ADVERTISEMENT

ಚನ್ನಮ್ಮಳ ಸಾಹಸ ಪ್ರತಿ ಮಹಿಳೆಗೂ ಆದರ್ಶ

ರಾಯಚೂರು ತಾಲ್ಲೂಕು ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 15:07 IST
Last Updated 23 ಅಕ್ಟೋಬರ್ 2021, 15:07 IST
ರಾಯಚೂರಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಮಾತನಾಡಿದರು
ರಾಯಚೂರಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಮಾತನಾಡಿದರು   

ರಾಯಚೂರು: ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ಅವರ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ರಾಯಚೂರು ತಾಲ್ಲೂಕು ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ನಗರದ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾಗಿದೆ ಎಂದರು.

‘ಚನ್ನಮ್ಮ ಅವರು ರಾಜ ಮನೆತನದವರಾಗಿದ್ದರಿಂದ ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ಬಳಸುವ ಪರಿಗಳ ಬಗ್ಗೆ ತರಬೇತಿ ಪಡೆದಿದ್ದರು. ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ. ಹಾಗಾಗಿ ಅವರ ಜನ್ಮ ದಿನವನ್ನು ಬೆಳಗಾವಿ ಜಿಲ್ಲಾಡಳಿತದಿಂದ ಕಿತ್ತೂರಿನ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ‘ ಎಂದರು.

ADVERTISEMENT

ಇಂದಿನ ದಿನದಲ್ಲಿ ಸ್ಪರ್ಧೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಶಿಸ್ತಿನಿಂದ ಅಭ್ಯಾಸ ಮಾಡಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ತಂದೆ-ತಾಯಿಯರಿಗೆ ಗೌರವ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ದಸ್ತಗಿರಿ ಸಾಬ್ ದಿನ್ನಿ ಅವರು ಉಪನ್ಯಾಸ ನೀಡಿ, ಬ್ರಿಟಿಷ್‌ ಸರ್ಕಾರ ಜಾರಿಗೊಳಿಸಿದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯನ್ನು ವಿರೋಧಿಸಿದ ರಾಣಿ ಚನ್ನಮ್ಮ ಅವರು ಬ್ರಿಟಿಷರಿಗೆ ಸಲ್ಲಿಸಬೇಕಾಗಿದ್ದ ಕಪ್ಪ ಕಾಣಿಕೆ ಕೊಡುವುದನ್ನು ನಿರಾಕರಿಸಿದ್ದ ವೀರ ಮಹಿಳೆ ಎಂದು ಬಣ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವಿ. ನಾಯಕ ಮುಖಂಡ ವೀರೇಶಗೌಡ, ಮುರುಳಿಧರ್ ಕುಲಕರ್ಣಿ ಸೇರಿದಂತೆ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಉಪನ್ಯಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.