ADVERTISEMENT

ಕರ್ನಾಟಕ, ಮಂತ್ರಾಲಯಕ್ಕೂ ಅವಿನಾಭಾವ ಸಂಬಂಧ: ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 14:36 IST
Last Updated 9 ಆಗಸ್ಟ್ 2022, 14:36 IST
ಮಂತ್ರಾಲಯದಲ್ಲಿ ಕರ್ನಾಟಕದಿಂದ ನೂತನವಾಗಿ ನಿರ್ಮಿಸಿರುವ ಯಾತ್ರಿನಿವಾಸ ಎರಡನೇ ಘಟಕವನ್ನು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಮಂತ್ರಾಲಯದಲ್ಲಿ ಕರ್ನಾಟಕದಿಂದ ನೂತನವಾಗಿ ನಿರ್ಮಿಸಿರುವ ಯಾತ್ರಿನಿವಾಸ ಎರಡನೇ ಘಟಕವನ್ನು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.   

ರಾಯಚೂರು: ರಾಯರ ಸನ್ನಿಧಿಯಲ್ಲಿ ಕರ್ನಾಟಕದಿಂದ ಮತ್ತೊಂದು ಯಾತ್ರಿನಿವಾಸ ಉದ್ಘಾಟಿಸುತ್ತಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ. ಕರ್ನಾಟಕ ಮತ್ತು ಮಂತ್ರಾಲಯಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಮಂತ್ರಾಲಯದಲ್ಲಿ ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆಯಿಂದನೂತನವಾಗಿ ₹4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಪರಂಪರೆಯಲ್ಲಿ ಅನೇಕ ಸಂತರು, ಮಹಂತರು, ದಾಸರು, ಗುರುವರ್ಯರು ಆಗಿ ಹೋಗಿದ್ದಾರೆ. ಜನ ಈಗ 21ನೇ ಶತಮಾನದಲ್ಲಿದ್ದರೂ ದೇಶದ ಇತಿಹಾಸದಲ್ಲಿ ಆಗಿ ಹೋಗಿರುವ ಗುರುಗಳು, ದಾರ್ಶನಿಕರನ್ನು ಶ್ರದ್ಧಾಸ್ಥಾನದಲ್ಲಿಟ್ಟು ಪೂಜೆ ಮಾಡುವ ಪರಿಪಾಠ ಪರಂಪರೆಯಲ್ಲಿದೆ. ಯಾವುದೇ ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದರೂ ಭಾರತೀಯರು ಸಂಸ್ಕಾರ ಬಿಟ್ಟಿಲ್ಲ. ಶರಣರು, ದಾಸರು, ದೇವರೊಂದಿಗೆ ಜನರ ಅವಿನಾಭಾವ ಸಂಬಂಧ ಇದೆ ಎಂದರು.

ADVERTISEMENT

ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ದೇಶ ಭಾರತ. ಅನೇಕ ಭಾಷೆ, ಧರ್ಮ, ವೇಷಗಳಿದ್ದರೂ ಎಲ್ಲರೂ ಭಾರತೀಯರೆಂದು ಇರುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ರಾಜ್ಯ ಮತ್ತು ಬೇರೆ ರಾಜ್ಯಗಳಲ್ಲಿರುವ ದೇವಸ್ಥಾನಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ರಾಜ್ಯದ ಜನರು ಹೆಚ್ಚು ಭೇಟಿನೀಡುವ ಧಾರ್ಮಿಕ ಸ್ಥಾನಗಳಲ್ಲಿ ಛತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಶಿಗೆ ಹೋಗಬೇಕು ಎನ್ನುವುದು ಪ್ರತಿಯೊಬ್ಬರಿಗೂ ಕನಸು. ಪ್ರತಿವರ್ಷ ರಾಜ್ಯದ 30 ಸಾವಿರ ಜನರಿಗೆ ಕಾಶಿದರ್ಶನ ಮಾಡಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರದಿಂದ ಮಾಡಲಾಗಿದೆ.. ಕಾಶಿ ಯಾತ್ರೆ ಮಾಡುವವರಿಗೆ ₹5 ಸಾವಿರ ಸಹಾಯಧನ ಕೂಡಾ ಘೋಷಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಈ ಕರ್ನಾಟಕ ಛತ್ರದಲ್ಲಿ ಸಿಬ್ಬಂದಿ ನೇಮಕ ಮಾಡಲಾಗುವುದು. ಇಲಾಖೆಯಿಂದ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸಲಾಗುವುದು. ಕರ್ನಾಟಕ ಮುಜಾರಾಯಿ ಇಲಾಖೆಯಿಂದ ಸಾಕಷ್ಟು ಬದಲಾವಣೆಗಳನ್ನು ತರುವ ಕೆಲಸವನ್ನು ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮಾಡಲಾಗಿದೆ. ಅರ್ಚಕರಿಗೆ ತಸ್ತಿ ಹೆಚ್ಚಳ ಮಾಡಿರುವುದು, ಜೀವವಿಮೆ ಮಾಡಿರುವುದು, ದೇಶಿ ಗೋವು ಸಂರಕ್ಷಣೆ ಮಾಡುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

‘ಯುಗಾದಿಯನ್ನು ಧಾರ್ಮಿಕ ದಿನಾಚರಣೆ ಎಂದು ನಮ್ಮ ಇಲಾಖೆಯಿಂದ ಆಚರಣೆ ಆರಂಭಿಸಲಾಗಿದೆ. ವರಮಹಾಲಕ್ಷ್ಮೀ ದಿನದಂದು ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಬರುವ ಮುತ್ತೈದೆಯರಿಗೆ ಅರಿಷಿಣ, ಕುಂಕುಮ, ಬಳೆ ಕೊಟ್ಟು ಉಡಿ ತುಂಬುವ ಕಾರ್ಯವನ್ನು ಈ ಸಲ ಯಶಸ್ವಿಯಾಗಿ ಮಾಡಲಾಗಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಮಾತನಾಡಿ, ಸಂಸ್ಕಾರ, ಸಂಸ್ಕೃತಿ ಕರ್ನಾಟಕದಲ್ಲಿ ಪ್ರಬುದ್ಧ ರೀತಿಯಲ್ಲಿವೆ. ಶಾಂತಿಪ್ರಿಯ ನಾಡು, ನೆರೆಹೊರೆಯವರಿಗೆ ಸಹಾಯ ನೀಡುವ ರಾಜ್ಯ ಮುಜಾರಾಯಿ ಇಲಾಖೆಯವರು ಬೇರೆ ರಾಜ್ಯಗಳಲ್ಲಿರುವ ಪುಣ್ಯಕ್ಷೇತ್ರಗಳಲ್ಲಿ ಜನರಿಗೆ ಸೌಕರ್ಯ ಮಾಡುತ್ತಿರುವುದು ಉದಾತ್ತಭಾವದ ಸಂಕೇತ. 1979 ರಲ್ಲಿ ಗುಂಡುರಾವ್‌ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂತ್ರಾಲಯದಲ್ಲಿ ಮೊದಲನೇ ಯಾತ್ರಿ ನಿವಾಸ ನಿರ್ಮಾಣಕ್ಕೆ ಕ್ರಮ ವಹಿಸಿದ್ದರು. 1984ಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಯಾತ್ರಿನಿವಾಸ ಉದ್ಘಾಟಿಸಿದ್ದರು ಎಂದು ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.