ADVERTISEMENT

ರಾಯಚೂರು | ನಿರಂತರ ತಾಂತ್ರಿಕ ದೋಷ: ಅಪಘಾತಕ್ಕೀಡಾಗುತ್ತಿರುವ ಅವಧಿ ಮೀರಿದ ಬಸ್‌ಗಳು

ಚಂದ್ರಕಾಂತ ಮಸಾನಿ
Published 1 ಡಿಸೆಂಬರ್ 2025, 6:03 IST
Last Updated 1 ಡಿಸೆಂಬರ್ 2025, 6:03 IST
ರಾಯಚೂರು ಹೊರವಲಯದ ಸಾಥ್‌ಮೈಲ್ ಕ್ರಾಸ್ ಬಳಿ ಸೆಪ್ಟೆಂಬರ್ 26ರಂದು ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ ಪ್ರಯಾಣಿಕರೊಬ್ಬರ ಕಾಲು ಮುರಿದ ಕಾರಣ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಸ್ಟ್ರೆಚ್ಚರ್‌ನಲ್ಲಿ ಸಾಗಿಸಿದರು
ರಾಯಚೂರು ಹೊರವಲಯದ ಸಾಥ್‌ಮೈಲ್ ಕ್ರಾಸ್ ಬಳಿ ಸೆಪ್ಟೆಂಬರ್ 26ರಂದು ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ ಪ್ರಯಾಣಿಕರೊಬ್ಬರ ಕಾಲು ಮುರಿದ ಕಾರಣ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಸ್ಟ್ರೆಚ್ಚರ್‌ನಲ್ಲಿ ಸಾಗಿಸಿದರು   

ರಾಯಚೂರು: ರಸ್ತೆ ಸಾರಿಗೆ ಸಂಸ್ಥೆಯ ಏಸಿ ಸ್ಲೀಪರ್‌ ಹಾಗೂ ನಾನ್‌ ಏಸಿ ಸ್ಲೀಪರ್‌ ಬಸ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅಲ್ಲಲ್ಲಿ ಉರುಳಿ ಬೀಳಲಾರಂಭಿಸಿವೆ. ಹುಬ್ಬಳ್ಳಿ, ಬೆಳಗಾವಿ ಹಾಗೂ ದಾವಣಗೆರೆ ಮಾರ್ಗದಲ್ಲಿ ಸಂಚರಿಸುತ್ತಿರುವ ನಾನ್‌ ಏಸಿ ಸ್ಲೀಪರ್‌ ಬಸ್‌ಗಳು ಸಾಮರ್ಥ್ಯ ಕಳೆದುಕೊಂಡು ಸಮಯಕ್ಕೆ ಸರಿಯಾಗಿ ತಲುಪದೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಏಸಿ ಸ್ಲೀಪರ್‌ ಹಾಗೂ ನಾನ್‌ ಏಸಿ ಸ್ಲೀಪರ್‌ ಬಸ್‌ಗಳು 12 ಲಕ್ಷ ಕಿ.ಮೀಗಿಂತ ಹೆಚ್ಚು ಓಡಿವೆ. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಹುಬ್ಬಳ್ಳಿ, ಬೆಳಗಾವಿ ಹಾಗೂ ದಾವಣಗೆರೆಗೆ ಹೋಗಿರುವ ಜನರು ಇದೀಗ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಸುರಕ್ಷಿತವಾಗಿ ಹೋಗಿ ಬರಲು ಸಾಧ್ಯವೆ? ಎಂದು ಸಂಶಯ ಪಡಲು ಆರಂಭಿಸಿದ್ದಾರೆ.

ಖಾಸಗಿ ಬಸ್‌ಗಳಿಗೆ ಹೋಲಿಸಿದರೆ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣ ದರ ₹ 50 ಅಧಿಕ ಇದೆ. ಆದರೂ, ಸುರಕ್ಷತೆ ಹಾಗೂ ಸಮಯ ಪಾಲನೆಗಾಗಿಯೇ ರಾಜ್ಯದ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಇ‌ಷ್ಟಪಡುವುದು. ಅಂತೆಯೇ ಪ್ರಯಾಣಿಕರು ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೇ ಸಂಚರಿಸುತ್ತಿದ್ದಾರೆ. ಆದರೆ, ನಿಗಮದ ಅಧಿಕಾರಿಗಳು ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

ADVERTISEMENT

ಡಕೋಟಾ ಬಸ್‌ಗಳು ಸಂಚರಿಸುವಾಗ ಎಂಜಿನ್‌ ವಿಪರೀತ ಬಿಸಿಯಾಗಿ ಹೊಗೆ ಕಾಣಿಸಿಕೊಂಡು ಅಲ್ಲಲ್ಲಿ ನಿಲ್ಲುತ್ತಿವೆ. ಪ್ರಯಾಣಿಕರು ಬಸ್‌ನ ನಂಬರ್‌ ನೋಡಿಯೇ ಅದರಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ. ಇದೇ ಕಾರಣಕ್ಕೆ ರಾಯಚೂರಿನಿಂದ ರಾತ್ರಿ 9.30ಕ್ಕೆ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ತೆರಳುತ್ತಿದ್ದ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

‘ನಿತ್ಯ ರಾಯಚೂರು ಹಾಗೂ ಧಾರವಾಡದಿಂದ ಸಂಚರಿಸುವ ಕೆಎ–36 ಎಫ್ 1114 ಹಾಗೂ ಕೆಎ–36 ಎಫ್ 1301 ಬಸ್‌ಗಳ ಸ್ಥಿತಿ ಗಂಭೀರವಾಗಿದ್ದು, ಅವುಗಳನ್ನು ಬದಲಿಸಬೇಕು. ನಿತ್ಯ ರಾತ್ರಿ 9.30ಕ್ಕೆ ಮೊದಲಿನಂತೆ ರಾಯಚೂರು–ಹುಬ್ಬಳ್ಳಿ, ರಾಯಚೂರು–ಬೆಳಗಾವಿ ಹಾಗೂ ಹೊಸದಾಗಿ ಮಂತ್ರಾಲಯ–ಬೆಳಗಾವಿ ಮಧ್ಯೆ ಹೊಸ ನಾನ್‌ ಏಸಿ ಬಸ್‌ಗಳ ಸಂಚಾರ ಆರಂಭಿಸಬೇಕು’ ಎಂದು ಪ್ರಯಾಣಿಕ ತೇಜಕುಮಾರ ಒತ್ತಾಯಿಸುತ್ತಾರೆ.

ರಾಯಚೂರು ವಿಭಾಗದ 10 ಬಸ್‌ಗಳನ್ನು ಗುಜರಿಗೆ ಹಾಕಲಾಗಿದೆ. ಪ್ರಮುಖ ಮಾರ್ಗಗಳಲ್ಲಿ ಓಡಾಡುತ್ತಿದ್ದ ಈ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.


‘ಅವೈಜ್ಞಾನಿಕ ಸಮಯ ಸರಿಪಡಿಸಿ’:
ನಿತ್ಯ ರಾಯಚೂರಿನಿಂದ ರಾತ್ರಿ 8 ಗಂಟೆಗೆ ಬೆಳಗಾವಿಗೆ ಹೊರಡುವ ಏಕೈಕ ರಾಜಹಂಸ ಬಸ್ ಬೆಳಗಿನ ಜಾವ 4 ರಿಂದ 4.30ರ ಅವಧಿಯಲ್ಲಿ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣ ತಲಪುತ್ತದೆ. ಅಲ್ಲಿ ಬೆಳಿಗ್ಗೆ 7 ಗಂಟೆವರೆಗೂ ನಗರ ಸಾರಿಗೆ ಬಸ್‌ಗಳ ಸಂಚಾರ ಆರಂಭವಾಗುವುದಿಲ್ಲ. ರಾಯಚೂರಿನ ಪ್ರಯಾಣಿಕರು ಎರಡೂವರೆ ತಾಸು ಬಸ್ ನಿಲ್ದಾಣದಲ್ಲಿ ಕಳೆಯ ಬೇಕಾಗಿದೆ.

ಪ್ರಯಾಣಿಕರು ಬೆಳಗಾವಿಯ ಅಧಿಕಾರಿಗಳಿಗೆ ಎರಡು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಇದು ನಮಗೆ ಸಂಬಂಧಿಸಿಲ್ಲ. ರಾಯಚೂರು ಅಧಿಕಾರಿಗಳಿಗೆ ವಿಚಾರಿಸಿ ಎಂದು ಅಲ್ಲಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕೆಕೆಆರ್‌ಟಿಸಿ ಅಧಿಕಾರಿಗಳು ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

ನಿತ್ಯ ರಾತ್ರಿ 9.30ಕ್ಕೆ ಬೆಳಗಾವಿಯಿಂದ ರಾಯಚೂರಿಗೆ ಬರುವ ರಾಜಹಂಸ ಬಸ್‌ನ ಸಮಯ ಸರಿಯಾಗಿದೆ. ಈ ಬಸ್‌ ಬೆಳಿಗ್ಗೆ 5.30ಕ್ಕೆ ರಾಯಚೂರಿಗೆ ಬರುತ್ತದೆ. ಇದೇ ಮಾದರಿಯಲ್ಲಿ ರಾಯಚೂರಿನಿಂದಲೂ ರಾತ್ರಿ 9.30ಕ್ಕೆ ಬೆಳಗಾವಿಗೆ ಬಸ್‌ ಓಡಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ರಾಯಚೂರಿನ ಸಾಥ್‌ಮೈಲ್ ಬಳಿ ನವೆಂಬರ್ 9ರಂದು ತಡರಾತ್ರಿ ಹೊಸಪೇಟೆಯಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ ರಸ್ತೆ ಬದಿಗೆ ಬಿದ್ದಿತು
ನವೆಂಬರ್‌ 11ರಂದು ರಾಯಚೂರು ಸಾರಿಗೆ ಘಟಕದಲ್ಲಿ ಗುಜರಿ ಬಸ್‌ಗಳ ವೀಕ್ಷಣೆ ಮಾಡಿದ ಕೆಕೆಆರ್‌ಟಿಸಿ ನೂತನ ಅಧ್ಯಕ್ಷ ಅರುಣಕುಮಾರ ಪಾಟೀಲ
ರಾಯಚೂರು ತಾಲ್ಲೂಕಿನ ಯರಗೇರಾ ಸಮೀಪ ಮಂಗಳವಾರ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಉರುಳಿ ಬಿದ್ದಿರುವುದು
ರಾಯಚೂರು ವಿಭಾಗಕ್ಕೆ ಹೊಸ ಬಸ್‌ಗಳನ್ನು ಕೊಡಬೇಕು. ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಹೊಸ ನಾನ್‌ ಏಸಿ ಸ್ಲೀಪರ್ ಬಸ್‌ಗಳನ್ನು ಓಡಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕೊಡಲಾಗಿದೆ
ವಸಂತಕುಮಾರ, ವಿಧಾನ ಪರಿಷತ್‌ ಸದಸ್ಯ
ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ರಾಯಚೂರಿನಿಂದ ಹುಬ್ಬಳ್ಳಿ ಬೆಳಗಾವಿಗೆ ಹೊಸ ನಾನ್‌ ಏಸಿ ಸ್ಲೀಪರ್‌ ಬಸ್‌ಗಳನ್ನು ಆರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು
ಶಿವರಾಜ ಪಾಟೀಲ, ಶಾಸಕ
ಕಲ್ಯಾಣ ಕರ್ನಾಟಕಕ್ಕೆ ಒಟ್ಟು 750 ಬಸ್‌ಗಳ ಅವಶ್ಯಕತೆ ಇದೆ. ಬಜೆಟ್‌ನಲ್ಲಿ 400 ಹೊಸ ಬಸ್‌ಗಳನ್ನು ಕೊಡುವ ಬಗ್ಗೆ ಪ್ರಸ್ತಾಪಿಸಲಾಗಿದೆ
ಅರುಣಕುಮಾರ ಪಾಟೀಲ, ಕೆಕೆಆರ್‌ಟಿಸಿ ನೂತನ ಅಧ್ಯಕ್ಷ

ಅವಘಡ ಸಂಭವಿಸಿದರೂ ಗಂಭೀರವಾಗಿಲ್ಲ

ರಾಯಚೂರು ಹೊರವಲಯದ ಸಾಥ್‌ ಮೈಲ್‌ ಕ್ರಾಸ್ ಬಳಿ ಸೆಪ್ಟೆಂಬರ್ 26ರಂದು ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ ಪ್ರಯಾಣಿಕರೊಬ್ಬರ ಕಾಲು ಮುರಿಯಿತು. 8 ಪ್ರಯಾಣಿಕರು ಗಾಯಗೊಂಡರು. ಬಸ್‌ನಲ್ಲಿ ಚಾಲಕ ನಿರ್ವಾಹಕ ಸೇರಿ 16 ಪ್ರಯಾಣಿಕರಿದ್ದರು. ಅಕ್ಟೋಬರ್ 18ರಂದು ರಾಯಚೂರು ಕೇಂದ್ರ ಬಸ್‌ ನಿಲ್ದಾಣದಿಂದ ಹುಬ್ಬಳ್ಳಿಗೆ ನಿಧಾನವಾಗಿ ಹೊರಟ ನಾನ್‌ ಏಸಿ ಸ್ಲೀಪರ್‌ ಬಸ್ ವೇಗ ಪಡೆದುಕೊಳ್ಳಲೇ ಇಲ್ಲ. ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತು. ಚಾಲಕ ಬಸ್‌ ಅನ್ನು ನಿಧಾನವಾಗಿ ಮಾನ್ವಿ ಡಿಪೊಕ್ಕೆ ಒಯ್ದು ಎಂಜಿನ್‌ ಮುಂಭಾಗ ಕವರ್‌ ತೆಗೆಯಿಸಿ ನೀರು ಹಾಕಿಸಿದರು. ಓಡುವಾಗ ಗಾಳಿ ವೇಗದಿಂದ ಸಹಜವಾಗಿ ತಂಪಾಗಲಿದೆ ಎಂದು ಪ್ರಯಾಣಿಕರನ್ನು ನಂಬಿಸಿ ನಿಧಾನವಾಗಿಯೇ ಹುಬ್ಬಳ್ಳಿಗೆ ಒಯ್ದರು. ಬೆಳಗಿನ ಜಾವ 4.30ಕ್ಕೆ ತಲುಪಬೇಕಿದ್ದ ಬಸ್‌ ಮೂರುವರೆ ತಾಸು ತಡವಾಗಿ ಹುಬ್ಬಳ್ಳಿ ತಲುಪಿತು. ಪ್ರಯಾಣಿಕರು ಸಾರಿಗೆ ಸಂಸ್ಥೆಗೆ ಶಾಪ ಹಾಕುತ್ತ ಮನೆಗಳಿಗೆ ತೆರಳಿದರು. ಅಕ್ಟೋಬರ್ 26ರಂದು ಬೆಳಗಾವಿಯಿಂದ–ಹೈದರಾಬಾದ್‌ಗೆ ಹೊರಟಿದ್ದ ನಾನ್‌ ಏಸಿ ಸ್ಲೀಪರ್‌ ಬಸ್‌ ಹಾಳಾಗಿ ಕಿಟಕಿಯಿಂದ ಬೆಡ್‌ಮೇಲೆ ನೀರು ಬಂದು ಪ್ರಯಾಣಿಕರು ತೊಂದರೆ ಅನುಭವಿಸಿದರು. ಬಸ್‌ ನಿರ್ವಾಹಕ ಮಾರ್ಗ ಮಧ್ಯದಲ್ಲಿ ಬಸ್‌ ನಿಲ್ಲಿಸಿ ತಾತ್ಕಾಲಿಕವಾಗಿ ಅಂಟುಪಟ್ಟಿ ಹಚ್ಚಿ ಒಳಗೆ ನೀರು ಬರದಂತೆ ಮಾಡಿದರು. ಆದರೆ ಪ್ರಯಾಣಿಕರು ತೊಂದರೆ ಅನುಭವಿಸುವುದು ತಪ್ಪಲಿಲ್ಲ. ರಾಯಚೂರು ನಗರದ ಹೊರವಲಯದ ಸಾಥ್‌ ಮೈಲ್ ಬಳಿ ನವೆಂಬರ್ 9ರಂದು ತಡರಾತ್ರಿ ಹೊಸಪೇಟೆಯಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ 13 ಪ್ರಯಾಣಿಕರು ಗಾಯಗೊಂಡರು.

12 ಡಕೋಟಾ ಬಸ್‌ಗಳು

‘ರಾಯಚೂರು ವಿಭಾಗದ 662 ಬಸ್‌ಗಳು 636 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಎರಡು ಕಲ್ಯಾಣ ರಥ 4 ರಾಜಹಂಸ 4 ಅಮೋಘವರ್ಷ ಬಸ್‌ಗಳು ಇವೆ. ಅನಿವಾರ್ಯವಾಗಿ 10 ನಾನ್‌ ಏಸಿ ಸ್ಲೀಪರ್‌ ಹಳೆಯ ಬಸ್‌ಗಳನ್ನು ಬಳಸುತ್ತಿದ್ದೇವೆ’ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಹೇಳುತ್ತಾರೆ. ‘ಹನ್ನೊಂದು ವರ್ಷಗಳಿಂದ ಬಳಸಲಾಗುತ್ತಿರುವ 12 ಬಸ್‌ಗಳು 12 ಲಕ್ಷ ಕಿ.ಮೀ ಓಡಿವೆ. ಇವುಗಳಿಗೆ ಬದಲಿ 12 ಹೊಸ ಬಸ್‌ಗಳನ್ನು ಕೊಡುವಂತೆ ನಿಗಮಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ರಾಯಚೂರು ವಿಭಾಗಕ್ಕೆ ಹೊಸ ಬಸ್‌ಗಳನ್ನು ಕೊಡುವಂತೆ ಈಗಾಗಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಕೋರಲಾಗಿದೆ’ ಎನ್ನುತ್ತಾರೆ. ‘ಬಸ್‌ಗಳು ದುಸ್ಥಿತಿಯಲ್ಲಿದ್ದ ಕಾರಣ ಅವುಗಳನ್ನು ಕಲಬುರಗಿ ವಿಭಾಗಕ್ಕೆ ಕಳಿಸಿಕೊಡಲಾಗಿದೆ. ಹುಬ್ಬಳ್ಳಿ ಬೆಳಗಾವಿ ಮೈಸೂರು ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿರುವ ಹಳೆಯ ಬಸ್‌ಗಳ ಬದಲಿಗೆ ಹೊಸ ಬಸ್‌ಗಳನ್ನು ಕೇಳಲಾಗಿದೆ’ ಎಂದಿದ್ದಾರೆ.

ಹೊಸ ಮಾರ್ಗ

ರಾಯಚೂರು– ಮೈಸೂರು ರಾಯಚೂರು–ಧರ್ಮಸ್ಥಳ ರಾಯಚೂರು–ಹಾಸನ ಹಾಗೂ ರಾಯಚೂರು– ಮಂಗಳೂರಿಗೆ ಹೊಸ ಏಸಿ ಸ್ಲೀಪರ್ ಬಸ್‌ ಓಡಿಸಬೇಕು ಎನ್ನುವುದು ಪ್ರಯಾಣಿಕರ ಬೇಡಿಕೆಯಾಗಿದೆ. ಸಿಂಧನೂರು–ಹೈದರಾಬಾದ್ ದೇವದುರ್ಗ– ಬೆಂಗಳೂರು ಮಾನ್ವಿ–ಬೆಂಗಳೂರು ಶಕ್ತಿನಗರ–ದಾವಣಗೆರೆ ಮಧ್ಯೆ ನಾನ್‌ ಏಸಿ ಸ್ಲೀಪರ್‌ ಹೊಸ ಬಸ್‌ಗಳನ್ನು ಆರಂಭಿಸಲು ಅನುಮತಿ ಕೊಡುವಂತೆ ನಿಗಮದ ವ್ಯವಸ್ಥಾಪಕರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.