ADVERTISEMENT

ರಂಗಣ್ಣ, ಕೆಲಸ ಮಾಡಿ, ಇಲ್ಲ ರಾಜೀನಾಮೆ ಕೊಡಿ: ಕಸಾಪ ಜಿಲ್ಲಾಧ್ಯಕ್ಷರಿಗೆ ಎಚ್ಚರಿಕೆ

ನವೆಂಬರ್ 1ರಂದು ಕನ್ನಡದ ಭವನದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 7:55 IST
Last Updated 11 ಅಕ್ಟೋಬರ್ 2025, 7:55 IST
   

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನಿಷ್ಕ್ರೀಯ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬೆಳಕು ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ, ಕನ್ನಡ ರಾಜ್ಯೋತ್ಸವದ ದಿನ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಕನ್ನಡ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

‘ಕಸಾಪ ರಾಜ್ಯಾಧ್ಯಕ್ಷರ ಆದೇಶ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ಆದೇಶಗಳು ಕಸಾಪ ವಲಯದಲ್ಲಿ ಗೊಂದಲ ಸೃಷ್ಟಿಸಿವೆ. 20 ದಿನಗಳಲ್ಲಿ ಗೊಂದಲಕ್ಕೆ ತೆರೆ ಎಳೆಯದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಬೆಳಕು ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಅವರಿಗೆ ಎಚ್ಚರಿಕೆ ನೀಡಿದರು.

‘ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ಬಳಿ ಹೋಗಿ ಜಿಲ್ಲಾ ಘಟಕದಲ್ಲಿನ ಅವ್ಯವಸ್ಥೆ, ಗೊಂದಲ ಹಾಗೂ ಅಹಿತಕರ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದೇನೆ. ಲಿಖಿತ ದೂರನ್ನೂ ಕೊಟ್ಟಿರುವೆ. ರಂಗಣ್ಣ ಪಾಟೀಲ ಅಳ್ಳುಂಡಿ ಅವರು ಪರಿಷತ್ತಿನ ನಿಯಮ ಉಲ್ಲಂಘಿಸಿ ಹೊಸದಾಗಿ ಕಸಾಪ ತಾಲ್ಲೂಕು ಘಟಕಗ ಪುನರ್‌ರಚಿಸಿರುವುದನ್ನು ಅಧ್ಯಕ್ಷರ ಗಮನಕ್ಕೆ ತಂದಿರುವೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಹೊಸದಾಗಿ ಕಸಾಪ ತಾಲ್ಲೂಕು ಘಟಕಗಳನ್ನು ರಚನೆ ಮಾಡಿರುವುದು ನನ್ನ ಗಮನಕ್ಕೆ ಇರಲಿಲ್ಲ. ಮೂರು ತಾಲ್ಲೂಕಿನ ಅಧ್ಯಕ್ಷರು ನನಗೆ ದೂರು ನೀಡಿದಾಗ ವಿಷಯ ಗೊತ್ತಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀರಿಗೆ ಸೆಪ್ಟೆಂಬರ್ 22ರಂದು ಪತ್ರದ ಮೂಲಕ ನಿರ್ದೇಶನ ನೀಡಿದ್ದೇನೆ. ಹೊಸದಾಗಿ ಪದಗ್ರಹಣ ಮಾಡುವವರಿಗೆ ಯಾವುದೇ ರೀತಿಯ ಮಾನ್ಯತೆ ಇರುವುದಿಲ್ಲವೆಂದೂ ಸ್ಪಷ್ಟಪಡಿಸಿದ್ದೇನೆಂದು ಜೋಶಿ ಪ್ರತಿಕ್ರಿಯಿಸಿದ್ದಾರೆ’ ಎಂದು ಮೇಟಿ ಹೇಳಿದರು.

‘ರಂಗಣ್ಣ ಅವರಿಗೆ ಇನ್ನೂ ಒಂದು ವರ್ಷ ಅಧಿಕಾರವಿದೆ. ಅಧ್ಯಕ್ಷರು ಕಸಾಪ ಕೇಂದ್ರ ಸಮಿತಿಯ ಅನುದಾನ ಕೊಡಲು ಸಿದ್ಧವಿದ್ದು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸಬೇಕು. ತಾಲ್ಲೂಕು ಮಟ್ಟದ ಸಮ್ಮೇಳನಗಳನ್ನೂ ಆಯೋಜಿಸಬೇಕು‘ ಎಂದು ಒತ್ತಾಯಿಸಿದರು.

‘ರಂಗಣ್ಣ ಅವರೇ ರಾಜಕೀಯ ಬಿಟ್ಟು ಕನ್ನಡ ಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿರಿ. ಜಿಲ್ಲಾ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ. ಕನ್ನಡ ಬಗ್ಗೆ ಅಭಿಮಾನವಿದ್ದರೆ ಕೆಲಸ ಮಾಡಿ, ಇಲ್ಲವಾದರೆ ಮೊದಲು ರಾಜೀನಾಮೆ ಕೊಡಿರಿ‘ ಎಂದು ಆಗ್ರಹಿಸಿದರು.

ಕಲಾ ಸಂಕುಲ ಸಂಸ್ಥೆಯ ಸಂಸ್ಥಾಪಕ ಮಾರುತಿ ಬಡಿಗೇರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.