ADVERTISEMENT

ಕವಿತಾಳ | ಧಾರಾಕಾರ ಮಳೆ: ಬೆಳೆ ಹಾನಿ

ನೆಲಕಚ್ಚಿದ ಭತ್ತ, ಗಿಡದಲ್ಲಿ ಕೊಳೆಯುತ್ತಿರುವ ಹತ್ತಿ, ಚೆಂಡು ಹೂವು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 4:53 IST
Last Updated 25 ಅಕ್ಟೋಬರ್ 2025, 4:53 IST
ಕವಿತಾಳ ಸಮೀಪದ ಹುಸೇನಪುರದಲ್ಲಿ ಮಳೆಗೆ ತೊಯ್ದು ಹಾಳಾದ ಚೆಂಡು ಹೂವು
ಕವಿತಾಳ ಸಮೀಪದ ಹುಸೇನಪುರದಲ್ಲಿ ಮಳೆಗೆ ತೊಯ್ದು ಹಾಳಾದ ಚೆಂಡು ಹೂವು   

ಕವಿತಾಳ: ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಳೆಗಳು ನೆಲ ಕಚ್ಚಿವೆ.

ಸಮೀಪದ ಹುಸೇನಪುರ, ಸೈದಾಪುರ, ಗುಡದಿನ್ನಿ, ಕಡ್ಡೋಣಿ ತಿಮ್ಮಾಪುರ ಮತ್ತು ತೊಪ್ಪಲದೊಡ್ಡಿ ವ್ಯಾಪ್ತಿಯಲ್ಲಿ ಹತ್ತಿ ಬೆಳೆಗೆ ಬಹುತೇಕ ಹಾನಿಯಾಗಿದೆ. ಕೂಲಿಕಾರರ ಕೊರತೆಯಿಂದ ಬಿಡಿಸಲು ಸಾಧ್ಯವಾಗದ ಹತ್ತಿ ಮಳೆಗೆ ತೊಯ್ದು ಹಾಳಾಗಿದೆ.

‘ಆಗಾಗ ಮಳೆ ಸುರಿದ ಪರಿಣಾಮ ಹುಸೇನಪುರದಲ್ಲಿ ಅಂದಾಜು 6 ಎಕರೆ ಪ್ರದೇಶದಲ್ಲಿ ಬೆಳೆದ ಚೆಂಡು ಹೂವು ತೊಯ್ದು ಗಿಡದಲ್ಲಿಯೇ ಕೊಳೆಯುತ್ತಿದೆ. ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲೂ ಮಾರಾಟ ಸಾಧ್ಯವಾಗಿಲ್ಲ. ಮಳೆ ಬಾರದಿದ್ದರೆ ಗೌರಿ ಹುಣ್ಣಿಮೆಗಾದರೂ ಸ್ವಲ್ಪ ಮಟ್ಟಿನ ಹೂವು ಮಾರಾಟ ಮಾಡಬಹುದಿತ್ತು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತರಾದ ಈರಣ್ಣ ಮತ್ತು ಶಿವಲಿಂಗಪ್ಪಗೌಡ ಅಳಲು ತೋಡಿಕೊಂಡರು.

ADVERTISEMENT

‘‌ಧಾರಾಕಾರ ಮಳೆ ಹಾಗೂ ಜೋರಾಗಿ ಬೀಸಿದ ಗಾಳಿಯಿಂದ ಭತ್ತ ನೆಲಕ್ಕುರಿಳಿದ್ದು ನಷ್ಟ ಉಂಟಾಗಿದೆ’ ಎಂದು ಗೂಗೆಬಾಳ ಗ್ರಾಮದ ರೈತ ಮೃತ್ಯುಂಜಯಸ್ವಾಮಿ ಹೇಳಿದರು.

‘ಕೂಲಿ ಕಾರ್ಮಿಕರು ಸಿಗದೆ ಹತ್ತಿ ಬಿಡಿಸಲು ಸಾಧ್ಯವಾಗುತ್ತಿಲ್ಲ, 50 ಕಿ.ಮೀ ದೂರದ ಸಿಂಧನೂರು ತಾಲ್ಲೂಕಿನಿಂದ ಕೂಲಿಕಾರರನ್ನು ಕರೆಸಬೇಕಿದೆ. ಮಳೆ ಸುರಿದ ಪರಿಣಾಮ ಹತ್ತಿ ಕಾಯಿಗಳು ಕೊಳೆಯುತ್ತಿದೆ ಮತ್ತು ಅರಳಿದ ಹತ್ತಿ ತೊಯ್ದು ಹಾಳಾಗುತ್ತಿದೆ’ ಎಂದು ರೈತರಾದ ದೇವಪ್ಪ, ಬಸವರಾಜಪ್ಪ ಮತ್ತು ದುರುಗಪ್ಪ ತಿಳಿಸಿದರು.

ಕವಿತಾಳ ಸಮೀಪದ ಗೂಗೆಬಾಳ ಸುತ್ತಮುತ್ತ ಗುರುವಾರ ರಾತ್ರಿ ಸುರಿದ ಮಳೆಯಿಂದ ಭತ್ತದ ಬೆಳೆ ನೆಲಕಚ್ಚಿರುವುದು
3 ಎಕರೆಯಲ್ಲಿ ಚೆಂಡು ಹೂವು ಬೆಳೆಯಲು ₹2 ಲಕ್ಷ ಖರ್ಚಾಗಿದೆ. ಸತತ ಮಳೆಯಿಂದ ಹೂವು ಹಾಳಾಗಿದ್ದು ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವಾಗಿದೆ. ಹಬ್ಬದ ಸಂದರ್ಭದಲ್ಲೂ ಹೂವು ಮಾರಾಟ ಸಾಧ್ಯವಾಗಿಲ್ಲ 
ಶಿವಲಿಂಗಪ್ಪಗೌಡ ಹುಸೇನಪುರದ ರೈತ
ಚೆಂಡು ಹೂವು ಬೆಳೆ ಹಾನಿ ಕುರಿತು ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬೇಕು
  ಈರಣ್ಣ ಹುಸೇನಪುರದ ರೈತ
ಕಾಳು ಕಟ್ಟುವ ಹಂತದಲ್ಲಿದ್ದ 15 ಎಕರೆ ಭತ್ತದ ಬೆಳೆ ಧಾರಾಕಾರ ಮಳೆಗೆ ನೆಲಕ್ಕುರುಳಿದೆ ಪ್ರತಿ ಎಕರೆಗೆ ₹40 ಸಾವಿರ ಖರ್ಚಾಗಿದ್ದು ನಷ್ಟ ಅನುಭವಿಸುವಂತಾಗಿದೆ
ಮೃತ್ಯುಂಜಯಸ್ವಾಮಿ ಗೂಗೆಬಾಳದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.