ADVERTISEMENT

ಜೆಜೆಎಂ ಕಾಮಗಾರಿ ಕಳಪೆಯಾದ ಬಗ್ಗೆ ದೂರು; ತನಿಖಾ ತಂಡ ರಚನೆಗೆ ಶಾಸಕ ಬಾದರ್ಲಿ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:06 IST
Last Updated 6 ಮೇ 2025, 14:06 IST
<div class="paragraphs"><p>ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು</p></div>

ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು

   

ಸಿಂಧನೂರು: ‘ತಾಲ್ಲೂಕಿನಲ್ಲಿ ಮೂರು ಹಂತದಲ್ಲಿ ನಡೆದಿರುವ ಜಲಜೀವನ್ ಮಿಷನ್‌ನ ಎಲ್ಲ ಕಾಮಗಾರಿಗಳು ಕಳಪೆಯಾಗಿರುವ ಕುರಿತು ಅನೇಕ ದೂರುಗಳು ಬಂದಿವೆ. ಹೀಗಾಗಿ ಬೇರೆ ಜಿಲ್ಲೆಯ ಓರ್ವ ಎಇಇ, ಇಬ್ಬರು ಜೆಇ ಒಳಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದ ತಂಡ ರಚಿಸಿ ಸಮಗ್ರ ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪುರಗೆ ಸೂಚಿಸಿದರು.

ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಸಾಮಾನ್ಯ ಸಭೆಯಲ್ಲಿ ಎಂಎಲ್‍ಸಿ ಬಸನಗೌಡ ಬಾದರ್ಲಿ, ‘ಜೆಜೆಎಂ ಕಾಮಗಾರಿಗಳ ತನಿಖೆ ಕುರಿತು ಪತ್ರ ಬರೆದಿದ್ದೆ. ಆ ಕುರಿತು ತನಿಖೆಯ ವರದಿ ಎಲ್ಲಿದೆ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ಕೊಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಿಜಯಲಕ್ಷ್ಮಿ ಹಾಗೂ ಪಂಚಾಯತ್ ರಾಜ್ ಎಂಜನಿಯರಿಂಗ್ ಉಪವಿಭಾಗದ ಎಇಇ ಧನರಾಜ್ ತಡವರಿಸಿದರು.

ADVERTISEMENT

‌ಆಗ ಶಾಸಕ ಹಂಪನಗೌಡ ‘ಮೂರು ಹಂತದ ಜೆಜೆಎಂ ಕಾಮಗಾರಿಗೆ ₹100ಕೋಟಿಯಿಂದ ₹120 ಕೋಟಿ ಖರ್ಚು ಮಾಡಲಾಗಿದೆ. ಆದರೆ ಗ್ರಾಮಗಳಲ್ಲಿ ಮೀಟರ್ ಅಳವಡಿಸಿ ಮನೆ-ಮನೆಗೆ ಪೂರೈಕೆ ಮಾಡುತ್ತಿಲ್ಲ. ಬಹಳಷ್ಟು ಕಡೆ ಕಾಮಗಾರಿ ಕಳಪೆಯಾಗಿದೆ’ ಎಂದಾಗ ಎಇಇ ಧನರಾಜ್, ‘ವಲ್ಕಂದಿನ್ನಿ ಹಾಗೂ ಯಾಪಲಪರ್ವಿಯಲ್ಲಿ ಮನೆ-ಮನೆಗೆ ನೀರು ಪೂರೈಕೆ ಆಗುತ್ತಿದೆ’ ಎಂದು ತಿಳಿಸಿದರು.

ತಕ್ಷಣವೇ ಶಾಸಕರು ಆ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯನ್ನು ಎಬ್ಬಿಸಿ ಕೇಳಿದಾಗ ಸಮರ್ಪಕವಾಗಿ ಕೆಲಸ ನಡೆದಿಲ್ಲ. ನೀರು ಬರುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನು ಗಮನಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ ‘ತಾ.ಪಂ ಸಹಾಯಕ ನಿರ್ದೇಶಕರು ಶೀಘ್ರ ಈ ಎರಡು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ ಅವರು, ಜೆಜೆಎಂ ಕಾಮಗಾರಿಗಳ ಸಮಗ್ರ ತನಿಖೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಒಂದು ತಿಂಗಳಲ್ಲಿ ವರದಿ ಪಡೆಯುವುದಾಗಿ’ ಸಭೆಯಲ್ಲಿ ಎಂಎಲ್‍ಎ, ಎಂಎಲ್‍ಸಿಗೆ ಗಮನಕ್ಕೆ ತಂದರು.

ಕೆಆರ್‌ಡಿಸಿಎಲ್‌ ಜೆಇ ಕಾಶಿನಾಥ ಅವರು ಗಂಗಾನಗರ ರಸ್ತೆಯ ಸಿಸಿ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ‌

ಕೆಆರ್‌ಡಿಸಿಎಲ್‌ಜೆಇ ಕೈಗೊಂಡಿರುವ ಶೇ60 ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ. ಅತ್ಯಂತ ಭ್ರಷ್ಟ ಇಲಾಖೆ ಎಂದರೆ ಅದು ಲ್ಯಾಂಡ್ ಆರ್ಮಿ. ಈ ಕುರಿತು ನಾವು ತನಿಖೆ ಮಾಡಿಸುವ ಮುಂಚೆಯೇ ಮೇಲಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಂಎಲ್‍ಸಿ ಬಸನಗೌಡ ಬಾದರ್ಲಿ ಹೇಳಿದರು. ‌‘ಅಧಿಕಾರಿಗಳು ಯೋಜನೆ ಪ್ರಕಾರ ಗುಣಮಟ್ಟದ ಕೆಲಸ ಮಾಡಿ, ಯಾರಾದ್ರೂ ಬಂದು ತನಿಖೆ ಮಾಡಿಕೊಳ್ಳಲಿ’ ಎಂದು ಹಂಪನಗೌಡ ಬಾದರ್ಲಿ ಟಾಂಗ್ ಕೊಟ್ಟರು. ಇದಕ್ಕೆ ಬಸನಗೌಡ, ‘ಥರ್ಡ್ ಪಾರ್ಟಿಯಿಂದ ತನಿಖೆ ಮಾಡಿಸಿದಾಗ ಕಾಮಗಾರಿ ಕಳಪೆ ಆಗಿರುವುದು ಸಾಬೀತಾಗಿವೆ. ನಾನೇನು ಸಭೆಗೆ ತಪ್ಪು ಮಾಹಿತಿ ನೀಡಲು ಬಂದಿಲ್ಲ’ ಎಂದು ಆಕ್ರೋಶಭರಿತವಾಗಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಾ ತಮ್ಮ ಇಲಾಖೆ ವ್ಯಾಪ್ತಿಯ ವಸತಿನಿಲಯಗಳ ಸ್ಥಿತಿಗತಿ ಬಗ್ಗೆ ಸಭೆಗೆ ಮಾಹಿತಿ ನೀಡಿದರು. 

‘ಎಲ್ಲ ಹಾಸ್ಟೆಲ್‍ಗಳ ಸ್ಥಿತಿ-ಗತಿ ಬಗ್ಗೆ ಪರಿಶೀಲಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು’ ಎಂದು ಬಸನಗೌಡ ಬಾದರ್ಲಿ ಸೂಚಿಸಿದರು. ಆಗ ಶಶಿಕಾಂತ ಶಿವಪುರೆ, ‘ದಾಖಲಾತಿ ಇಲ್ಲದ ಯುವಕರಿಗೆ ಹಾಸ್ಟೆಲ್‍ನಲ್ಲಿ ವಾಸ್ತವ್ಯ ಮತ್ತು ಊಟಕ್ಕೆ ಅವಕಾಶ ಕೊಡಬಾರದು’ ಎಂದರು. ಹಾಸ್ಟೆಲ್‍ನಲ್ಲಿ ಏನೇಯಾದರೂ ಲಿಖಿತ ರೂಪದಲ್ಲಿ ಪ್ರಕರಣ ದಾಖಿಲಿಸಬೇಕು. ಇಲ್ಲದಿದ್ದರೆ ನೀವೇ ಹೊಣೆ ಎಂದು ಶಾಸಕರು ಎಚ್ಚರಿಸಿದರು.

ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ದುರುಗಪ್ಪ ಡೊಳ್ಳಿನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
 

ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿರುವುದು
‘ಕುಡಿಯುವ ನೀರಿನ ಸಮಸ್ಯೆಗೆ ಪಿಡಿಒಗಳೇ ನೇರ ಹೊಣೆ’
ಸಭೆಯ ಆರಂಭದಲ್ಲಿ ಒಂದೊಂದೇ ಗ್ರಾ.ಪಂ ಪಿಡಿಒಗಳನ್ನು ಎಬ್ಬಿಸಿ ಪಂಚಾಯಿತಿ ವ್ಯಾಪ್ತಿರುವ ಕೆರೆಗಳಲ್ಲಿರುವ ನೀರಿನ ಸಂಗ್ರಹ ಬೋರ್‍ವೆಲ್ ಆರ್‌ೊ ಪ್ಲಾಂಟ್‍ಗಳ ಕುರಿತು ಶಾಸಕ ಹಂಪನಗೌಡ ಬಾದರ್ಲಿ ಮಾಹಿತಿ ಪಡೆದರು. ಕೆಲ ಪಿಡಿಓಗಳು ಶೇ35 ಶೇ60 ಶೇ80 ರಷ್ಟು ನೀರು ಕೆರೆಗಳಲ್ಲಿ ಸಂಗ್ರಹವಿದೆ ಎಂದರು. ಜೂನ್ ಅಂತ್ಯದವರೆಗೂ ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಸಮಸ್ಯೆಯಾದರೆ ನಿಮ್ಮನ್ನೇ ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜೂನ್ ಮೊದಲ ಆರಂಭದಲ್ಲಿ ಕಾಲುವೆಗೆ ನೀರು ಹರಿಸಿದರೆ ಕೆರೆಯನ್ನು ತುಂಬಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಎಲ್ಲ ಪಿಡಿಒಗಳು ಶಾಸಕರಿಗೆ ತಿಳಿಸಿದರು. ಗಾಂಧಿನಗರ ಪಿಡಿಒ ಯಾರೆಂದು ಶಾಸಕರು ಕೇಳಿದಾಗ ಸಭೆಯಲ್ಲಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಶಾಸಕರು ಸಭೆಗೆ ಯಾರು ಬಂದಿದ್ದಾರೆಂದು ಹಾಜರಾತಿ ತೆಗೆದುಕೊಳ್ಳುವುದಿಲ್ಲವೇ ಎಂದು ದೂರಿದರು. ನಂತರ ಸಭೆಯ ಮಧ್ಯದಲ್ಲಿ ಬಂದ ಗಾಂಧಿನಗರ ಪಿಡಿಒ ಹನೀಫ್ ಅವರನ್ನು ‘ಎಲ್ಲಿಗೆ ಹೋಗಿದೆಪ್ಪ’ ಎಂದು ಶಾಸಕರು ಕೇಳಿದಾಗ ಗಾಂಧಿನಗರ ವಾರ್ಡ್ ನಂ.1 ರಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿತ್ತು. ಅಲ್ಲಿಗೆ ಹೋಗಿದ್ದೆ ಎಂದು ಹೇಳಿ ಸಭೆಯಲ್ಲಿ ಕುಳಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.