ADVERTISEMENT

ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಹೋರಾಟ: ನಾಗಲಕ್ಷ್ಮೀ

​ಪ್ರಜಾವಾಣಿ ವಾರ್ತೆ
Published 1 ಮೇ 2022, 14:38 IST
Last Updated 1 ಮೇ 2022, 14:38 IST
ರಾಯಚೂರಿನ  ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಐಯುಟಿಯುಸಿ ಸಂಘಟನೆಯಿಂದ ಭಾನುವಾರ ಆಯೋಜಿಸಿದ್ದ 136ನೇ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷೆ ನಾಗಲಕ್ಷ್ಮೀ ಮಾತನಾಡಿದರು.
ರಾಯಚೂರಿನ  ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಐಯುಟಿಯುಸಿ ಸಂಘಟನೆಯಿಂದ ಭಾನುವಾರ ಆಯೋಜಿಸಿದ್ದ 136ನೇ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷೆ ನಾಗಲಕ್ಷ್ಮೀ ಮಾತನಾಡಿದರು.   

ರಾಯಚೂರು: ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಹೋರಾಟ ಮುಂದುವರಿಸಬೇಕಿದ್ದು, ಇದಕ್ಕಾಗಿ ಕಾರ್ಮಿಕರೆಲ್ಲ ಒಂದಾಗಿ ಚಳವಳಿ ರೂಪಿಸುವ ಅಗತ್ಯವಿದೆ ಎಂದು ಎಐಯುಟಿಯುಸಿ ಆಶಾ ಕಾರ್ಯಕರ್ತೆಯರ ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷೆ ನಾಗಲಕ್ಷ್ಮೀ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಐಯುಟಿಯುಸಿ ಸಂಘಟನೆಯಿಂದ ಭಾನುವಾರ ಆಯೋಜಿಸಿದ್ದ 136ನೇ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರ ಬದುಕು ಕಟ್ಟುವ ನಿಟ್ಟಿನಲ್ಲಿ ಸಮಾಜದ ಕನಸು ನನಸು ಮಾಡುವುದಕ್ಕೆ ಯೋಜನೆ ರೂಪಿಸಬೇಕಿದೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಉದ್ದೇಶಕ್ಕಾಗಿ 136 ವರ್ಷಗಳ ಹಿಂದೆ ಕಾರ್ಮಿಕ ಸಂಘಟನೆ ಹುಟ್ಟುಕೊಂಡಿದೆ. ಕಾರ್ಮಿಕರಿಗೆ ವಿಶ್ರಾಂತಿ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದರೂ, ಈ ವ್ಯವಸ್ಥೆ ವಿರುದ್ಧ ಸಿಡಿದೆದ್ದಾಗ ಹೋರಾಟ ಶುರುವಾಯಿತು ಎಂದರು.

ADVERTISEMENT

1886ರಲ್ಲಿ ಅಮೆರಿಕದಲ್ಲಿ ನಡೆದ ಕಾರ್ಮಿಕರ ಹೋರಾಟದಂತೆ ಮತ್ತೆ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಹೋರಾಟದ ಫಲವಾಗಿ ನಾವು ಎಂಟು ಗಂಟೆಗಳ ದುಡಿಮೆಯ ಸೌಲಭ್ಯವನ್ನು ಪಡೆದಿದ್ದೇವೆ. ಆದರೆ, ಮತ್ತೆ ಹಳೆಯ ಪರಿಸ್ಥಿತಿಗೆ ಕಾರ್ಮಿಕರನ್ನು ತಳ್ಳುವ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಈ ಎಲ್ಲ ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಮೂಲ ಕಾರಣವಾಗಿದೆ. ಆದ್ದರಿಂದ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು ಕಾರ್ಮಿಕರ ವರ್ಗದ ಸಮಾಜವಾದಿ ವ್ಯವಸ್ಥೆ ನಿರ್ಮಿಸಿದಾಗ ಮಾತ್ರವೇ ಕಾರ್ಮಿಕರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ಸಂಘಟನೆ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ ಮಾತನಾಡಿ, ಭಾರತದಲ್ಲಿ ಬಡತನ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದೆ. ರೈತರು ಬೆಳೆಗೆ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರಂತೂ ದುಡಿಯುವುದರಲ್ಲೇ ಜೀವನ ಸವೆಸುತ್ತಿದ್ದಾರೆ ಎಂದು ಹೇಳಿದರು.

ನಗರದ ಅಂಬೇಡ್ಕರ್ ವೃತ್ತದಿಂದ ರಂಗಮಂದಿರದವರೆಗೂ ಎಐಯುಟಿಯುಸಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಕಾರ್ಮಿಕರ ರ‍್ಯಾಲಿ ನಡೆಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ತಿರುಮಲ ರಾವ್ ಅಧ್ಯಕ್ಷತೆ ವಹಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಮಹೇಶ್ ಚಿಕಲಪರ್ವಿ ನಿರೂಪಿಸಿದರು.

ಈರಮ್ಮ, ಪ್ರಭಾವತಿ,ಲಕ್ಷ್ಮೀ,ರಾಧಾ,ರಾಘವೇಂದ್ರ ಪಾಟೀಲ, ರಾಮಾಂಜನೇಯ, ನಾಗರಾಜ್,ಯಲ್ಲಪ್ಪ ನಾಮಾಲಿ, ನರಸಪ್ಪ, ಸಲೀಂ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.