
ರಾಯಚೂರು: ‘ಕನ್ನಡ ಭಾಷೆಗೆ ಕೇಶಿರಾಜನ ಶಬ್ದಮಣಿ ದರ್ಪಣವೇ ಜೀವಾಳ. ಕಂದ ಪದ್ಯದಲ್ಲಿ ಬರೆದ ವ್ಯಾಕರಣ ಗ್ರಂಥದ ಮೊದಲ ಅಧ್ಯಾಯದ ಎರಡನೇ ಪದ್ಯ ಅಕ್ಷರದ ಬಗ್ಗೆ ತಿಳಿಸುತ್ತದೆ. ಬರೆಯಲು ಉಚ್ಚರಿಸಲು ಬರುವಂತವುಗಳನ್ನು ಅಕ್ಷರಗಳೆನ್ನುವರು. ಹೀಗೆ ಅಕ್ಷರಗಳ ಕಲಿಕೆ ಕ್ರಮಬದ್ಧವಾಗಿ ಮಕ್ಕಳಿಗೆ ಕಲಿಸುವುದು ಅನಿವಾರ್ಯವಾಗಿದೆ’ ಎಂದು ಸಾಹಿತಿ ಬಿ.ಜಿ. ಹುಲಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ‘ಪರಿಷತ್ತಿನ ನಡೆ ಯುವಕರ ಕಡೆ’ ಶೀರ್ಷಿಕೆಯಲ್ಲಿ ಸೋಮವಾರ ಆರಂಭವಾದ ಪ್ರಚಾರ ಉಪನ್ಯಾಸ ಮಾಲೆಯ ಮೊದಲ ಕಾರ್ಯಕ್ರಮದ ಉಪನ್ಯಾಸಕರಾಗಿ ಅವರು ಮಾತನಾಡಿದರು.
‘ಅಧ್ಯಾಪಕರು ನಿತ್ಯ ಬೆಳೆಯುವವರು. ತಾವು ಬೆಳೆಯುತ್ತಾ ತಮ್ಮ ಕೈಯಲ್ಲಿ ಇರುವ ಮಕ್ಕಳನ್ನು ಬೆಳೆಸಬೇಕು. ಅಂದಾಗ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ. ದ್ವಿತೀಯ ಪಿಯುಸಿ ಕನ್ನಡ ಪಠ್ಯದಲ್ಲಿರುವ ಮುದ್ದಣ ರಚಿಸಿದ ತಿರುಳುಗನ್ನಡದ ಬೆಳ್ನುಡಿ ಗದ್ಯಭಾಗದ ಪಾಠವನ್ನು ಜೀವ ತುಂಬಿ ಮಕ್ಕಳಿಗೆ ತಿಳಿಸಿಕೊಟ್ಟರು. ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ 20 ವರ್ಷಗಳ ನಂತರವೂ ಅದೇ ಕಂಚಿನ ಕಂಠದಲ್ಲಿ ಕನ್ನಡದ ಸಾಲುಗಳನ್ನು ಹೇಳುತ್ತಾ ಮಕ್ಕಳ ಮನಗೆದ್ದರು‘ ಎಂದು ತಿಳಿಸಿದರು.
‘ಸೃಷ್ಟಿಯ ಮೇಲೆ ಜೀವತಳೆದ ಸಕಲ ಜೀವರಾಶಿಗಳಲ್ಲಿ ಮನುಷ್ಯ ಶ್ರೇಷ್ಠನಾಗಲು ಕಾರಣವೇ ತನ್ನ ಭಾವನೆಗಳ ಅಭಿವ್ಯಕ್ತಿಗಾಗಿ ಕಲಿತ ಭಾಷೆ. ಧ್ವನಿ ನಮ್ಮ ಭಾಷೆಗೆ ಮೂಲ ವಸ್ತು. ತಾಯಿಯ ಗರ್ಭದಿಂದ ಜನ್ಮತಾಳಿದ ಮಗುವಿನ ಅಳು ಆ ಮಗುವಿನ ಮಾತೃಭಾಷೆಯಾಗಿದೆ. ಕಾಲೇಜು ಹಂತದ ಮಕ್ಕಳಲ್ಲಿಯೂ ಕನ್ನಡ ಕಲಿಕೆ ನೀರಸ ವಾಗಿರುವುದನ್ನು ಕಂಡು ಶಿಕ್ಷಣದ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ ವಿಜಯರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯ ಚನ್ನಬಸಪ್ಪ ಪಸಾರ, ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ಲಲಿತಾ ಬಸನಗೌಡ, ಪತ್ರಕರ್ತ ಆನಂದ ವಿ.ಕೆ, ಮಹಾಂತೇಶ ರಮೇಶ ಹಿರಾ, ಸೈಯದ್ ಹಫೀಜುಲ್ಲಾ ಖಾದ್ರಿ , ದೇವೇಂದ್ರಮ್ಮ, ಅನ್ವರ್ ಅಲಿ ಖಾನ್ ಉಪಸ್ಥಿತರಿದ್ದರು.
ಪ್ರತಿಭಾ ಗೋನಾಳ ಪ್ರಾರ್ಥನೆ ಮತ್ತು ನಾಡಗೀತೆ ಹಾಡಿದರು. ಜಲೀಲ್ ಅಹ್ಮದ್ ನಿರೂಪಿಸಿದರು. ಅನಿತಾ ಡಿ. ಸ್ವಾಗತಿಸಿದರು. ರೇಖಾ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.