ಪ್ರಜಾವಾಣಿ ವಾರ್ತೆ
ರಾಯಚೂರು: ‘ಕನ್ನಡ ಸಾಹಿತ್ಯ ಪರಿಷತ್ತು ಭಾಷೆ ಭಾಷೆಗಳ ಮಧ್ಯೆ ಕಂದಕ ಬಾರದಂತೆ ಸ್ನೇಹದ, ಗೌರವದ ಸಂಪರ್ಕದ ಸೇತುವೆಯಾಗಿ ಕಸಾಪ ಕಾರ್ಯನಿರ್ವಹಿಸಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
ಮಂತ್ರಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಕನ್ನಡ, ತೆಲುಗು ಹಾಗೂ ಮರಾಠಿ ಭಾಷೆಗಳ ಮಧ್ಯೆ ಸೌಹಾರ್ದತೆ ಇದೆ. ಈ ಭಾಷೆಗಳು ಇಂದಿಗೂ ದೇಶದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದಿವೆ’ ಎಂದು ತಿಳಿಸಿದರು.
‘ಮರಾಠಿಗರು ಬಳಸುವ ತಾಯಿ, ಅಣ್ಣ, ಅಪ್ಪ, ಅಪ್ಪಾ ಸಾಹೇಬ, ಅಣ್ಣಾ ಸಾಹೇಬ ಎನ್ನುವುದು ಕನ್ನಡ ಶಬ್ದಗಳೇ ಆಗಿವೆ. ಅಂತೆಯೇ ಮರಾಠಿಗೆ ಮೂಲ ಕನ್ನಡ ಎಂದು ಬಾಲಗಂಗಾಧರ ತಿಲಕರು ಹೇಳಿದ್ದಾರೆ. ಧಾರವಾಡದ ದತ್ತಾತ್ತೇಯ ಬೇಂದ್ರೆ ಅವರು ಮರಾಠಿಗರಾದರೂ ಕನ್ನಡವನ್ನು ಉತ್ತುಂಗಕ್ಕೆ ಒಯ್ದುರು. ಡಿ.ವಿ.ಗುಂಡಪ್ಪ ಅವರು ತೆಲುಗು ಮೂಲದವರಾಗಿದ್ದರೂ ಕನ್ನಡದ ಭಗವದ್ಗೀತೆ ಬರೆದಿದ್ದಾರೆ’ ಎಂದು ತಿಳಿಸಿದರು.
‘ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಘವೇಂದ್ರ ತೀರ್ಥರು ನಾನು ಶಾಸ್ತ್ರದಿಂದ ಧರ್ಮವನ್ನು ಎತ್ತಿ ಹಿಡಿದರೆ, ನೀವು ಶಸ್ತ್ರದಿಂದ ಧರ್ಮದ ರಕ್ಷಣೆ ಮಾಡುತ್ತೀದ್ದೀರಿ ಎಂದು ಛತ್ರಪತಿ ಅವರಿಗೆ ಹೇಳಿದ್ದರು’ ಎಂದು ಸ್ಮರಿಸಿದರು.
‘ಹಿಂದೆ ಧರ್ಮ ಗುರುಗಳೇ ಹಿಂದೂ ಸಾಮ್ರಾಜ್ಯಗಳು ಉಳಿಯುವಂತೆ ಮಾಡಿದರು. ವಿಜಯನಗರ ಸಾಮ್ರಾಜ್ಯದಲ್ಲಿ ಅರಸರನ್ನು ಕೆಟ್ಟ ಘಳಿಗೆಯಿಂದ ಉಳಿಸಿದವರೇ ವ್ಯಾಸ ತೀರ್ಥರು. ಕಷ್ಟಗಳು ಬಂದಾಗ ದೇವರು ಹಾಗೂ ಸೈನಿಕರನ್ನು ನೆನಪಿಸಿಕೊಳ್ಳುವುದು ಸಾಮಾನ್ಯ. ಕಷ್ಟಗಳು ತೊಲಗಿದಾಗ ಮರೆತು ಬಿಡುತ್ತೇವೆ. ಹಾಗೆ ಆಗಬಾರದು. ಕಷ್ಟ ತೊಲಗಿದಾಗಲೂ ದೇವರನ್ನು ಸ್ಮರಿಸುವಂತಾಗಬೇಕು’ ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷ ಡಾ.ಪ್ರದೀಪಕುಮಾರ ಹೆಬ್ರಿ ಮಾತನಾಡಿದರು. ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು.
ಗಡಿನಾಡ ಕನ್ನಡ ಮುಖಂಡರಿಗೆ ಸನ್ಮಾನ ನೆರೆ ರಾಜ್ಯದ ಘಟಕಗಳ ಅಧ್ಯಕ್ಷರ ಉಪಸ್ಥಿತಿ ಶಲ್ಯ ಹಾಕಿಕೊಂಡು ಕಾರ್ಯಕ್ರಮದಲ್ಲಿ ಭಾಗಿ
ನೆರೆಯ ಜಿಲ್ಲೆಯಲ್ಲೇ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದರೂ ಕಸಾಪದಿಂದ ಯಾವುದೇ ಪತ್ರ ಅಥವಾ ಮಾಹಿತಿ ಬಂದಿಲ್ಲರಂಗಣ್ಣ ಪಾಟೀಲ ಅಳ್ಳುಂಡಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ
ಮಂತ್ರಾಲಯದಲ್ಲಿ ಸಮ್ಮೇಳನ ಆಯೋಜಸಿದರೂ ರಾಯಚೂರು ಜಿಲ್ಲೆಯ ಕನ್ನಡ ಸಂಘಟನೆಗಳಿಗೆ ಆಹ್ವಾನ ನೀಡದೇ ಸರ್ವಾಧಿಕಾರ ಪ್ರವೃತ್ತಿ ಅನುಸರಿಸಲಾಗಿದೆಫಲಗುಲ ನಾಗರಾಜ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.