ADVERTISEMENT

ವರದಿಯಲ್ಲಿನ ಲೋಪ ಸರಿಪಡಿಸಿ ಜಾರಿ ಮಾಡಿ: ಮಹೇಂದ್ರಕುಮಾರ ಮಿತ್ರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:31 IST
Last Updated 17 ಆಗಸ್ಟ್ 2025, 7:31 IST
ಮಹೇಂದ್ರಕುಮಾರ ಮಿತ್ರ
ಮಹೇಂದ್ರಕುಮಾರ ಮಿತ್ರ   

ರಾಯಚೂರು: ‘ಮತ ಬ್ಯಾಂಕ್‌ ರಾಜಕೀಯಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಮಾದಿಗ ಮತ್ತು ಹೊಲೆಯ ಸಮುದಾಯಗಳ ಮಧ್ಯೆ ಬಿರುಕು ಮೂಡಿಸಿವೆ. ಆಯೋಗಗಳ ಮೂಲಕ ವೈಜ್ಞಾನಿಕವಾದ ವರದಿ ತರಿಸಿಕೊಳ್ಳದೇ ರಾಜಕೀಯ ಮಾಡುತ್ತಿವೆ. ಹೀಗಾಗಿ ಒಳ ಮೀಸಲಾತಿ ಎನ್ನುವುದು ಸಮಸ್ಯೆಯಾಗಿಯೇ ಉಳಿಯಲಿದೆ’ ಎಂದು ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ತಿಳಿಸಿದರು.

‘ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ರಚಿಸಲಾದ ನಿವೃತ್ತ ನ್ಯಾಯಮೂರ್ತಿ ಎನ್‌.ನಾಗಮೋಹನದಾಸ್‌ ಆಯೋಗದ ವರದಿಯಲ್ಲಿ ಕೆಲವು ಲೋಪಗಳಿವೆ. ಸ್ಪೃಶ್ಯ ಜಾತಿಗಳನ್ನು ಹೊರಗಿಟ್ಟು, ಜಾತಿಗಳಲ್ಲಿನ ಕೆನೆಪದರ ವರ್ಗವನ್ನು ಗಣನೆಗೆ ತೆಗೆದುಕೊಂಡು ಒಳ ಮೀಸಲಾತಿ ಜಾರಿ ಮಾಡುವ ಅಗತ್ಯವಿದೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಪ್ರಸ್ತುತ ಮಾದಿಗರು ಬಿಜೆಪಿಯಲ್ಲಿ, ಹೊಲೆಯರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ. ಒಂದೇ ಜಾತಿಯ ಉಪ ಜಾತಿಗಳನ್ನು ಬೇರೆ ಬೇರೆ ವರ್ಗದಲ್ಲಿ ಸೇರಿಸಲಾಗಿದೆ. ಮಾದಿಗರ ಶೇ 6ರ ಮೀಸಲಾತಿಯಲ್ಲಿ ಬದಲಾವಣೆ ಆಗಿಲ್ಲ. ಆದರೆ, ಹೆಚ್ಚುವರಿ ಜಾತಿಗಳನ್ನು ಸೇರಿಸಿರುವ ಕಾರಣ ಮಾದಿಗ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಕಡಿಮೆಯಾಗಲಿದೆ’ ಎಂದು ವಿವರಿಸಿದರು.

ADVERTISEMENT

‘ನಾಗಮೋಹನ ದಾಸ್‌ ಆಯೋಗದಲ್ಲಿ ಅಸ್ಪೃಶ್ಯ ಜಾತಿಗಳ ಒಬ್ಬರೂ ಇಲ್ಲ. ಜಾತಿ, ಉಪ ಜಾತಿಗಳ ಬಗ್ಗೆ ಸರಿಯಾಗಿ ಅರಿವೇ ಇಲ್ಲದವರು ಆಯೋಗದ ಸದಸ್ಯರಾಗಿದ್ದಾರೆ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಮೋಸ ಮಾಡಿ ಆಯೋಗದಿಂದ ತಪ್ಪು ವರದಿ ಪಡೆದುಕೊಂಡಿದೆ’ ಎಂದು ದೂರಿದರು.

‘ಎಚ್‌.ಎನ್‌.ನಾಗಮೋಹನ ದಾಸ್‌ ಪರಿಶಿಷ್ಟ ಜಾತಿಯಲ್ಲದ ಸಮುದಾಯಕ್ಕೆ ಸೇರಿದವರು. ಕುರುಬ, ಲಂಬಾಣಿ, ವೀರಶೈವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇವರಿಂದ ಪರಿಶಿಷ್ಟ ಸಮುದಾಯದವರಿಗೆ ನ್ಯಾಯ ದೊರಕಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಭಾರತ ಸಂವಿಧಾನದ ಅನುಚ್ಛೇದ 341(2) ಪ್ರಕಾರ ಪರಿಶಿಷ್ಟ ಜಾತಿಯವರಲ್ಲಿ ವರ್ಗೀಕರಣ ಅಸಂವಿಧಾನಿಕವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪರಿಶಿಷ್ಟ ಜಾತಿಯಲ್ಲಿ ವರ್ಗೀಕರಣ ಮಾಡುವ ಅಧಿಕಾರವಿಲ್ಲ. ಸುಪ್ರೀಂ ಕೋರ್ಟ್ ಪಂಜಾಬ್, ಹರಿಯಾಣ ಸರ್ಕಾರದ ವರ್ಗೀಕರಣದ ಸುತ್ತೋಲೆ ರದ್ದುಪಡಿಸಿರುವುದು ಇದಕ್ಕೆ ಉತ್ತಮ ನಿದರ್ಶನವಾಗಿದೆ’ ಎಂದು ವಿವರಿಸಿದರು.

‘2005ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಧರ್ಮಸಿಂಗ್ ಅವರು ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿತ್ತು. ಬಿ.ಎಸ್.ಯಡಿಯೂರಪ್ಪ ₹16 ಕೋಟಿ ಹಣ ಬಿಡುಗಡೆ ಮಾಡಿದ್ದರು. 2012ರಲ್ಲಿ ಆಯೋಗವು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ವರದಿ ಸಲ್ಲಿಸಿತ್ತು. 2023ರಲ್ಲಿ ಬಿಜೆಪಿ ಸರ್ಕಾರ ಬಾಹ್ಯ ಒತ್ತಡಕ್ಕೆ ಮಣಿದು ವರದಿಯನ್ನೇ ಮುಚ್ಚಿಹಾಕಿತು’ ಎಂದು ತಿಳಿಸಿದರು.

‘ನಾಗಮೋಹನದಾಸ್ ಆಯೋಗವು 2025ರ ಆಗಸ್ಟ್ 1ರಂದು ಮೀಸಲಾತಿ ವರ್ಗೀಕರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರಿಂದ ಬಡ ಹಾಗೂ ನೈಜ ಪರಿಶಿಷ್ಟರಿಗೆ ಮೋಸವಾಗಿದೆ. ಸರ್ಕಾರಿ ನೌಕರಿಗಳಲ್ಲಿ ಕೆನೆಪದರ ನೀತಿ ಜಾರಿ ಮಾಡಿಲ್ಲ. ಪರಿಶಿಷ್ಟರ ಪಟ್ಟಿಯಲ್ಲಿ ಇರದ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಲ್ಲಿ ಸೇರಿಸಿದರೂ ಅದರ ಬಗ್ಗೆ ಆಯೋಗವು ವರದಿಯಲ್ಲಿ ವಿವರಣೆ ನೀಡಿಲ್ಲ’ ಎಂದು ಹೇಳಿದರು.

‘ಪರಿಶಿಷ್ಟ ಸಮುದಾಯದ ಜನಸಂಖ್ಯೆ ನೀತಿ ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆಯೋಗವು ಪರಿಶಿಷ್ಟ ಜಾತಿಯ ಜನಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಕೆಲಸಕ್ಕೆ ಸೇರಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಗೆ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ದತ್ತಾಂಶ ಜೋಡಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಕರ್ನಾಟಕದ ಪರಿಶಿಷ್ಟ ಜಾತಿಪಟ್ಟಿಯಲ್ಲಿರುವ ಒಬಿಸಿ ಜಾತಿಗಳಾದ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅವುಗಳನ್ನು ಕೈಬಿಟ್ಟ ನಂತರವೇ ಸ್ಥಳೀಯ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದರು.

ಮಾದಿಗ ಸಮಾಜದ ಮುಖಂಡರಾದ ನರಸಿಂಹಲು ಪೋತಗಲ್, ವೈ.ಈರಪ್ಪ, ಭಾಸ್ಕರ್‌ರಾಜ್ ಉಪಸ್ಥಿತರಿದ್ದರು.

Highlights - ಬೋಗಸ್‌ ಪರಿಶಿಷ್ಟರಿಗೆ ಮೀಸಲಾತಿ ಬೇಡ ಸರ್ಕಾರಿ ನೌಕರಿಗಳಲ್ಲಿರುವ ಅನರ್ಹರ ವಜಾಗೊಳಿಸಿ ಸುಳ್ಳುಜಾತಿ ಪತ್ರ ಪಡೆದವರ ಆಸ್ತಿ ಮುಟ್ಟುಗೋಲು ಹಾಕಿ

Quote - ಸಂವಿಧಾನದ ಅನುಚ್ಛೇದ 15 46 ಹಾಗೂ 335ರ ಪ್ರಕಾರ ಪರಿಶಿಷ್ಟ ಜಾತಿಯವರ ಶೈಕ್ಷಣಿಕ ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆಗಾಗಿ ಕಾರ್ಯಗತಗೊಳಿಸಬಹುದು ಮಹೇಂದ್ರಕುಮಾರ ಮಿತ್ರ ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.