ADVERTISEMENT

ಜಾನಪದ ಬದುಕೇ ದಲಿತ ಸಾಹಿತ್ಯ: ಜಯದೇವಿ ಗಾಯಕವಾಡ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:16 IST
Last Updated 21 ಡಿಸೆಂಬರ್ 2025, 6:16 IST
ರಾಯಚೂರಿನಲ್ಲಿ ಶನಿವಾರ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆ ಜಯದೇವಿ ಗಾಯಕವಾಡ ಮಾತನಾಡಿದರು
ರಾಯಚೂರಿನಲ್ಲಿ ಶನಿವಾರ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆ ಜಯದೇವಿ ಗಾಯಕವಾಡ ಮಾತನಾಡಿದರು   

ರಾಯಚೂರು: ‘ಜಾನಪದ ಬದುಕೇ ದಲಿತ ಸಾಹಿತ್ಯ. ಕೇರಿಗಳಲ್ಲೇ ಜಾನಪದ ಸಾಹಿತ್ಯ, ಕಲೆಗಳು ಜನ್ಮ ಪಡೆದಿವೆ’ ಎಂದು 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಜಯದೇವಿ ಗಾಯಕವಾಡ ಅಭಿಪ್ರಾಯಪಟ್ಟರು.

ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಇಲ್ಲಿಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಶನಿವಾರ ಆರಂಭವಾದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ದಲಿತ ಸಾಹಿತ್ಯ ಇಂದಿನದಲ್ಲ, ಮನುಷ್ಯ ಜನ್ಮ ತಾಳಿದ ದಿನದಿಂದಲೇ ದಲಿತ ಸಾಹಿತ್ಯ-ಕಲೆಗಳು, ಏಕಕಾಲಕ್ಕೆ ಜನ್ಮತಾಳಿವೆ. ಕವಿರಾಜಮಾರ್ಗ, ವಡ್ಡಾರಾಧನೆ, ಪಂಪ, ರನ್ನ, ಪೊನ್ನ, ಜನ್ನ,ಸರ್ವಜ್ಞ, ಕವಿಗಳಲ್ಲಿ ದಲಿತ ಪ್ರಜ್ಞೆ ಕಾಣಬಹುದು’ ಎಂದು ತಿಳಿಸಿದರು.

ADVERTISEMENT

‘12ನೇ ಶತಮಾನದ ಬಸವಾದಿ ಶರಣರ ಚಳವಳಿ, ಅದೊಂದು ಸಮಸಮಾಜವನ್ನು ನಿರ್ಮಾಣ ಮಾಡಿದೆ. ಶರಣ ಚಳವಳಿ ಮಾತ್ರ ಆಗಿರದೆ, ದಲಿತ ಮತ್ತು ಮಹಿಳಾ ವಿಮೋಚನಾ ಚಳವಳಿಯೂ ಆಗಿದೆ. ತತ್ವಪದಕಾರರೂ ದಲಿತ ಆಶಯಗಳನ್ನು ಬೆಳಗಿಸಿದ್ದಾರೆ. ಇದೇ ಪರಂಪರೆ ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಹಾದು ಹೋದದ್ದು, ದಲಿತ ಸಾಹಿತ್ಯದ ಹೆಗ್ಗಳಿಕೆಯಾಗಿದೆ’ ಎಂದು ಬಣ್ಣಿಸಿದರು.

ಪೌರಕಾರ್ಮಿಕರಿಗೂ ಸಿಗಲಿ ಗೌರವ:

‘ಗಡಿಯಲ್ಲಿ ನಿಂತು ದೇಶ ಕಾಯುವ ಸೈನಿಕರಿಗೆ ಸಿಗುವ ಗೌರವ ಪೌರಕಾರ್ಮಿಕರಿಗೂ ಸಿಗಬೇಕು. ದೇವದಾಸಿ ಪದ್ಧತಿ ಇನ್ನೂ ಹೋಗಿಲ್ಲ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಪದ್ಧತಿ, ಮಹಿಳೆಯರಲ್ಲಿ ಅರಿವು, ಪ್ರಜ್ಞೆ ಇಲ್ಲದೆ ಇರುವುದು ಈ ಪದ್ಧತಿ ಹೆಚ್ಚಾಗಲು ಕಾರಣವಾಗಿದೆ. ಆತ್ಮಗೌರವದಿಂದ ಬದುಕು ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

‘ಮಲಹೊರುವ ಪದ್ಧತಿ, ಶವಸಂಸ್ಕಾರ, ಸ್ಮಶಾನ ಭೂಮಿ, ಶವ ಸಂಸ್ಕಾರ ಮಾಡುವವರಿಗೆ ಆರ್ಥಿಕ ಭದ್ರತೆ ಇಲ್ಲ. ಅವರ ಕುಟುಂಬಕ್ಕೆ ಆರೋಗ್ಯ, ಉದ್ಯೋಗ, ವಿಮೆಗಳನ್ನು ಒದಗಿಸಬೇಕು. ಹಳ್ಳಿಗೊಂದು ಸ್ಮಶಾನ ಭೂಮಿ ದಲಿತರಿಗೆ ನೀಡಬೇಕು. ಕೊಳಗೇರಿಯ ಕುಟುಂಬಗಳು ಇಂದು ಶೋಷಿತರಿಗಿಂತ ಶೋಷಿತರಾಗಿ ಜೀವಿಸುತ್ತಿದ್ದಾರೆ. ಅವರಿಗೂ ಕೂಡ ಮುಖ್ಯ ವಾಹಿನಿಗೆ ತರುವಂತಹ ಕೆಲಸ ಆಗಬೇಕಾಗಿದೆ’ ಎಂದು ಹೇಳಿದರು.

ಕಪ್ಪುಪಟ್ಟಿಗೆ ಸೇರಿಸಿ:

‘ಜೈಲಿಗೆ ಹೋಗಿ ಬಂದವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಸಂಘ-ಸಂಸ್ಥೆಗಳು, ಅಕಾಡೆಮಿ, ಪ್ರಾಧಿಕಾರಗಳು, ಪರಿಷತ್ತುಗಳು, ಸರ್ಕಾರ ಇವರನ್ನು ಕಪ್ಪು ಪಟ್ಟಿಗೆ ಒಳಪಡಿಸಬೇಕು. ಉನ್ನತ ಹುದ್ದೆ, ಪ್ರಶಸ್ತಿ ಸನ್ಮಾನಗಳನ್ನು ಮಾಡಬಾರದು’ ಎಂದು ಒತ್ತಾಯಿಸಿದರು.

ಬೌದ್ಧ ನೆಲೆಗಳು ಮತ್ತು ಸನ್ನತಿ ಅಭಿವೃದ್ಧಿ ಹೊಂದಬೇಕು. ದಲಿತ ಮಹಿಳೆಯರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದರು.

‘ಖಾಸಗಿ ವಲಯ ಸೇರಿದಂತೆ ಸರ್ವ ರಂಗಗಳಲ್ಲಿ ಮೀಸಲಾತಿ ಕಡ್ಡಾಯವಾಗಿ ಜಾರಿ ಆಗಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಮತ್ತು ಆಡಳಿತ ಭಾಷೆ ಯಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಪ್ರಥಮ ಪ್ರಾತಿನಿಧ್ಯ ನೀಡಬೇಕು. ಶಿಕ್ಷಣದ ರಾಷ್ಟ್ರೀಕರಣವಾಗಬೇಕು’ ಎಂದು ಆಗ್ರಹಿಸಿದರು.


ಸಾಹಿತಿಗಳು ಚಳವಳಿ ರೂಪಿಸಲಿ:

‘ಸಮಾನತೆ, ಸಹೋದರತೆ, ಸ್ವಾತಂತ್ರ್ಯ ಭ್ರಾತೃತ್ವ, ಮತ್ತು ಬಹು ತತ್ವವನ್ನು, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಯೋಜನೆಗಳನ್ನು ಸಾಹಿತಿಗಳು, ಚಳವಳಿಗಾರರು ರೂಪಿಸಬೇಕು’ ಎಂದು ಮನವಿ ಮಾಡಿದರು.

‘ಶಿಕ್ಷಣ, ಭೂಮಿ, ಕೈಗಾರಿಕೆಗಳು, ರಾಷ್ಟ್ರೀಕರಣವಾಗಬೇಕು. ಸಾವಿರಾರು ಬ್ಯಾಕ್ ಲ್ಯಾಗ್ ಹುದ್ದೆಗಳು ತುಂಬಬೇಕಾಗಿದೆ. ಅಟ್ರಾಸಿಟಿ ಕಾಯ್ದೆ ಬಲಪಡಿಸಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಚಳವಳಿಗಳನ್ನು ಒಂದುಗೂಡಿಸಿ ಬಲಿಷ್ಠ ಹೋರಾಟ ಆರಂಭಿಸಬೇಕು‘ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.