ADVERTISEMENT

ವಾಸ್ತವಿಕ ಸತ್ಯ ಅರಿತು ಮುನ್ನಡೆಯಿರಿ: ಚಂದ್ರಶೇಖರ್‌

ಮನೋವೈದ್ಯ ಡಾ.ಸಿ.ಅರ್.ಚಂದ್ರಶೇಖರ್‌ ಅವರಿಂದ ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 12:56 IST
Last Updated 20 ನವೆಂಬರ್ 2021, 12:56 IST
ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನಿಂದ ಮಕ್ಕಳ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸವನ್ನು ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ್‌ ಉದ್ಘಾಟಿಸಿದರು
ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನಿಂದ ಮಕ್ಕಳ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸವನ್ನು ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ್‌ ಉದ್ಘಾಟಿಸಿದರು   

ರಾಯಚೂರು: ವಿದ್ಯಾರ್ಥಿಗಳು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ ವಾಸ್ತವಿಕ ಸತ್ಯ ಅರಿತು ಮುನ್ನಡೆಯಬೇಕು ಎಂದು ಮನೋವೈದ್ಯ ಡಾ.ಸಿ.ಅರ್.ಚಂದ್ರಶೇಖರ್‌ ಸಲಹೆ ನೀಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನಿಂದ ಮಕ್ಕಳ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ‘ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಭಯ ನಿವಾರಣೆ’ ವಿಷಯ ಕುರಿತು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಅಧಿಕಾರ, ಸ್ಥಾನ, ಹಣಗಳಿಕೆ, ಪ್ರಶಸ್ತಿ, ಪುರಸ್ಕಾರ ಗಳಿಕೆಯಲ್ಲಿ ವಿಪರೀತ ಸ್ಪರ್ಧೆ ಮತ್ತು ವೇಗವಿದೆ. ವಿದ್ಯಾರ್ಥಿಗಳು ತನ್ನ ಇತಿಮಿತಿ ಶಕ್ತಿ, ದೌರ್ಬಲ್ಯಗಳನ್ನು ಅರ್ಥೈಸಿಕೊಂಡು ಸೋಲು, ಗೆಲುವಿಗೆ ಸಿದ್ದರಾಗಬೇಕು. ಸೋತಾಗ ನಿರಾಶರಾಗದೆ ಕುಗ್ಗದೆ ಸೋಲನ್ನು ಸಮರ್ಥವಾಗಿ ಎದುರಿಸಬೇಕು. ಆಸೆ ಇರಬೇಕು ಆದರೆ ದುರಾಸೆ ಇರಬಾರದು. ಗಳಿಸಿದರಲ್ಲಿ ತೃಪ್ತಿ ಹೊಂದಿರಬೇಕು. ಜೀವನದ ಸಾಧನೆಯ ಹಾದಿಯಲ್ಲಿ ಸೋತಾಗ ಧೈರ್ಯದಿಂದ ಮತ್ತೆ ಪ್ರಯತ್ನಿಸಬೇಕು ಎಂದು ತಿಳಿಸಿದರು.

ADVERTISEMENT

ಒಂಟಿತನ, ಅನಾಥಪ್ರಜ್ಞೆ ,ತುಂಬಾನೋವು, ಹಿಂಸೆ, ಅಸಹಾಯಕತೆ, ಇವುಗಳು ಮನುಷ್ಯನ ನೆಮ್ಮದಿ ಕೆಡಿಸುತ್ತವೆ. ಆದ್ದರಿಂದ ಜನರ ಸಂಪರ್ಕದಲ್ಲಿರಬೇಕು. ತಂದೆ-ತಾಯಿ, ಬಂದು-ಬಳಗ, ಗುರು-ಹಿರಿಯರ ಜೊತೆ ಇರಬೇಕು. ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು. ಸದಾ ಚಟುವಟಿಕೆಯಿಂದಿರಬೇಕು. ದೇವರಲ್ಲಿ ನಂಬಿಕೆಯಿಟ್ಟು, ಪ್ರಾರ್ಥನೆ ಮಾಡಬೇಕು. ದೀನ-ದುರ್ಬಲರಿಗೆ ನೆರವಾಗಬೇಕು. ಕೋಪ ಆಕ್ರಮಣಶೀಲತೆ, ದ್ವೇಷ, ಹಾನಿ, ಹಿಂಸೆಯನ್ನು ತ್ಯಜಿಸಿ ದುಃಖ, ಭಯಗಳು ನಮ್ಮ ಉತ್ಸಾಹ ಸಾಮರ್ಥ್ಯವನ್ನು ಕುಗ್ಗಿಸುತ್ತವೆ ಎಂದು ಹೇಳಿದರು.

ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಗಮನಹರಿಸಬೇಕು. ಆಹಾರವೇ ಅಮೃತ. ಆದ್ದರಿಂದ ಆರೋಗ್ಯವೃದ್ಧಿಸಿಕೊಳ್ಳಲು ಹೆಚ್ಚು ತರಕಾರಿ, ಸೊಪ್ಪು, ಹಣ್ಣು ಬೇಳೆ ಕಾಳುಗಳನ್ನು ಸ್ವೀಕರಿಸಬೇಕು. ಸಿದ್ದಪಡಿಸಿಟ್ಟಿದ್ದ ಜಂಕ್-ಫುಡ್‌ಗಳನ್ನು ತಿನ್ನಬಾರದು. ಅಲ್ಲದೆ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಲಘು ವ್ಯಾಯಾಮ, ವಾಕಿಂಗ್, ಈಜು ಮಾಡಬೇಕು. ವೈಯಕ್ತಿಕ ಸ್ವಚ್ಛತೆ ಮತ್ತು ಮನೆ ಹಾಗೂ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರಶಾಂತವಾದ ಮನಸ್ಸನ್ನು ಹೊಂದಿರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಯಕ ಎಜ್ಯುಕೇಷನ್‌ ಟ್ರಸ್ಟ್‌ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ ಮಾತನಾಡಿ, ಡಾ. ಸಿ.ಆರ್.ಚಂದ್ರಶೇಖರ್‌ ಅವರು ನಿಜವಾದ ಸಾಧಕರು. ಯುವ ಜನಾಂಗಕ್ಕೆ ದಾರಿದೀಪ ಮಾರ್ಗದರ್ಶಕರಾಗಿದ್ದಾರೆ. ಅವರ ಪ್ರತಿಯೊಂದು ಮಾತು ಮುತ್ತಿನಂತಿವೆ. ಇವರ ಮಾತು ಭವಿಷ್ಯಕ್ಕೆ ಬೆಳಕು ತೋರಿಸುತ್ತವೆ ಎಂದು ಹೇಳಿದರು.

ವಿಶೇಷ ಉಪನ್ಯಾಸದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ಮನೋವೈದ್ಯರಾದ ಡಾ. ಮನೋಹರ ಪತ್ತಾರ, ಮುಖಂಡರಾದ ಭೋಜನಗೌಡ ಹೊಸಪೇಟ, ವೀರಶೈವ ಸಮಾಜದ ಕಾರ್ಯಕಾರಿ ಅಧಿಕಾರಿ ಶರಣರೆಡ್ಡಿ ಪಾಟೀಲ, ಹಂಪಣ್ಣಚೆಟ್ಟಿ, ಪ್ರಾಂಶುಪಾಲ ವಿರುಪಣ್ಣಗೌಡ ಪಾಟೀಲ, ಪ್ರಭುಗೌಡ, ಕರುಣೇಶ್ ಹಿರೇಮಠ, ಶರಣಗೌಡ ಮಾಲಿಪಾಟೀಲ ಇದ್ದರು. ಗುರುರಾಜ ಕುಲಕರ್ಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.