ರಾಯಚೂರು: ‘ಜಗನ್ನಾಥದಾಸರು ಜಾತಿ, ಮತ ಪಂಥ ಎನ್ನದೆ ಜನಸಾಮಾನ್ಯರಿಗೆ ಹಾಗೂ ದೀನ ದಲಿತರಿಗೆ ಹರಿದಾಸ ದೀಕ್ಷೆ ನೀಡಿದ್ದರು. ಹರಿದಾಸ ಸಾಹಿತ್ಯದ ಪರಂಪರೆಯನ್ನು ಹಾಗೂ ಭಕ್ತಿ ಪಂಥವನ್ನು ಬೆಳೆಸಿದ ಶ್ರೇಷ್ಠ ಹರಿದಾಸರಾಗಿದ್ದಾರೆ’ ಎಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಹೇಳಿದರು.
ಇಲ್ಲಿಯ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಗುರು ಜಗನ್ನಾಥ ದಾಸರ 107ನೇ ಮಧ್ಯಾರಾದನೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
‘ರಾಘವೇಂದ್ರ ಗುರು ಸಾರ್ವಭೌಮರ ಪರಮ ಭಕ್ತರಾದ ಇವರು ರಾಯರ ಕುರಿತು 200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಎರಡು ಗ್ರಂಥ, ಕನ್ನಡದಲ್ಲಿ 50 ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ್ದಾರೆ’ ಎಂದು ಹೇಳಿದರು.
ಕಲಾವಿದ ಸುರೇಶ ಕಲ್ಲೂರ್ ಕಾರ್ಯಕ್ರಮ ಉದ್ಘಾಟಿಸಿದರು. ದಾಸರ ಭಾವಚಿತ್ರಕ್ಕೆ ಅರ್ಚಕರಾದ ಶ್ರೀಧರಾಚಾರ್ಯ ಮಂಗಲಿ ಅವರು ಪೂಜೆ ಸಲ್ಲಿಸಿದರು. ಪತ್ರಕರ್ತ ಜಯಕುಮಾರ ದೇಸಾಯಿ ಕಾಡ್ಲೂರು ಮಾತನಾಡಿದರು.
ಮಾರುತಿ ಭಜನಾ ಮಂಡಳಿಯ ಅಧ್ಯಕ್ಷ ವೆಂಕಟೇಶ್ ಕೋಲಾರ, ಕೃಷ್ಣಮೂರ್ತಿ ಹುಣಸಿಗಿ, ನರಸಿಂಹ, ನಿವೃತ್ತ ಶಿಕ್ಷಕಿ ನಾಗರತ್ನ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.