿ: ಶಾಲೆಗೆ ಮೂಲಸೌಕರ್ಯ ಮರೀಚಿಕೆ

ಮಾನ್ವಿ: ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ, ಕೊಠಡಿ, ನೀರಿನ ಕೊರತೆ

ಬಸವರಾಜ ಬೋಗಾವತಿ
Published 12 ಡಿಸೆಂಬರ್ 2021, 5:49 IST
Last Updated 12 ಡಿಸೆಂಬರ್ 2021, 5:49 IST
-
-   

ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ನಿತ್ಯ ಪರದಾಡುವಂತಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆಯಲ್ಲಿ 680 ಹಾಗೂ ಪಿಯು ಕಾಲೇಜಿನಲ್ಲಿ 637 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿ ವರ್ಷ ಕೇವಲ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಆದರೆ, ವಿದ್ಯಾರ್ಥಿನಿಯರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಬೇಜವಾಬ್ದಾರಿ ವಹಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರೌಢಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಮೀಸಲಾಗಿರುವ ಕೇವಲ ಎರಡು ಶೌಚಾಲಯ ಕೊಠಡಿಗಳು ಕೂಡ ಸಮರ್ಪಕ ನಿರ್ವಹಣೆ ಇಲ್ಲದೆ ದುಸ್ಥಿತಿಯಲ್ಲಿವೆ.

ADVERTISEMENT

ಈಚೆಗೆ ನೂತನವಾಗಿ ಎರಡು ಶೌಚಾಲಯ ಕೊಠಡಿಗಳನ್ನು ನಿರ್ಮಿಸಲಾಗಿದ್ದು ಇನ್ನೂ ಉದ್ಘಾಟನೆಯಾಗಿಲ್ಲ. ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ಪಿಯು ಕಾಲೇಜು ಕಟ್ಟಡದಲ್ಲಿಯೂ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ಲಭ್ಯತೆ ಇಲ್ಲ. ಕಾಲೇಜು ಸಿಬ್ಬಂದಿ ಬಳಕೆಗಾಗಿ ಮಾತ್ರ ಹೈಟೆಕ್ ಶೌಚಾಲಯ ಇದೆ.

ಐದು ದಶಕಗಳ ಇತಿಹಾಸ ಹೊಂದಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಕಾರ್ಯಾಲಯ ಹಾಗೂ ತರಗತಿ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಳೆ ಬಂದಾಗ ಸೋರುತ್ತವೆ. ಶೈಕ್ಷಣಿಕ ದಾಖಲೆಗಳ ಸಂರಕ್ಷಣೆಗೂ ಶಿಕ್ಷಕರಿಗೆ ಸಮಸ್ಯೆಯಾಗಿದೆ. ಕೆಲ ವರ್ಷಗಳ ಹಿಂದೆ 8 ಪ್ರೌಢಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರೌಢಶಾಲಾ ವಿಭಾಗದಲ್ಲಿ ಪ್ರಸ್ತುತ 680 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದು ತರಗತಿಗಳ ಸಮರ್ಪಕ ನಿರ್ವಹಣೆಗೆ ಕೊಠಡಿಗಳ ಕೊರತೆ ಇದೆ.

ಇದರ ಪಕ್ಕದಲ್ಲಿರುವ ಕನ್ಯಾ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಕಥೆಯೂ ಇದಕ್ಕೆ ಭಿನ್ನವಾಗಿಲ್ಲ. ಸದರಿ ಶಾಲೆಯಲ್ಲಿ ಬಿಸಿಯೂಟ ಕೊಠಡಿ ಇಲ್ಲ. ಒಟ್ಟು 174 ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದು ಕೇವಲ ಒಂದು ಶೌಚಾಲಯ ಇದೆ. ಈ ಶಾಲೆಯಲ್ಲಿ ಶಿಕ್ಷಕ, ಶಿಕ್ಷಕಿಯರಿಗೂ ಶೌಚಾಲಯ ವ್ಯವಸ್ಥೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.