
ಸಿಂಧನೂರು: ವಿದ್ಯಾರ್ಥಿಗಳು ಸತ್ವಯುತ ಆಹಾರವನ್ನು ಬಳಸಿದರೆ ಉತ್ತಮ ಆರೋಗ್ಯ ಲಭಿಸುತ್ತದೆ. ಬೆಂಕಿಯನ್ನು ಬಳಸದೇ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಸೇವಿಸುವುದರಿಂದ ಆರೋಗ್ಯ ಭಾಗ್ಯ ಹೆಚ್ಚುತ್ತದೆ ವಿದ್ಯಾ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ವೈ.ನರೇಂದ್ರನಾಥ ಹೇಳಿದರು.
ತಾಲ್ಲೂಕಿನ ಬೂತಲದಿನ್ನಿ ಕ್ಯಾಂಪಿನಲ್ಲಿರುವ ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ಶನಿವಾರ 2023–24ನೇ ಸಾಲಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬೆಂಕಿ ಇಲ್ಲದೆ ಅಡುಗೆ ತಯಾರಿಸಿರುವುದು ಒಳ್ಳೆಯ ಬೆಳವಣಿಗೆ. ಬಿರುಬೇಸಿಗೆಯಲ್ಲಿ ಇಂತಹ ಆಹಾರವನ್ನು ತಯಾರು ಮಾಡುವುದರಿಂದ ಬೆಂಕಿಯ ಬೇಗೆಯಿಂದ ದೂರವಾಗಬಹುದು ಎಂದು ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಪಠ್ಯಕ್ರಮವನ್ನು ಅರಿತು ಸ್ವತಹ ವಿದ್ಯಾರ್ಥಿಗಳೇ ಅಡುಗೆ ಮಾಡುವುದನ್ನು ಕಲಿತುಕೊಳ್ಳುವುದರಿಂದ ಅವರಿಗೆ ‘ಬಾಣಸಿಗ’ ಬ್ಯಾಡ್ಜ್ ದೊರೆಯುತ್ತದೆ. ಇದು ರಾಜ್ಯ ಪುರಸ್ಕಾರ ಪರೀಕ್ಷೆಗೆ ಅವಶ್ಯಕವಾಗಿದೆ ಎಂದರು.
ವಿದ್ಯಾ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಲಕ್ಷ್ಮಿ, ಸಹ ಶಿಕ್ಷಕರಾದ ಸಂತೋಷ, ರಘುಕುಮಾರ್, ಕ್ಲಬ್ ಮಾಸ್ಟರ್ ದೀಪಾಂಕರ, ಗೈಡ್ ಕ್ಯಾಪ್ಟನ್ ಆರತಿ, ಪಾಲಕರಾದ ವೆಂಕೋಬ ಕೋಳಬಾಳ, ಶಂಕರಗೌಡ ಕಲ್ಲೂರು, ಮಹಾಂತೇಶ ಇದ್ದರು.
ಮೊಳಕೆ ಒಡೆದ ಮಡಕೆ ಕಾಳುಗಳ ಕೋಸಂಬರಿ, ನಿಂಬೆಹಣ್ಣು ಶರಬತ್, ಮಸಾಲಾ ಮಜ್ಜಿಗೆ, ಅವಲಕ್ಕಿ ಮೊಸರು, ಮಂಡಾಳ ಗಿರಮಿಟ್, ವಿವಿಧ ರೀತಿಯ ಹಣ್ಣಿನ ಸಾಲಾಡ್ ಹೀಗೆ ವಿದ್ಯಾರ್ಥಿಗಳು ಬೆಂಕಿ ಬಳಸದೇ ಹಲವಾರು ಆಹಾರ ಪದಾರ್ಥಗಳನ್ನು ಸಿದ್ದಪಡಿಸಿದ್ದು ಎಲ್ಲರ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.