ADVERTISEMENT

ದೇವದುರ್ಗ: ಪಟ್ಟಣ ಪಂಚಾಯಿತಿಯಾಗಿ ಜಾಲಹಳ್ಳಿ

ದೇವದುರ್ಗ ತಾಲ್ಲೂಕಿನಲ್ಲಿಯೇ ಅತಿದೊಡ್ಡ ಗ್ರಾಮ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 16:30 IST
Last Updated 29 ನವೆಂಬರ್ 2020, 16:30 IST
ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ
ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ   

ಜಾಲಹಳ್ಳಿ: ಮೂರು ದಶಕಗಳಿಂದ ದೇವದುರ್ಗ ತಾಲ್ಲೂಕಿನಲ್ಲಿಯೇ ಅತಿದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಜಾಲಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.

2011ರ ಜನ ಗಣತಿಯ ಪ್ರಕಾರ ಪಟ್ಟಣದಲ್ಲಿ 13 ಸಾವಿರ ಜನಸಂಖ್ಯೆ ಹೊಂದಿದೆ. ಸದ್ಯ ಸುಮಾರು 11 ಸಾವಿರ ಜನರು ಮತದಾರರ ಪಟ್ಟಿಯಲ್ಲಿದ್ದಾರೆ. ಗ್ರಾಪ ಪಂಚಾಯಿಗೆ ಸ್ಥಳೀಯ ಕರ ವಸೂಲಾತಿಯಿಂದ ವರ್ಷಕ್ಕೆ ಸುಮಾರು ₹ 40 ಲಕ್ಷ ಸಂಗ್ರಹ ಆಗುತ್ತಿತ್ತು. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿದ ನಂತರ ವಾರ್ಷಿಕ ₹ 5 ಕೋಟಿಯಷ್ಟು ನೇರ ಕರ ಸಂಗ್ರಹ ಆಗಲಿದೆ. ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ಪರಿಷ್ಕೃತ ಕರಗಳ ವಸೂಲಾತಿಯಿಂದ ಇನ್ನು ಸ್ವಲ್ಪ ಆದಾಯ ಪಟ್ಟಣ ಪಂಚಾಯಿತಿಗೆ ಸಿಗಲಿದೆ. ಸ್ಥಳೀಯ ಕಾಮಗಾರಿಗಳಿಗೆ ಮತ್ತು ಅಭಿವೃದ್ಧಿಗೆ ಹಣದ ಕೊರತೆ ಕಾಡುವುದಿಲ್ಲ ಎನ್ನುವುದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನರಸಣ್ಣ ನಾಯಕ ಅವರ ಅಭಿಪ್ರಾಯ.

ಪಟ್ಟಣ ಪಂಚಾಯಿತಿ ಆಗುರುವುದರಿಂದ ಮುಂದಿನ ದಿನಗಳಲ್ಲಿ ನರೇಗಾ ಯೋಜನೆ, ವಿದ್ಯಾರ್ಥಿಗಳಿಗೆ ಗ್ರಾಮೀಣ ಅಭ್ಯರ್ಥಿ ಸೌಲಭ್ಯ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಕೈಬಿಟ್ಟು ಹೋಗಲಿವೆ. ಈ ಹಿಂದೆ ಜನತೆಗೆ ಯಾವುದೇ ಸಮಸ್ಯೆ ಉಂಟಾದರೆ, ತಕ್ಷಣವೇ ಅಭಿವೃದ್ಧಿ ಅಧಿಕಾರಿಯನ್ನು ಸ್ಥಳಕ್ಕೆ ಕರೆತಂದು ಸಮಸ್ಯೆ ಬಗೆಹರಿಸಲು ತುಂಬಾ ಸರಳವಾಗಿತ್ತು. ಇನ್ನು ಮುಂದೆ ಕಷ್ಟ ಸಾದ್ಯವಾಗಲಿದೆ.

ADVERTISEMENT

ಪಟ್ಟಣ ಪಂಚಾಯಿತಿ ಮಾಡಲು ಗ್ರಾಮದಲ್ಲಿ ಕೆಲವು ಬಿಜೆಪಿ ಮುಖಂಡರು ಮಾತ್ರ ಶಾಸಕರಿಗೆ ದುಂಬಾಲು ಬಿದ್ದಿರುವುದು ಸ್ವಷ್ಟವಾಗಿತ್ತು. ಶಾಸಕ ಕೆ.ಶಿವನಗೌಡ ನಾಯಕ ಅವರು ತಮ್ಮ ಸ್ವಗ್ರಾಮವನ್ನು ತಾಲ್ಲೂಕು ಕೇಂದ್ರವಾಗಿ ಸರ್ಕಾರದಿಂದ ಅನುಮೋದನೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಲಹಳ್ಳಿ ಕೂಡ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗಿತ್ತು. ಮುಂದಿನ ದಿನಗಳಲ್ಲಿ ಯಾವ ಮಟ್ಟದ ಪ್ರತಿಭಟನೆ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಶೀಘ್ರವೇ ಜಾಲಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.