ADVERTISEMENT

ಮಹತ್ವಾಕಾಂಕ್ಷಿ ಜಿಲ್ಲೆ ಪ್ರಗತಿ ಸಾಧಿಸಲು ಕರೆ

ನೀತಿ ಆಯೋಗದ ಉಪಕಾರ್ಯದರ್ಶಿ ಶೋಯಬ್ ಅಹಮದ್ ಅಧ್ಯಕ್ಷತೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 10:51 IST
Last Updated 28 ಫೆಬ್ರುವರಿ 2021, 10:51 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀತಿ ಆಯೋಗದ ಉಪ ಕಾರ್ಯದರ್ಶಿ ಶೋಯಬ್ ಅಹಮದ್ ಕಲಾಲ್ ಅವರ ಅಧ್ಯಕ್ಷತೆಯಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಯ ಪ್ರಗತಿ ಕುರಿತ ಸಭೆ ಶನಿವಾರ ನಡೆಯಿತು
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀತಿ ಆಯೋಗದ ಉಪ ಕಾರ್ಯದರ್ಶಿ ಶೋಯಬ್ ಅಹಮದ್ ಕಲಾಲ್ ಅವರ ಅಧ್ಯಕ್ಷತೆಯಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಯ ಪ್ರಗತಿ ಕುರಿತ ಸಭೆ ಶನಿವಾರ ನಡೆಯಿತು   

ರಾಯಚೂರು: ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯು ನಿಗಧಿ ಪಡಿಸಲಾಗಿರುವ ವಿವಿಧ ಮಾನದಂಡಗಳ ವೃದ್ದಿಯಲ್ಲಿನ ಸಾಧನೆ ಸಮಧಾನಕರವಾಗಿದೆ, ಇನ್ನೂ ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸಲು ಅಧಿಕಾರಿಗಳು ಮತ್ತಷ್ಟು ಶ್ರಮಿಸುವಂತೆ ನೀತಿ ಆಯೋಗದ ಉಪ ಕಾರ್ಯದರ್ಶಿ ಶೋಯಬ್ ಅಹಮದ್ ಕಲಾಲ್ ಕರೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಹತ್ವಾಕಾಂಕ್ಷಿ ಜಿಲ್ಲೆಯ ಪ್ರಗತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಕೃಷಿ, ಆರೋಗ್ಯ, ಕೌಶಲ್ಯ ವೃದ್ದಿ ಸೇರಿದಂತೆ ವಿವಿಧ ಸೂಚ್ಯಂಕಗಳಲ್ಲಿ ಜಿಲ್ಲೆಯ ಪ್ರಗತಿಯಲ್ಲಿ ಏರಿಕೆ ಕಾಣಬೇಕು. ಒಟ್ಟಾರೆಯಾಗಿ ಈ ಸೂಚ್ಯಂಕಗಳ ಪ್ರಗತಿಯನ್ನು ಪರಿಶೀಲಿಸಿದಲ್ಲೀ, ಕೆಲವು ಮಾನದಂಡಗಳಲ್ಲಿ ಪ್ರಗತಿ ಉತ್ತಮವಾಗಿದೆ, ಆದರೆ ಸಾಧಿಸುವುದು ಮತ್ತಷ್ಟು ಇದೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇದಕ್ಕಾಗಿ ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕು ಎಂದರು.

ADVERTISEMENT

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಮಕ್ಕಳ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆ ಅಗತ್ಯವಿದೆ, ಅದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಕಾಂಶಗಳನ್ನು ನೀಡಲು ಕೈಗೊಂಡಿರುವ ಕಾರ್ಯಕ್ರಮಗಳು ಮತ್ತಷ್ಟು ಪರಿಣಾಮಕಾರಿ ಆಗಬೇಕು, ಗರ್ಭಿಣಿ ಸ್ತ್ರೀಯರಲ್ಲಿನ ಅನಿಮಿಯಾ, ಮಕ್ಕಳಿಗೆ ಕಾಲ ಕಾಲಕ್ಕೆ ನೀಡುವ ಚುಚ್ಚುಮದ್ದುಗಳು ಸಕಾಲದಲ್ಲಿ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳು ಮತ್ತಷ್ಟು ಚುರುಕಾಗಬೇಕು ಎಂದರು.

ಆರೋಗ್ಯ ಸುಧಾರಣಾ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ರಿಮ್ಸ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು, ಅದರಂತೆ ಯುವಜನತೆಯಲ್ಲಿ ಕೌಶಲ್ಯಾಭಿವೃದ್ದಿಗೆ ಆಯೋಜಿಸಲಾಗಿರುವ ಕೇಂದ್ರಗಳಿಗೂ ತೆರಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಲೀಡ್ ಬ್ಯಾಂಕ್ ವತಿಯಿಂದ ವಿವಿಧ ಯೋಜನೆಗಳಲ್ಲಿ ಅರ್ಹರಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯಗಳ ಕುರಿತು
ಸುದೀರ್ಘವಾಗಿ ಚರ್ಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹಮದ್ ಇಸ್ಮಾಯಿಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೀರನಗೌಡ ಸೇರಿದಂತೆ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಇರುವ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.