ADVERTISEMENT

ರಾಯಚೂರು | ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಲಿ: ಲೋಕಾಯುಕ್ತ ಬಿ. ವೀರಪ್ಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:18 IST
Last Updated 26 ಜುಲೈ 2025, 7:18 IST
ರಾಯಚೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಬೆಂಗಳೂರಿನಿಂದ ನಡೆಸಿದ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ರಾಯಚೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಬೆಂಗಳೂರಿನಿಂದ ನಡೆಸಿದ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ರಾಯಚೂರು: ‘ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಬೇಕು. ಫಲಾನುಭವಿಗಳ ಆಯ್ಕೆಯಲ್ಲೂ ಅಧಿಕಾರಿಗಳು ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಹೇಳಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ವಿಲೇವಾರಿಗೆ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೊ ಸಂವಾದ ನಡೆಸಿ ಅವರು ಮಾತನಾಡಿದರು.

‘ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಅನರ್ಹರಿಗೆ ಅವಕಾಶ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ನಿಯಮಾವಳಿಯಂತೆ ಯೋಜನೆಗಳಿಗೆ ಅರ್ಹರನ್ನೇ ಆಯ್ಕೆ ಮಾಡಿ ಸಾಮಾಜಿಕ ನ್ಯಾಯ ಕಾಪಾಡಬೇಕು’ ಎಂದು ಸಲಹೆ ಮಾಡಿದರು.

ADVERTISEMENT

‘ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳಿಗೆ ಅಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಬಾರದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಲ್ಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುತ್ತೋಲೆ ಕಳುಹಿಸಿ ಸೂಚನೆ ನೀಡಬೇಕು’ ಎಂದು ಸೂಚಿಸಿದರು.

‘ಆಸ್ಪತ್ರೆಗಳಲ್ಲಿ ಅವಶ್ಯಕವಾದ ಸಿಟಿ ಸ್ಕ್ಯಾನ್ ಎಂಆರ್‌ಐ ಸ್ಕ್ಯಾನಿಂಗ್ ಮಷಿನ್‌ಗಳು ಇರುವಂತೆ ನೋಡಿಕೊಳ್ಳಬೇಕು. ರಾಜೀವ್ ಗಾಂಧಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಒಪೆಕ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಸಹ ಸರಿಯಾದ ನಿಯಮಗಳು ಪಾಲನೆ ಆಗಬೇಕು’ ಎಂದು ಸೂಚನೆ ನೀಡಿದರು.

ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಎಲ್ಲ ಮೂಲಸೌಕರ್ಯಗಳು ದೊರಕುವಂತೆ ನೋಡಿಕೊಳ್ಳಬೇಕು. ಅನಿರೀಕ್ಷಿತ ಭೇಟಿ ವೇಳೆ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ:

ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳು ಇರುವುದಿಲ್ಲ. ವಿದ್ಯುತ್ ಪ್ರವರ್ತಕ ಬೇಕು ಎಂದು ಎಷ್ಟೇ ಸಲ ಅಲೆದಾಡಿದರೂ ಸಕಾಲಕ್ಕೆ ಕೊಡುವುದಿಲ್ಲ ಎಂದು ಹಳ್ಳಿಯ ಜನರಿಂದ ದೂರುಗಳು ಹೆಚ್ಚುತ್ತಿವೆ. ಹೀಗಾಗಿ ಜೆಸ್ಕಾಂ ಅಧಿಕಾರಿಗಳು ಜಾಗೃತೆಯಿಂದ ಕೆಲಸ ಮಾಡಬೇಕು. ಗ್ರಾಮಸ್ಥರಿಗೆ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ‘ಉಪಲೋಕಾಯುಕ್ತರು ರಾಯಚೂರ ಭೇಟಿ ನೀಡುವ ವೇಳೆಯೊಳಗೆ, ಆಯಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕ ದೂರುಗಳ ಬಗ್ಗೆ ಗಮನ ಹರಿಸಿ ವಿಲೇವಾರಿಗೆ ಕ್ರಮವಹಿಸಬೇಕು. ಆರೋಗ್ಯ ಇಲಾಖೆ, ಜೆಸ್ಕಾಂ, ನಗರಾಭಿವೃದ್ದಿ ಕೋಶ, ನರೇಗಾ ಯೋಜನೆಯ ಅಧಿಕಾರಿಗಳು ದೂರುಗಳ ವಿಲೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಮಾತನಾಡಿ, ‘ಪಿಡಿಒಗಳು ಲೋಕಾಯುಕ್ತರು ಸಭೆ ನಡೆಸಿ ತಿಳಿಸಿದ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಪ್ರತಿಯೊಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಶಿಸ್ತುಬದ್ದವಾಗಿ ಗಟಾರು ನಿರ್ಮಾಣ, ಬೀದಿದೀಪ ಅಳವಡಿಕೆ, ಗ್ರಾಮದ ಶುಚಿತ್ವ ಮತ್ತು ನರೇಗಾ ಯೋಜನೆ ಸಮರ್ಪಕ ಅನುಷ್ಠಾನದ ಬಗ್ಗೆ ಗಮನ ಹರಿಸಬೇಕು’ಎಂದು ಸೂಚನೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್ ಎ ಸಾತ್ವಿಕ್, ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ ಚಿಟಗುಪ್ಪಿ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ದೊರಕುವಂತೆ ನೋಡಿಕೊಳ್ಳಬೇಕು
ಬಿ. ವೀರಪ್ಪ ಉಪ ಲೋಕಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.