
ರಾಯಚೂರು: ‘ಸರ್ವಜ್ಞ ಅವರು ಕನ್ನಡ ಸಾಹಿತ್ಯದ ಜನಪ್ರಿಯ ತ್ರಿಪದಿ ಕವಿ. ಸರಳ ತ್ರಿಪದಿಗಳ ಮೂಲಕ ಸಮಾಜ ಸುಧಾರಣೆ, ನೀತಿ, ಜೀವನದ ಸತ್ಯ ಮತ್ತು ಕಾಯಕದ ಮಹತ್ವವನ್ನು ಸಾರಿದ್ದಾರೆ’ ಎಂದು ಯರಮರಸ್‌ನ ನಿವೃತ್ತ ಪ್ರಾಂಶುಪಾಲ ವೈ. ಸುರೇಂದ್ರಬಾಬು ಕುಂಬಾರ ಹೇಳಿದರು.
ಇಲ್ಲಿಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ವಜ್ಞ ಅವರು ವಚನಗಳು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ. ಹರಿತವಾದ ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ ಮಾತನಾಡಿ, ‘ಸರ್ವಜ್ಞ ಅವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರು ಇಡೀ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ ಕವಿಯಾಗಿದ್ದಾರೆ’ ಎಂದರು.
‘ಸಮ ಸಮಾಜ ನಿರ್ಮಾಣ ಕುರಿತು ಜನತೆಗೆ ತಮ್ಮ ವಚನಗಳ ಮೂಲಕ ಸಂದೇಶ ನೀಡಿದ್ದಾರೆ. ಸಮಾಜ ಇನ್ನಷ್ಟು ಅಭಿವೃದ್ಧಿಯಾಗಲು ಸಮಾಜದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಪರಶುರಾಮ, ಸಮಾಜದ ಪ್ರಮುಖರಾದ ಶಿವರಾಜಪ್ಪ, ವೀರಭದ್ರಪ್ಪ, ಬಸವರಾಜ, ಶಿವಪ್ರಕಾಶ, ಭೀಮಪ್ಪ, ಲಕ್ಷ್ಮಿರೆಡ್ಡಿ, ತಿಮ್ಮಪ್ಪ, ಬಸವರಾಜ, ರಮೇಶ, ನರಸಿಂಗಪ್ಪ, ಸಾಯಿಬಾಬಾ ಉಪಸ್ಥಿತರಿದ್ದರು.
ಮೆರವಣಿಗೆ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂತಕವಿ ಸರ್ವಜ್ಞ ಅವರ ಭಾವಚಿತ್ರದ ಮೆರವಣಿಗೆಗೆ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗ ಮಂದಿರಕ್ಕೆ ಬಂದಿತು.
ಮುಖಂಡರಾದ ಕೆ.ಶಾಂತಪ್ಪ, ರಾಯಚೂರು ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ ವರ್ಮಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.