ADVERTISEMENT

ಕಡಿಮೆ ಖರ್ಚಿನ ಕನಕಾಂಬರ ಹೂವು ಬೆಳೆಸಿ, ಆದಾಯ ಪಡೆದ ರೈತ

ಉಮಾಪತಿ ಬಿ.ರಾಮೋಜಿ
Published 13 ಮಾರ್ಚ್ 2020, 19:30 IST
Last Updated 13 ಮಾರ್ಚ್ 2020, 19:30 IST
 ರಾಜಸಾಬ್ ಸಗಮಕುಂಟ 
 ರಾಜಸಾಬ್ ಸಗಮಕುಂಟ    

ಶಕ್ತಿನಗರ: ರಾಯಚೂರು ತಾಲ್ಲೂಕಿನ ಸಗಮಕುಂಟ ಗ್ರಾಮದ ರೈತ ದೇವೇಂದ್ರಪ್ಪ ಹೂಗಾರ ಅವರು 2 ಎಕರೆ ಜಮೀನಿನಲ್ಲಿ ಕನಕಾಂಬರ ಹೂವುಗಳನ್ನು ಬೆಳೆಸಿ, ಉತ್ತಮ ಇಳುವರಿ ಪಡೆಯುವಲ್ಲಿ ಗಮನ ಸೆಳೆದಿದ್ದಾರೆ.

ಭತ್ತ, ಹತ್ತಿ ಬೆಳೆಯುತ್ತಿದ್ದ ದೇವೇಂದ್ರಪ್ಪ ಹೂಗಾರ, ಕೊಳವೆ ಬಾವಿಯಲ್ಲಿ ಬರುವ ಅಲ್ಪಸ್ವಲ್ಪ ನೀರಿನಲ್ಲೇ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದಿಂದ ಕನಕಾಂಬರ ಬೀಜ ತಂದು, ಜಮೀನಿನಲ್ಲಿ ಬೀಜ ನೆಟ್ಟು ಕನಕಾಂಬರ ಬೆಳೆಸಿದ್ದಾರೆ.

ಈಗ ದಿನಕ್ಕೆ 4 ಕೆಜಿ ಕನಕಾಂಬರ ಹೂವು ಸಿಗುತ್ತಿದೆ. 1ಕೆಜಿಗೆ ₹ 280 ರಂತೆ ರಾಯಚೂರು, ಮಾನ್ವಿ ಮತ್ತು ದೇವದುರ್ಗ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಾರಾಟ ಮಾಡಿ, ಉತ್ತಮ ಆದಾಯ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ಎಷ್ಟೋ ಮಹಿಳೆಯರು ಇದರ ಮಾಲೆ ಕಟ್ಟಿ, ಮಾರಾಟ ಮಾಡಿ ದಿನದ ಬದುಕಿಗೆ ಬೇಕಾಗವಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

ADVERTISEMENT

ಕನಕಾಂಬರಕ್ಕೆ ತಂಪು ವಾತಾವರಣ ಹಾಗೂ ಅಗತ್ಯ ನೀರು ಮುಖ್ಯ. ಸುಮಾರು ಐದಾರು ಅಡಿ ಎತ್ತರಕ್ಕೆ ಈ ಗಿಡ ಬೆಳೆಯುತ್ತದೆ. 60–30 ಸೆಂ.ಮೀ.ಅಂತರದಲ್ಲಿ ಸಸಿ ನೆಟ್ಟರೆ ಉತ್ತಮ. ಗಿಡಗಳ ಬಲಿತು ರಂಬೆಗಳನ್ನು ಕತ್ತರಿಸಿ ನೆಟ್ಟರೂ ಸರಿ. ಗಿಡ ಸಮೃದ್ಧವಾಗಿ ಬೆಳೆಯುತ್ತದೆ.

ನಾಟಿ ಮಾಡಿದ ಮೂರು ತಿಂಗಳಿಗೆ ಹೂವು ಬಿಡಲು ಆರಂಭವಾಗುವುದು. ಬೇಸಿಗೆಯಲ್ಲಿ ಅತಿ ಹೆಚ್ಚು ಹೂವು ಬಿಡುವ ಕೆಲವೇ ಹೂವುಗಳ ಪೈಕಿ ಕನಕಾಂಬರ ಒಂದು. ಮೇ ತಿಂಗಳ ಅಂತ್ಯದವರೆಗೂ ಸಮೃದ್ಧವಾಗಿ ಹೂವು ಅರಳುತ್ತವೆ. ವಾರಕ್ಕೆ ಮೂರು ಬಾರಿ ಹೂವುಗಳನ್ನು ಕೊಯ್ಲು ಮಾಡಬಹುದು. ನಂತರ ಮಳೆಗಾಲದ ದಿನಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ.

ಹೂವು ಮಾರಿ ಸಾಕಷ್ಟು ಹಣ ಗಳಿಸುವುದು ಒಂದೆಡೆಯಾದರೆ, ಅರಳಿರುವ ಹೂವುಗಳನ್ನು ಗಿಡಗಳಿಂದ ಬಿಡಿಸಿ (ಕಿತ್ತು) ಹಣವನ್ನೂ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಕನಕಾಂಬರ ಕೃಷಿ ಮಾಡುವವರಿಗೆ ಇದರ ಹೂವುಗಳನ್ನು ಬಿಡಿಸುವುದು ಕಷ್ಟಕರವೇನಲ್ಲ. ಆದರೆ ಬಹಳ ತುಸು ಸಮಯ ಬೇಕಾಗುತ್ತದೆ.

ಹೂವು ಬಿಡಿಸುವವರಿಗೆ ಭಾರಿ ಡಿಮಾಂಡ್. ಒಂದು ಕೆಜಿ ಹೂವು ಬಿಡಿಸಿದರೆ ₹ 20 ರಿಂದ ₹ 30 ರೂಪಾಯಿ ಸಿಕ್ಕೇ ಸಿಗುತ್ತದೆ. ಹೂವಿನ ಗಿಡಗಳ ನೆಡುವೆ ಚೆಂಡುಹೂವು, ಅಲ್ಪ ಸ್ವಲ್ಪ ಹತ್ತಿ ಬೆಳೆಯುತ್ತಾರೆ.

’ಅಲ್ಪ ನೀರಾವರಿ ಸೌಲಭ್ಯ ಹೊಂದಿರುವವರು ಹೆಚ್ಚಿಗೆ ಬೆಳೆ ಬೆಳೆಯಲು ಆಗುತ್ತಿಲ್ಲ ಎಂದು ಚಿಂತೆಗೆ ಒಳಗಾಗುವ ಅಗತ್ಯವೇ ಇಲ್ಲ. ಕನಕಾಂಬರ ಬಹಳ ಕಡಿಮೆ ನೀರನ್ನು ಬೇಡುವ ಗಿಡ. ಹಾಗೆಯೇ ಕಡಿಮೆ ಆರೈಕೆಯೂ ಇದಕ್ಕೆ ಸಾಕು’ ಎಂದು ರೈತ ದೇವೇಂದ್ರಪ್ಪ ಹೂಗಾರ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.