ADVERTISEMENT

ಮಂತ್ರಾಲಯದಲ್ಲಿ ಯಾತ್ರಿ ನಿವಾಸ 2ನೇ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 14:40 IST
Last Updated 9 ಆಗಸ್ಟ್ 2022, 14:40 IST
ಮಂತ್ರಾಲಯದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಮಂಗಳವಾರ ಉದ್ಘಾಟಿಸಿದರು. ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಇದ್ದರು.
ಮಂತ್ರಾಲಯದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಮಂಗಳವಾರ ಉದ್ಘಾಟಿಸಿದರು. ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಇದ್ದರು.   

ರಾಯಚೂರು: ಮಂತ್ರಾಲಯದಲ್ಲಿ ನೂತನವಾಗಿ ₹4 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕರ್ನಾಟಕದ ಯಾತ್ರಿ ನಿವಾಸ ಎರಡನೇ ಘಟಕವನ್ನು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಮಂಗಳವಾರ ಉದ್ಘಾಟಿಸಿದರು.

ಆನಂತರ ಮಾತಮಾಡಿದ ಅವರು, 2012–13 ರಲ್ಲಿ ಈ ಛತ್ರದ ನಿರ್ಮಾಣ ಮುಗಿದರೂ ಕಾರಣಾಂತರಗಳಿಂದ ಇದರ ಉದ್ಘಾಟನೆ ವಿಳಂಬವಾಗಿದೆ. ಕೋವಿಡ್‌ ಮಹಾಮಾರಿ ಇದಕ್ಕೆ ಕಾರಣ. ಆಗಸ್ಟ್‌ 10 ರಿಂದ ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ ಆರಂಭವಾಗುವುದರಿಂದ ಭಕ್ತರು ಉಳಿದುಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಈಗ ಉದ್ಘಾಟನೆ ನೆರವೇರಿಸಲಾಗಿದೆ ಎಂದರು.

ಇದೇ ರೀತಿ ಮಹಾರಾಷ್ಟ್ರದ ಫಂಡರಪುರದಲ್ಲಿಯೂ ಕರ್ನಾಟಕ ಛತ್ರವೊಂದನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ ₹50 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಜತ್ತ ಜಿಲ್ಲೆಯ ಗುಡ್ಡಾಪುರ ದಾನಮ್ಮ ದೇವಸ್ಥಾನ ಇರುವ ಸುಕ್ಷೇತ್ರದಲ್ಲಿ ₹7 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ.

ADVERTISEMENT

ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶ್ರೀಶೈಲದಲ್ಲಿ ₹85 ಕೋಟಿ ವೆಚ್ಚದಲ್ಲಿ ಭವನ ಮಾಡಲಾಗುತ್ತಿದೆ. ಮಂತ್ರಾಲಯದಲ್ಲಿ ರಾಜ್ಯ ಭಕ್ತರ ಅನುಕೂಲಕ್ಕಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕೆ ಮತ್ತೆ ₹4 ಕೋಟಿ ಅನುದಾನ ಒದಗಿಸಲಾಗುತ್ತಿದ್ದು, ಅಗತ್ಯಬಿದ್ದರೆ ಮತ್ತಷ್ಟು ಅನುದಾನ ಕೊಡಲಾಗುವುದು ಎಂದು ಭರವಸೆ ನೀಡಿದರು.

ಕೇರಳದಲ್ಲಿ ಶಬರಿ ಮಲೆಯಲ್ಲಿ ₹5 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸವನ್ನು ಮೊದಲ ಹಂತದ ಕಾಮಗಾರಿ ಆರಂಭಿಸಲಾಗಿದೆ. ಅಯೋಧ್ಯೆಯಲ್ಲೂ ಭವನ ನಿರ್ಮಾಣಕ್ಕೆ ಜಾಗ ಕಲ್ಪಿಸುವಂತೆ ಅಲ್ಲಿನ ಮುಖ್ಯಮಂತ್ರಿಗೆ ರಾಜ್ಯದಿಂದ ಪತ್ರ ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು.

ವಿಶೇಷ ರೈಲು: ಮುಜರಾಯಿ ಇಲಾಖೆಯಿಂದ ’ಭಾರತ ಗೌರವ‘ ವಿಶೇಷ ರೈಲು ಈ ತಿಂಗಳ ಕೊನೆಯ ವಾರದಿಂದ ಪ್ರಾರಂಭಿಸಲಾಗುತ್ತಿದೆ. 14 ಬೋಗಿಗಳ ರೈಲು ಇದಾಗಿರುತ್ತದೆ. ಬೆಂಗಳೂರಿನಿಂದ ಕಾಶಿ, ಅಯೋಧ್ಯೆ, ಪ್ರಯಾಗ ತಲುಪಿ, ಅಲ್ಲಿಂದ ಮರಳಿ ಬೆಂಗಳೂರಿಗೆ ಬರುವ ವ್ಯವಸ್ ಮಾಡುತ್ತಿದ್ದೇವೆ. ರೈಲು ಬೋಗಿಗಳಲ್ಲಿ ಒಂದು ಬೋಗಿಯನ್ನು ದೇವಸ್ಥಾನದ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದು, ಅದರಲ್ಲಿ ಭಜನೆ ಕೀರ್ತನೆಗಳನ್ನು ಮಾಡುವುದಕ್ಕೆ ಅನುಕೂಲ ಮಾಡಲಾಗಿದೆ.

ಹೊರನೋಟದಲ್ಲಿ ಸಾಮಾನ್ಯ ರೈಲು ಇದಾಗಿರುವುದಿಲ್ಲ. ರಾಜ್ಯದಲ್ಲಿರುವ ಎ ಗ್ರೇಡ್‌ ದೇವಸ್ಥಾನಗಳ ಚಿತ್ರವು ಆ ರೈಲು ಬೋಗಿಗಳ ಮೇಲಿರುತ್ತವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ₹700 ಕೋಟಿಗಿಂತಲೂ ಅಧಿಕ ಅನುದಾನವನ್ನು ಮುಜರಾಯಿ ಇಲಾಖೆಗೆ ಹಂಚಿಕೆ ಮಾಡಿದ್ದಾರೆ ಎಂದರು.

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಸಾನಿಧ್ಯ ವಹಿಸಿದ್ದರು. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.