ADVERTISEMENT

ಆಡಳಿತ ವ್ಯವಸ್ಥೆ ಪ್ರಶ್ನಿಸಿ, ಸಂಘಟನಾತ್ಮಕ ಹೋರಾಟ ಅಗತ್ಯ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಆರ್. ಮೋಹನ ರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 14:30 IST
Last Updated 3 ಜುಲೈ 2022, 14:30 IST
ರಾಯಚೂರಿನಲ್ಲಿ ಭಾನುವಾರದಿಂದ ನಡೆದ ಕರ್ನಾಟಕ ಜನಶಕ್ತಿಯ 3ನೇ ರಾಜ್ಯ ಸಮ್ಮೇಳನದ ಅವಲೋಕನಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ( ಭೀಮವಾದ) ರಾಜ್ಯ ಸಂಚಾಲಕ ಆರ್. ಮೋಹನ ರಾಜ್ ಮಾತನಾಡಿದರು.
ರಾಯಚೂರಿನಲ್ಲಿ ಭಾನುವಾರದಿಂದ ನಡೆದ ಕರ್ನಾಟಕ ಜನಶಕ್ತಿಯ 3ನೇ ರಾಜ್ಯ ಸಮ್ಮೇಳನದ ಅವಲೋಕನಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ( ಭೀಮವಾದ) ರಾಜ್ಯ ಸಂಚಾಲಕ ಆರ್. ಮೋಹನ ರಾಜ್ ಮಾತನಾಡಿದರು.   

ರಾಯಚೂರು: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸಿ ಮನು ಸಂಸ್ಕೃತಿ ಆಡಳಿತ ನಡೆಸಿ ದೇಶವನ್ನು ಪುರೋಹಿತಶಾಹಿ ವ್ಯವಸ್ಥೆಗೆ ಕೊಂಡೊಯ್ಯಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಆರ್. ಮೋಹನರಾಜ್ ಹೇಳಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರದಿಂದ ಆರಂಭವಾದ ಕರ್ನಾಟಕ ಜನಶಕ್ತಿಯ 3ನೇ ರಾಜ್ಯ ಸಮ್ಮೇಳನದ ಅವಲೋಕನಾ ಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲಿ ಸಂವಿಧಾನದ ಆಶಯದ ವಿರುದ್ಧ ಆಡಳಿತ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಅಣಕಿಸಲಾಗುತ್ತಿದೆ. ಜನಸಾಮಾನ್ಯರ ಪರವಾಗಬೇಕಿದ್ದ ಸರ್ಕಾರ ಕಾರ್ಪೋರೇಟ್ ಹಿತ ಕಾಯುತ್ತಿದೆ ಎಂದು ಆರೋಪಿಸಿದರು.

ADVERTISEMENT

ಸಾಧು ಸಂತರ, ಸೂಫಿಗಳ, ಶಾಂತಿ ಸ್ಥಾಪಿಸಿದ ಬಸವಾದಿ ಶರಣರ ನಾಡಿನಲ್ಲಿ ಮೀಸಲಾತಿ ನಾಶ, ಅಸಮಾನತೆ ಹೆಚ್ಚಾಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಒಂದು ಸಮುದಾಯದ ಆಶಯ ತುರುಕಿಸಿ ಮಕ್ಕಳಲ್ಲಿ ವಿಷಬೀಜ ಬಿತ್ತಲಾಗುತ್ತಿದೆ.

ಮುಸ್ಲಿಂ, ಕ್ರೈಸ್ತ, ಪರಿಶಿಷ್ಟರನ್ನು, ರೈತರನ್ನು ಗುರಿಯಾಗಿಸಿ ಅನೇಕ ಕಾಯ್ದೆ ತರುವ ಮೂಲಕ ಪರೀಕ್ಷೆ ಮಾಡಲಾಗುತ್ತಿದೆ. ಆದರೆ ಸಮಸ್ಯೆ ಸೃಷ್ಠಿಸುತ್ತಿರುವವರು ಒಂದೇ ಆಗಿದ್ದರೂ ಎಲ್ಲರೂ ಪ್ರತ್ಯೇಕವಾಗಿ ಹೋರಾಟ ಮಾಡುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಈಗ ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಜನವಿರೋಧಿ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಅನಿವಾರ್ಯವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸಿ ಪರ್ಯಾಯ ವ್ಯವಸ್ಥೆ ನಿರ್ಮಿಸಬೇಕು ಎಂದು ಹೇಳಿದರು.

ಪೀಪಲ್ಸ್ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಸಂಚಾಲಕ ಸಿಗ ಮಾರ್ಕ್ಸ್ ಮಾತನಾಡಿ, ದೇಶದಲ್ಲಿ ಪ್ಯಾಸಿಸಂ ಶಕ್ತಿ ಪ್ರಭಲವಾಗುತ್ತಿದ್ದು ಕಳವಳಕಾರಿ ಸಂಗತಿ. ಸಂಘಟನಾತ್ಮಕ ಶಕ್ತಿಯ ಮೂಲಕ ಪ್ಯಾಸಿಸಂಯನ್ನು ತಡೆಗಟ್ಟಬೇಕು. ಜನಶಕ್ತಿ ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿದ್ದು ಇಂತಹ ಸಂಘಟನೆಗಳ ಜೊತೆ ಕೈಜೋಡಿಸಿ ಬಲಪಡಿಸಬೇಕಿದೆ ಎಂದು ಹೇಳಿದರು.

ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಅವರು ಜನಶಕ್ತಿಯ 10 ವರ್ಷಗಳ ಪಯಣದ ಕುರಿತು ಮಾತನಾಡಿ, ಜನಶಕ್ತಿ ಮೂಲಕ ತೃಪ್ತಿದಾಯಕ ಕೆಲಸ ಮಾಡಿದರೂ ಸಾಧಿಸುವುದು ಇನ್ನು ಬಹಳವಿದೆ ಕಾರ್ಯಕರ್ತರು ಆತ್ಮವಲೋಕನ ಮಾಡಿಕೊಳ್ಳಬೇಕು. ಕಾರ್ಯಕರ್ತರೇ ನಮಗೆ ಜೀವಾಳ ಎಂದು ಹೇಳಿದರು.

ಇದೇ ವೇಳೆ ಜನಶಕ್ತಿಯ ಕಾರ್ಯಸಾಧನೆಯ ಕುರಿತು ಸಾರ್ವಜನಿಕರಿಂದ ಪ್ರಶ್ನೋತ್ತರ, ಸಮಾಲೋಚನೆ ನಡೆಸಲಾಯಿತು.

ಮಾದಿಗ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ, ಸಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ವಿಮುಕ್ತ ಸಂಸ್ಥೆ ಮಾನ್ವಿ ಘಟಕದ ಮುಖಂಡ ಫಾದರ್ ಸತೀಶ ಫರ್ನಾಂಡೀಸ್, ಕರ್ನಾಟಕ ಜನಾಂದೋಲನದ ರಾಜ್ಯ ಸಂಚಾಲಕ ಮರಿಯಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಜ ಬಿ.ಮಾಧವರೆಡ್ಡಿ, ಮದ್ಯ ನಿಷೇಧ ಸಂಘಟನೆಯ ಸಂಚಾಲಕಿ ಮೋಕ್ಷಮ್ಮ, ಮಾನ್ವಿಯ ಲೊಯೋಲಾ ಸಂಸ್ಯತೆಯ ಸಾಮಾಜಿಕ ಕಾರ್ಯಕರ್ತ ರವೀಂದ್ರ ಜಾನೆಕಲ್, ಸತೀಶ ಅರವಿಂದ್, ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.