ADVERTISEMENT

ಉತ್ತಮ ಜೀವನ ಕಟ್ಟಿಕೊಡುವ ಐಟಿಐ

ಶೈಕ್ಷಣಿಕ ಮಾರ್ಗದರ್ಶಿ : ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಹಕಾರಿ

ಪಿ.ಹನುಮಂತು
Published 4 ಮೇ 2019, 20:00 IST
Last Updated 4 ಮೇ 2019, 20:00 IST
ರಾಯಚೂರಿನ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ) ಕಾಲೇಜು
ರಾಯಚೂರಿನ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ) ಕಾಲೇಜು   

ರಾಯಚೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಕೂಡ ಐಟಿಐ ಕೋರ್ಸ್‌ ಅಧ್ಯಯನ ಮಾಡಿ ಕೈಗಾರಿಕೆಗಳಲ್ಲಿ ಕೆಲಸ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬಹುದು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದವರೆಲ್ಲ ತಮ್ಮ ಇಚ್ಚೆಯ ಕೋರ್ಸ್‌ ಹಾಗೂ ಕಾಲೇಜು ಆಯ್ದುಕೊಳ್ಳುತ್ತಾರೆ. ಕಡಿಮೆ ಅಂಕಪಡೆದರೂ ಕೂಡ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಐಟಿಐ ಕೋರ್ಸ್‌ ಉತ್ತಮ ಅವಕಾಶವಾಗಿದೆ. ಒಂದು ಅಥವಾ ಎರಡು ವರ್ಷದ ಐಟಿಐ ಕೋರ್ಸ್‌ ಮುಗಿಸಿದರೆ ಸಾಕು ಉದ್ಯೋಗಾವಕಾಶ ಪಡೆಯಬಹುದು.

ಐಟಿಐ ಕೋರ್ಸಿನ ಶಿಕ್ಷಣ ನೀಡಲು ಜಿಲ್ಲೆಯಲ್ಲಿ ಆರು ಸರ್ಕಾರಿ ಕಾಲೇಜು, ಎರಡು ಅನುದಾನಿತ ಹಾಗೂ 25 ಖಾಸಗಿ ಕಾಲೇಜುಗಳು ಸನ್ನದ್ಧವಾಗಿವೆ. ಜಿಲ್ಲೆಯ ಐಟಿಐನಲ್ಲಿ ವೆಲ್ಡರ್‌, ಕೊಪಾ, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್‌, ಫಿಟ್ಟರ್, ಟರ್ನರ್, ಮೆಕಾನಿಸ್ಟ್, ಎಂಎಂವಿ ಹಾಗೂ ಎಂಆರ್‌ ಮತ್ತು ಎಸಿ ಒಟ್ಟು 9 ಕೋರ್ಸ್‌ಗಳಿವೆ. ಕೊಪಾ ಮತ್ತು ವೆಲ್ಡರ್‌ ಒಂದು ವರ್ಷದ ಕೋರ್ಸಾಗಿದ್ದು, ಉಳಿದ ಏಳು ಕೋರ್ಸ್‌ಗಳು ಎರಡು ವರ್ಷದ್ದಾಗಿವೆ.

ADVERTISEMENT

ಐಟಿಐ ಕಾಲೇಜುಗಳಲ್ಲಿ ಒಂದೊಂದು ಕೋರ್ಸ್‌ಗೆ ಒಂದೊಂದು ಘಟಕ ಮಾಡಲಾಗಿದ್ದು, ಒಂದು ಘಟಕದಲ್ಲಿ 21 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತದೆ. ಎರಡು ಘಟಕಗಳ ಪರವಾನಿಗೆಯಿರುವ ಕಾಲೇಜಿನಲ್ಲಿ ಒಂದು ಕೋರ್ಸಿನಲ್ಲಿ 42 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ.

ಐಟಿಐನಲ್ಲಿ ಎಲ್ಲ ಕೋರ್ಸುಗಳಿಗೆ ತಲಾ ಐದು ವಿಷಯಗಳಿವೆ. ಯಾವುದೇ ಕೋರ್ಸ್‌ಗಾದರೂ ಟ್ರೇಡ್‌ ಥೇರಿ, ಟ್ರೇಡ್‌ ಪ್ರಾಕ್ಟಿಕಲ್‌, ವರ್ಕ್‌ಶಾಪ್‌ ಕ್ಯಾಲುಕ್ಯುಲೇಶನ್‌, ಎಂಜಿನಿಯರಿಂಗ್‌ ಡ್ರಾಯಿಂಗ್‌ ಹಾಗೂ ಎಂಪ್ಲಾಯಿಮೆಂಟ್‌ ಸ್ಕಿಲ್ಸ್‌್ ವಿಷಯಗಳನ್ನು ಅಧ್ಯಯನ ಮಾಡಬೇಕು. ಎರಡು ವರ್ಷದ ಕೋರ್ಸ್ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಡಿಪ್ಲೋಮಾದಲ್ಲಿ ಒಂದು ವರ್ಷದ ವಿನಾಯಿತಿ ದೊರೆಯಲಿದೆ. ಲ್ಯಾಟ್ರಲ್‌ ಎಂಟ್ರಿ ಮೂಲಕ ನೇರವಾಗಿ ಡಿಪ್ಲೊಮಾ ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದು.

ಸರ್ಕಾರಿ ಕಾಲೇಜಿನಲ್ಲಿ ₹ 1200 ಶುಲ್ಕ ಇದ್ದರೆ ಅನುದಾನಿತ ಕಾಲೇಜಿನಲ್ಲಿ ₹2400 ಶುಲ್ಕ ನಿಗದಿ ಮಾಡಲಾಗಿದೆ. ಆದರೆ, ಖಾಸಗಿ ಕಾಲೇಜಿಗಳ ಶುಲ್ಕ ನಿಖರವಿಲ್ಲ.

ಸರ್ಕಾರಿ ಕಾಲೇಜಿನಲ್ಲಿ ಸೌಲಭ್ಯಗಳು:

ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನಕೂಲಗಳು ಲಭ್ಯವಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ, ಕಿಟ್‌ ಬ್ಯಾಗ್‌, ಲ್ಯಾಪ್‌ಟಾಪ್‌, ಶೂ ಹಾಗೂ ವಿದ್ಯಾರ್ಥಿ ವೇತನವೂ ದೊರೆಯಲಿದೆ. ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳಿಗೆ ಟೂಲ್‌ ಕಿಟ್‌ ಸಹ ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಅನ್ಯ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಅಧ್ಯಯನ ಮಾವುದರಿಂದ ಖಾಸಗಿ ಕಾಲೇಜಿನಲ್ಲಿ ದೊರೆಯದ ಪ್ರಯೋಗದ ಉಪಕರಣಗಳ ಲಭ್ಯತೆ ಮತ್ತು ತ್ವರಿತ ಉದ್ಯೋಗವಕಾಶ ಪಡೆಯಲು ಅನುಕೂಲವಾಗಲಿದೆ.

ಕಾಲೇಜುಗಳ ವಿವರ:

ರಾಯಚೂರು, ಮಾನ್ವಿ, ದೇವದುರ್ಗ, ಲಿಂಗಸುಗೂರು, ಮುದಗಲ್‌ ಮತ್ತು ಮಸ್ಕಿಯಲ್ಲಿ ಸರ್ಕಾರಿ ಐಟಿಐ ಕಾಲೇಜುಗಳಿವೆ. ರಾಯಚೂರಿನ ಎಎಂಇ ಫಾರ್ಮಸಿ ಹಾಗೂ ಸಿಂಧನೂರಿನ ವಳಬಳ್ಳಾರಿ ತಾತನವರ ಕಾಲೇಜು ಅನುದಾನಿತ ಕಾಲೇಜುಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.