ADVERTISEMENT

ಶಿಕ್ಷಣದೊಂದಿಗೆ ಪರಿಸರ ಜ್ಞಾನದ ಅರಿವು

ಕನ್ನಾಪುರ ಹಟ್ಟಿ: ಜವಾಹರ್ ನವೋದಯ ವಿದ್ಯಾಲಯ

ಶರಣ ಪ್ಪ ಆನೆಹೊಸೂರು
Published 25 ಜೂನ್ 2020, 8:00 IST
Last Updated 25 ಜೂನ್ 2020, 8:00 IST
ಮುದಗಲ್ ಸಮೀಪದ ಕನ್ನಾಪುರ ಹಟ್ಟಿ ಜವಾಹರ್ ನವೋದಯ ವಿದ್ಯಾಲಯ
ಮುದಗಲ್ ಸಮೀಪದ ಕನ್ನಾಪುರ ಹಟ್ಟಿ ಜವಾಹರ್ ನವೋದಯ ವಿದ್ಯಾಲಯ   

ಮುದಗಲ್: ಸಮೀಪದ ಕನ್ನಾಪುರು ಹಟ್ಟಿ ಗ್ರಾಮದ ಹೊರ ವಲಯದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ಅಂಗಳದಲ್ಲಿ ಎತ್ತ ಕಣ್ಣು ಹಾಯಿಸದರೂ ಹಸಿರಿನ ಸಿರಿ ಕಾಣಸಿಗುತ್ತದೆ.

ಈ ವಿದ್ಯಾಲಯದ 24 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಇಲ್ಲಿ ವಿವಿಧ ಜಾತಿಯ ಸಾವಿರಕ್ಕೂ ಹೆಚ್ಚು ಗಿಡ ಮರಗಳು ಬೆಳೆದು ನಿಂತಿವೆ. ಈ ಗಿಡ ಮರಗಳಿಂದಲೇ ಶಾಲೆಯ ಆವರಣಕ್ಕೆ ಕಳೆ ಬಂದಿದೆ. ನಯನ ಮನೋಹರ ನೀಡುವ ಉದ್ಯಾನ, ವೈವಿಧ್ಯಮಯ ಹೂಬಳ್ಳಿಗಳ ಅನಾವರಣವೇ ಇಲ್ಲಿದೆ.

ವಿದ್ಯಾಲಯದಲ್ಲಿ ಜಿಲ್ಲೆಯ ಹಾಗೂ ಹರಿಯಾಣ ರಾಜ್ಯ ಸೇರಿ 400 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ. ವಿದ್ಯಾರ್ಥಿಗಳ ಅವಶ್ಯಕೆ ತಕ್ಕಂತೆ ಕೊಠಡಿಗಳಿವೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗಿಲ್ಲ. ಪಠ್ಯದ ಜತೆ ಪರಿಸರ ಜ್ಞಾನದ ಕಡೆ ಲಕ್ಷವಹಿಸುತ್ತಾರೆ.

ADVERTISEMENT

ಉದ್ಯಾನದಲ್ಲಿ ಗುಲಾಬಿ, ಮಲ್ಲಿಗೆ, ಸೇವಂತಿಗೆ, ದುಂಡು ಮಲ್ಲಿಗೆ, ಪಾರಿಜಾತ, ಕೆಂಪು ಹಾಗೂ ಬಿಳಿ ದಾಸಳ, ಕಣಗಲಿ, ಕನಕಾಂಬರಿ ಸೇರಿದಂತೆ 50 ಕ್ಕೂ ಹೆಚ್ಚು ಜಾತಿಯ ಹೂಬಳ್ಳಿಗಳು ಉದ್ಯಾನವಿದೆ. ಇದು ವಿದ್ಯಾರ್ಥಿಗಳಿಗೆ ಪರಿಸರ ಜ್ಞಾನಾರ್ಜನೆಗೆ ಪೂರಕವಾಗಿದೆ.

ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳ ವಸತಿ ನಿಲಯಗಳಾದ ಹರವಳಿ, ನೀಲಿಗಿರಿ, ಶಿವಾನಿಕ, ಉದಯಗಿರಿ ಎಂಬ ಹೆಸರಿನ ಉದ್ಯಾನ ನಿರ್ಮಿಸಿ ವಿದ್ಯಾರ್ಥಿಗಳಿಂದ ಶ್ರಮದಾನ ಮಾಡಿಸಿ ಉತ್ತಮ ಉದ್ಯಾನವನ್ನಾಗಿ ರೂಪಿಸಲು ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಏರ್ಪಡಿಸಿ ಉತ್ತಮ ಉದ್ಯಾನಕ್ಕೆ ಅಂಕ ನೀಡಲಾಗುತ್ತದೆ.

ಇಲ್ಲಿನ ಗಿಡ ಮರಗಳಿಂದ ಉದುರಿದ ಎಲೆಗಳನ್ನು ಗುಂಡಿಯಲ್ಲಿ ಹಾಕಿ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಇಲ್ಲಿನ ಉದ್ಯಾನ ಹಾಗೂ ಕುಡಿಯುವ ನೀರಿನ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ಅವರು ₹ 15 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ವಿದ್ಯಾಲಯಕ್ಕೆ ನೀರಿನ ಸೌಲಭ್ಯ ಸಂಪರ್ಕ ಕಲ್ಪಿಸಿ ಕೊಡುವಲ್ಲಿ ಲಿಂಗಸುಗೂರು ಮಾಜಿ ಶಾಸಕ ಮಾನಪ್ಪ ಡಿ.ವಜ್ಜಲರ ಸೇವೆ ಅನನ್ಯ. ಆದರೆ ಈಚೇಗೆ ನೀರಿನ ಅಭಾವ ಆಗುತ್ತಿದ್ದರಿಂದ ಗಿಡ ಮರಗಳಿಗೆ ಹಾಗೂ ಉದ್ಯಾನಕ್ಕೂ ನೀರು ಸಾಲುತ್ತಿಲ್ಲ.

ಇಲ್ಲಿನ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. ಕ್ರಿಕೆಟ್‌ನಲ್ಲಿ ಟಿ.ಸುನಿಲ, ಸಂಜೀವ, ಬಾಸ್ಕೇಟ್ ಬಾಲ್ ಕ್ರೀಡೆಯಲ್ಲಿ ದೇವರಾಜ, ನಾಗರಾಜ, ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ರಾಜೇಂದ್ರ, ಚೆಸ್ ಕ್ರೀಡೆಯಲ್ಲಿ ವಿದ್ಯಾಧರ, ಕೊಕ್ಕೊದಲ್ಲಿ ಮಮತಾ ಎಂಬ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅನ್ನಪೂರ್ಣ, ಅನುಪಮ, ಸುಷ್ಮಾ, ಹರ್ಷಶ್ರೀ, ಸಂಪದ, ಅಂಜು, ತೇಜಸ್ವೀನಿ, ಮಂಜುಳ, ತ್ರೀವೇಣಿ, ಅರ್ಪಿತಾ ಸೇರಿದಂತೆ ಇನ್ನಿತರ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.