ADVERTISEMENT

ಎಕರೆಗೆ ₹ 50 ಸಾವಿರ ಪರಿಹಾರ ನೀಡಿ

ಮಿನಿವಿಧಾನಸೌಧ ಮುಂದೆ ಕೆಆರ್‌ಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 11:07 IST
Last Updated 24 ನವೆಂಬರ್ 2021, 11:07 IST
ಸಿಂಧನೂರಿನ ಮಿನಿವಿಧಾನಸೌಧ ಮುಂದೆ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕ ಮಂಗಳವಾರ ಪ್ರತಿಭಟಿಸಿ ಶಿರಸ್ತೇದಾರ್ ಚಂದ್ರಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಿತು
ಸಿಂಧನೂರಿನ ಮಿನಿವಿಧಾನಸೌಧ ಮುಂದೆ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕ ಮಂಗಳವಾರ ಪ್ರತಿಭಟಿಸಿ ಶಿರಸ್ತೇದಾರ್ ಚಂದ್ರಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಿತು   

ಸಿಂಧನೂರು: ಅಕಾಲಿಕ ಮಳೆಯಿಂದ ಬೆಳೆಹಾನಿಯಾಗಿರುವ ರೈತರ ಪ್ರತಿ ಎಕರೆಗೆ₹ 50 ಸಾವಿರ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಹಾಗೂ ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್‍ಗಳಿಂದ ಸಾಲ ವಸೂಲಾತಿ ತಡೆ ಹಿಡಿಯಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕ ಮಂಗಳವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟಿಸಿತು.

ಕಟಾವು ಮಾಡುವ ಸಮಯದಲ್ಲಿ ಅಕಾಲಿಕ ಮಳೆಯಿಂದ ಭತ್ತ ಸಂಪೂರ್ಣ ನೆಲಕ್ಕುರುಳಿದೆ. ಒಣಬೇಸಾಯ ಪ್ರದೇಶವಾದ ತುರ್ವಿಹಾಳ ಹೋಬಳಿಯಲ್ಲಿ 4989 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದ್ದು, ಅತಿಯಾದ ಮಳೆಯಿಂದ ಗಿಡದಲ್ಲಿಯೇ ಮೊಳಕೆ ಒಡೆದು ಬೆಳೆಯು ಸಂಪೂರ್ಣವಾಗಿ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ
ಸರ್ವೆ ಕಾರ್ಯ ಆರಂಭಿಸಿ, ಸೂಕ್ತ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ ಒತ್ತಾಯಿಸಿದರು.

ತೊಗರಿ ಬೆಳೆ ಸೇರಿದಂತೆ ಇತರೆ ಬೆಳೆಗಳಿಗೆ ಪ್ರತಿ ಎಕರೆಗೆ ₹ 30 ಸಾವಿರ ಪರಿಹಾರ ಘೋಷಿಸಬೇಕು. ಭೂ ರಹಿತ ಕೃಷಿ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಸಾಗುವಳಿ ಮಾಡುತ್ತಿದ್ದು, ಅವರಿಗೆ ಪರಿಹಾರ ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಬೇಕು. ಹೋಬಳಿಗೊಂದರಂತೆ ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಡಾ.ಸ್ವಾಮಿನಾಥನ್ ವರದಿ ಆಧಾರಿತ ಬೆಲೆ ನಿಗದಿ ಮಾಡುವವರೆಗೆ ಸಾಲ ವಸೂಲಾತಿಗೆ ತಡೆಯಾಜ್ಞೆ ಸರ್ಕಾರ ನೀಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿರಸ್ತೇದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ತಾಲ್ಲೂಕು ಘಟಕದ ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಉಪಾಧ್ಯಕ್ಷ ಚಿಟ್ಟಿಬಾಬು, ಮುಖಂಡರಾದ ರಾಘುವೇಂದ್ರ ಉಪ್ಪಳ, ಗಂಗರಾಜ ಹೆಚ್, ಮಹಾದೇವ ಅಮರಾಪುರ, ಬಸಪ್ಪ ಕಡಬೂರು, ವಿರುಪಣ್ಣ ಸಂಕನಾಳ, ಯಲ್ಲಪ್ಪ ಭಜಂತ್ರಿ, ಈರಪ್ಪ ಚಿಕ್ಕಬೇರಿಗಿ, ಸರ್ವೇಶರಾವ್, ರೇಣುಕಾ, ಯಂಕಪ್ಪ, ಬಂಗಾರಪ್ಪ, ಗಫೂರ್, ರಾಜಶೇಖರ, ವೀರೇಶ ಕೆಂಗಲ್, ಪಂಪಾಪತಿ, ಮಹ್ಮದ್ ಅಲಿ, ಅಂಜನಪ್ಪ, ಬಸವರಾಜ ಬುಕ್ಕನಹಟ್ಟಿ, ನಾಗರಾಜ ಗೋಮರ್ಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.