ADVERTISEMENT

ತೊಗರಿ ಖರೀದಿ ಕೇಂದ್ರ ಆರಂಭಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 15:29 IST
Last Updated 23 ಡಿಸೆಂಬರ್ 2019, 15:29 IST
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೊಗರಿ ಖರೀದಿ ಸಂಬಂಧವಾಗಿ ಚರ್ಚಿಸಲು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಜರುಗಿತು
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೊಗರಿ ಖರೀದಿ ಸಂಬಂಧವಾಗಿ ಚರ್ಚಿಸಲು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಜರುಗಿತು   

ರಾಯಚೂರು: ತೊಗರಿ ಖರೀದಿಗೆ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ರಂಗನಾಥ ಅವರಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಖರೀದಿ ಮಾಡುವ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆ ಅಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಸಲು ಈಗಾಗಲೇ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ₹5,800 ಹಾಗೂ ರಾಜ್ಯ ಸರ್ಕಾರ ₹300 ಸೇರಿದಂತೆ ಒಟ್ಟು 1 ಕ್ವಿಂಟಾಲ್‌ಗೆ ₹6100 ಬೆಂಬಲ ಬೆಲೆ ನೀಡಿ ತೊಗರಿ ಖರೀದಿಸಬೇಕಿದೆ. ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯಾದ್ಯಂತ ಆರಂಭಿಸಲಾಗುವ ತೊಗರಿ ಖರೀದಿ ಕೇಂದ್ರಗಳಲ್ಲಿ 2020 ಜನೇವರಿ 9 ರ ಒಳಗೆ ಬೆಂಬೆಲ ಬೆಲೆಗೆ ತೊಗರಿ ಮಾರಾಟ ಮಾಡುವ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಡಿಸೆಂಬರ್‌ 24 ರ ಮಂಗಳವಾರದಿಂದಲೇ ಪ್ರಾರಂಭಿಸುವಂತೆ ನಿರ್ದೇಶನ ನೀಡಿದರು.

ADVERTISEMENT

ರೈತರು ಪಹಣಿ, ಮೊಬೈಲ್ ಹಾಗೂ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಹಾಗೂ ಆಧಾರ್ ದೃಢೀಕರಣವನ್ನು ಸಂಬಂಧಿಸಿದ ತೊಗರಿ ಖರೀದಿ ಕೇಂದ್ರಗಳಲ್ಲಿ ಸಲ್ಲಿಸಬೇಕು. ಪ್ರತಿ ರೈತರಿಂದ 10 ಕ್ವಿಂಟಾಲ್ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಲಾಗುವುದು.

ಈ ಬಾರಿ ತೊಗರಿ ಖರೀದಿಗೆ ಬೇಡಿಕೆ ಹೆಚ್ಚಿರುವುದರಿಂದ ಕಳೆದ ವರ್ಷ ಆರಂಭಿಸಿದ್ದ ಕೇಂದ್ರಗಳಲ್ಲದೆ, ಹೊಸದಾಗಿ ಸಿಂಧನೂರು ತಾಲ್ಲೂಕಿನ ಗುಡುದೂರು, ಜವಳಗೇರಾ, ಲಿಂಗಸೂಗೂರು ತಾಲ್ಲೂಕಿನ ಮಾವಿನ ಬಾವಿ, ಗೌಡೂರು, ಬಯ್ಯಾಪೂರು, ನಾಗಾಲಾಪೂರ, ಮಸ್ಕಿ ತಾಲ್ಲೂಕಿನ ಮೆದಕಿನಾಳ ಹಾಗೂ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳದಲ್ಲಿ 8 ಹೊಸ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಸಹಕಾರ ಸಂಘಗಳ ಉಪನಿಬಂಧಕರು, ಮಾರ್ಕ್ ಫೆಡರೇಷನ್‌ನ ವ್ಯವಸ್ಥಾಪಕರು, ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘ (ಪಿಎಪಿಸಿಎಂಎಸ್), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ರೈತರ ಉತ್ಪಾದಕ ಸಂಘಗಳ ಮುಖ್ಯಸ್ಥರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.