ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠ ಕಲ್ಮಠದಲ್ಲಿ ಸುವರ್ಣ ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಮಹಾಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿತ್ತು.
ಕಲ್ಮಠದ ಪೀಠಾಧ್ಯಕ್ಷ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,‘ ದಸರಾ ಹಬ್ಬದ ನವರಾತ್ರಿಗಳಲ್ಲಿ ನವದುರ್ಗೆಯರಿಗೆ ಪೂಜೆ ಸಲ್ಲಿಸಿ ಮಹಾಚಂಡಿಕಾ ಯಾಗವನ್ನು ಮಾಡುವುದರಿಂದ ದುಷ್ಟ ಶಕ್ತಿಗಳು ನಿಗ್ರಹವಾಗಿ ದೇವಿಯ ಕೃಪೆ ದೊರೆತು ಲೋಕ ಕಲ್ಯಾಣವಾಗುತ್ತದೆ. ಚಂಡಿಕಾ ಯಾಗದಲ್ಲಿ ಭಾಗವಹಿಸುವುದರಿಂದ ಶತ್ರು ನಿವಾರಣೆಯಾಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ. ಪುಣ್ಯಫಲ ದೊರೆಯುತ್ತದೆ’ ಎಂದು ತಿಳಿಸಿದರು.
ದಸರಾ ಹಬ್ಬದ ಅಂಗವಾಗಿ ಕಲ್ಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಅವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ, ಗೋಪೂಜೆ, ಪರಿವಾರ ದೇವತೆಗಳ ಕಳಶಾರಾಧನೆ ನೆರವೇರಿಸಲಾಯಿತು.
ಬಾಲ ಮುತ್ತೈದೆಯರಿಗೆ ಪಾದಪೂಜೆ ಹಾಗೂ ದೇವಿಯ ರಜತ ಮೂರ್ತಿಗೆ ಮಹಿಳೆಯರು ಪೂಜೆ ಸಲ್ಲಿಸಿದರು.
ನೀಲಗಲ್ ಬೃಹನ್ಮಠದ ರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿದರು.
ರಾಯಚೂರಿನ ಸೋಮವಾರಪೇಟೆ ಹಿರೇಮಠದ ಶಿವಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಮಹಾಚಂಡಿಕಾ ಯಾಗದ ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಕಲ್ಮಠದಲ್ಲಿನ 9 ಕುಂಡಗಳಲ್ಲಿ ಮಹಾಚಂಡಿಕಾ ಯಾಗ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.