ಮಸ್ಕಿ: ಪಟ್ಟಣದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಪುರಸಭೆಯ ಅನುಮತಿ ಪಡೆಯದೇ ಅಳವಡಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಹಬ್ಬ-ಹರಿದಿನ, ಧಾರ್ಮಿಕ ಆಚರಣೆ, ಜನ್ಮದಿನ, ಚುನಾವಣೆ, ರಾಜಕೀಯ ಕಾರ್ಯಕ್ರಮ ಹೀಗೆ ವಿಶೇಷ ಸಂದರ್ಭಗಳಲ್ಲೆಲ್ಲ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್, ಬಂಟಿಂಗ್ಸ್‌ಗಳು ಪುರಸಭೆ ವ್ಯಾಪ್ತಿಯಲ್ಲಿ ರಾರಾಜಿಸುತ್ತವೆ.
ಫ್ಲೆಕ್ಸ್ ಹಾವಳಿ ಮಿತಿಮೀರಿದರೂ ಸಂಬಂಧಿಸಿದ ಅಧಿಕಾರಿಗಳು ಕಂಡರೂ ಕಾಣದಂತೆ ಸುಮ್ಮನಿದ್ದಾರೆ ಎಂಬ ಚರ್ಚೆ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ಪಟ್ಟಣದ ಹಳೆಯ ಬಸ್ ನಿಲ್ದಾಣ, ವಾಲ್ಮೀಕಿ ವೃತ್ತ, ಕನಕವೃತ್ತ, ಅಶೋಕ ಸರ್ಕಲ್, ಬಸವೇಶ್ವರ ವೃತ್ತ ಸೇರಿದಂತೆ ವಿವಿಧೆಡೆ 100 ಅಡಿ ರಸ್ತೆಯ ವಿಭಜಕದ ಗ್ರಿಲ್‌ಗಳಿಗೆ ಫ್ಲೆಕ್ಸ್ ಕಟ್ಟಿ ಅವುಗಳನ್ನು ಹಾಳು ಮಾಡುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಕೆಲವು ಕಡೆ ಕಟೌಟ್‌ಗಳ ಪಾದಚಾರಿಗಳ ಮೇಲೆ ಬಿದ್ದ ಘಟನೆಯೂ ನಡೆದಿರುವುದು ಬೆಳಕಿಗೆ ಬಂದಿವೆ.
ಪುರಸಭೆ ಹೊಣೆ: ಫ್ಲೆಕ್ಸ್, ಬ್ಯಾನರ್‌ಗಳಿಗೆ ಕಡಿವಾಣ ಹಾಕಿ ಪಟ್ಟಣದ ಸೌಂದರ್ಯ ಕಾಪಾಡುವುದು ಪುರಸಭೆ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳ ಹೊಣೆ. ಆ ಕೆಲಸ ಇಲ್ಲಿ ಆಗುತ್ತಿಲ್ಲ ಎಂಬುದು ನಾಗರಿಕರು ದೂರಿದ್ದಾರೆ.
ಕರ್ನಾಟಕ ಪೌರ ನಿಗಮಗಳ ಕಾಯ್ದೆ ಫ್ಲೆಕ್ಸ್ ಬ್ಯಾನರ್‌ಗಳನ್ನು ಎಲ್ಲೆಂದರಲ್ಲಿ ಹಾಕುವ ಮೂಲಕ ನಗರದ ಸೌಂದರ್ಯವನ್ನು ಹಾಳುಮಾಡಿದಲ್ಲಿ ಅಂತಹವರ ವಿರುದ್ಧ ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯ್ದೆ-1981 ಕಲಂ-3ರ ಅನ್ವಯ ಪ್ರಕರಣ ದಾಖಲಿಸಬಹುದಾಗಿದೆ. ಈ ಕಾಯ್ದೆ ಪ್ರಕಾರ ಆರು ತಿಂಗಳು ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡು ರೀತಿಯ ದಂಡನೆ ವಿಧಿಸಲು ಅವಕಾಶವಿರುತ್ತದೆ. ಆದರೆ ಪುರಸಭೆ ನಿಗದಿಪಡಿಸಿದ ಸ್ಥಳದಲ್ಲಿ ಅನುಮತಿ ಪಡೆದು ಹೋರ್ಡಿಂಗ್ ಹಾಕಿ ಶುಲ್ಕ ತುಂಬಿ ನಿರ್ದಿಷ್ಟ ಅವಧಿಗೆ ಜಾಹೀರಾತು ಫಲಕಗಳ ಹಾಕಬಹುದಾಗಿದೆ.
ಫ್ಲೆಕ್ಸ್ ಹಾಗೂ ಬ್ಯಾನರ್‌ನಿಂದ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಿದೆ. ಅಲ್ಲದೇ ರಸ್ತೆ ಎರಡು ಕಡೆಯ ವ್ಯಾಪಾರಸ್ಥರ ಮಳಿಗೆಗಳಿಗೂ ಅಡ್ಡಿಯಾಗಿವೆ. ಇದರಿಂದ ನಮ್ಮ ಅಂಗಡಿ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ವ್ಯಾಪಾರಿಗಳು ತಮ್ಮ ಸಂಕಟ ತೋಡಿಕೊಂಡಿದ್ದಾರೆ.
ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿರುವ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ರಸ್ತೆ ವಿಭಜಕದ ಗ್ರಿಲ್‌ಗಳಿಗೆ ಫ್ಲೆಕ್ಸ್ ಬ್ಯಾನರ್‌ನ ಕಂಬಗಳನ್ನು ಕಟ್ಟುತ್ತಿದ್ದರಿಂದ ಗ್ರಿಲ್‌ಗಳಿಗೆ ಧಕ್ಕೆಯಾಗುತ್ತದೆ. ಕೆಲವು ಕಡೆ ಗ್ರಿಲ್‌ಗಳು ಬಾಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪುರಸಭೆಗೆ ಪತ್ರ ಬರೆದಿದ್ದಾರೆ. ಆದರೂ ಪುರಸಭೆಯಿಂದ ಯಾವುದೇ ಕ್ರಮ ಆಗಿಲ್ಲ.
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ರಸ್ತೆ ವಿಭಜಕದ ಗ್ರಿಲ್‌ಗಳಿಗೆ ಕಟ್ಟುತ್ತಿದ್ದರಿಂದ ಯಾವಾಗ ಯಾರ ಮೇಲೆ ಬೀಳುತ್ತವೆ ಎಂಬ ಆತಂಕ ಇದೆ. ಪುರಸಭೆ ಈ ಬಗ್ಗೆ ಕ್ರಮ ಕೈಗೊಂಡು ಅನಧಿಕೃತ ಫ್ಲೆಕ್ಸ್ ಹಾವಳಿಗೆ ಕಡಿವಾಣ ಹಾಕಬೇಕುಮಲ್ಲಿಕಾರ್ಜುನ ಪಾದಚಾರಿ
ಪಟ್ಟಣದಲ್ಲಿ ವಿವಿಧೆಡೆ ಅನಧಿಕೃತ ಫೆಕ್ಸ್ ಬ್ಯಾನರ್‌ಗಳನ್ನು ಹಾಕಲಾಗಿದ್ದು ಅವುಗಳನ್ನು ತೆರವುಗೊಳಿಸಲಾಗುವುದು- ನರಸರೆಡ್ಡಿ ಮುಖ್ಯಾಧಿಕಾರಿ ಪುರಸಭೆ ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.