ADVERTISEMENT

ಲಾಕ್‌ಡೌನ್‌ ಸಡಿಲಿಕೆಯಿದ್ದರೂ ‘ಅಂತರ’ ಕಡ್ಡಾಯ

ಜನಸಂದಣಿ ಆಗದಂತೆ ಕ್ರಮ ವಹಿಸುತ್ತಿರುವ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 1 ಮೇ 2020, 14:02 IST
Last Updated 1 ಮೇ 2020, 14:02 IST
ರಾಯಚೂರು ನಗರದಲ್ಲಿ ಅಂಗಡಿಗಳನ್ನು ತೆರೆದುಕೊಳ್ಳುವ ದಿನಗಳನ್ನು ನಿಗದಿಗೊಳಿಸಿ ಬಣ್ಣದ ಗುರುತು ಹಾಕಲಾಗಿದೆ
ರಾಯಚೂರು ನಗರದಲ್ಲಿ ಅಂಗಡಿಗಳನ್ನು ತೆರೆದುಕೊಳ್ಳುವ ದಿನಗಳನ್ನು ನಿಗದಿಗೊಳಿಸಿ ಬಣ್ಣದ ಗುರುತು ಹಾಕಲಾಗಿದೆ   

ರಾಯಚೂರು: ಕೊರೊನಾ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ವಿಧಿಸಿದ ಲಾಕ್‌ಡೌನ್ 2.0‌ ಅವಧಿ ಪೂರ್ಣವಾದ ನಂತರವೂ, ಜನಸಂದಣಿ ನಿರ್ಮಾಣ ಆಗುವುದನ್ನು ತಡೆಗಟ್ಟಲು ಪೂರ್ವಯೋಜನೆ ಮಾಡುತ್ತಿದ್ದಾರೆ. ಎಲ್ಲ ಅಂಗಡಿಗಳನ್ನು ತೆರೆಯುವುದಕ್ಕೆ ಒಮ್ಮೆಲೆ ಅವಕಾಶ ನೀಡುತ್ತಿಲ್ಲ.

ದಿನಸಿ, ಹಣ್ಣು, ಹಾಲು, ತರಕಾರಿ, ಔಷಧಿ ಅಂಗಡಿಗಳು, ರಸಗೊಬ್ಬರ ಅಂಗಡಿ ಮತ್ತು ಆಸ್ಪತ್ರೆಗಳಿಗೆ ನಿರ್ಬಂಧ ವಿಧಿಸುತ್ತಿಲ್ಲ. ಆದರೆ, ಇನ್ನುಳಿದ ಅಂಗಡಿಗಳನ್ನು ವಾರಕ್ಕೆ ಎರಡು ದಿನಗಳು ಮಾತ್ರ ತೆರೆಯಲು ಅವಕಾಶ ನೀಡಲಾಗುತ್ತಿದೆ. ಪ್ರತಿದಿನ ಮೂರನೇ ಒಂದು ಭಾಗದಷ್ಟು ಅಂಗಡಿಗಳನ್ನು ತೆರೆಯುವುದಕ್ಕೆ ಅನುವು ಮಾಡಲು ರಾಯಚೂರು ನಗರದಲ್ಲಿ ಪ್ರಾಯೋಗಿಕವಾಗಿ ಬಣ್ಣದ ಗುರುತುಗಳನ್ನು ಹಾಕಲಾಗಿದೆ.

ಹೇರ್ ಸಲೂನ್, ಬ್ಯುಟಿ ಪಾರ್ಲರ್, ಚಿನ್ನದ ಅಂಗಡಿಗಳನ್ನು ತೆರೆಯುವುದಕ್ಕೆ ಸದ್ಯಕ್ಕೆ ಅನುಮತಿ ನೀಡುತ್ತಿಲ್ಲ. ಅಲ್ಲದೆ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವ ಮಾರ್ಕೆಟ್ ಕಾಂಪ್ಲೆಕ್ಸ್ ತೆರೆಯಲು ಅವಕಾಶ ಮಾಡಿಲ್ಲ. ಸಿನಿಮಾ ಪ್ರದರ್ಶನ, ಸಂತೆ, ಜಾತ್ರೆ ನಡೆಸುವುದಕ್ಕೂ ಇನ್ನು ಅವಕಾಶ ಮಾಡಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿಟ್ಟುಕೊಂಡು ಹಂತಹಂತವಾಗಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗುತ್ತಿದೆ.

ADVERTISEMENT

ಸೋಂಕು ಹರಡುವುದನ್ನು ತಡೆಗಟ್ಟಲು ಮುನ್ನಚ್ಚರಿಕೆ ಕ್ರಮಗಳನ್ನು ಮುಂದುವರಿಸಲಾಗುತ್ತಿದೆ. ಇದಕ್ಕಾಗಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಜರ್‌ ಬಳಕೆ ಮಾಡುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗುತ್ತಿದ್ದು, ನಿಯಮ ಮೀರಿದವರಿಗೆ ದಂಡ ವಿಧಿಸುವ ಕ್ರಮಗಳನ್ನು ಲಾಕ್‌ಡೌನ್‌ ಅವಧಿ ಮುಕ್ತಾಯದ ನಂತರ ತೀವ್ರಗೊಳಿಸಲಾಗುತ್ತಿದೆ. ಬಡಾವಣೆ, ಮಾರುಕಟ್ಟೆ ಹಾಗೂ ಮಳಿಗೆಗಳ ಎದುರು ಗುಂಪು ಗಟ್ಟಿಕೊಂಡು ನಿಲ್ಲುವಂತಿಲ್ಲ.

ಕಾರ್ಮಿಕರು ಗುಂಪಾಗಿ ಕಾರ್ಯನಿರ್ವಹಿಸುವ ಕೈಗಾರಿಕೆಗಳಿಗೂ ಜಿಲ್ಲಾಡಳಿತದಿಂದ ಹಲವು ನಿಯಮಗಳನ್ನು ವಿಧಿಸಲಾಗಿದೆ. ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಶೇ 33 ರಷ್ಟು ಮಾತ್ರ ಕಾರ್ಮಿಕರನ್ನು ತೆಗೆದುಕೊಂಡು, ಪಾಳಿಗಳಲ್ಲಿ ಕೆಲಸ ಮಾಡುವುದಕ್ಕೆ ತಿಳಿಸಲಾಗಿದೆ. ಗ್ರೀನ್‌ಜೋನ್‌ ವಲಯದಲ್ಲಿ ಸರ್ಕಾರವು ಸಡಿಲಿಕೆ ಘೋಷಿಸಿದ್ದರೂ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಸಡಿಲಿಕೆಯನ್ನು ಹಂತಹಂತವಾಗಿ ಜಾರಿ ಮಾಡುತ್ತಿದ್ದು, ಶೀಘ್ರದಲ್ಲೆ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುವ ಆಶಾಭಾವ ಹೆಚ್ಚಳವಾಗಿದೆ.

‘ವಾರದಲ್ಲಿ ಎರಡು ದಿನಗಳು ಮಾತ್ರ ಅಂಗಡಿ ತೆರೆಯುವುದಕ್ಕೆ ಅವಕಾಶ ನೀಡಿದರೆ, ಕಟ್ಟಡದ ಬಾಡಿಗೆಯನ್ನು ಯಾವ ರೀತಿ ಪಾವತಿಸಬೇಕು. ಮಳಿಗೆಯಲ್ಲಿ ದುಡಿಯುವ ಸಿಬ್ಬಂದಿಗೆ ದಿನಗಳನ್ನಾಧರಿಸಿ ವೇತನ ಕೊಡುವ ಪರಿಸ್ಥಿತಿ ಬರುತ್ತದೆ. ಮೊದಲೇ ನಷ್ಟ ಅನುಭವಿಸುತ್ತಿದ್ದೇವೆ. ಮುನ್ನಚ್ಚರಿಕೆ ಕ್ರಮಗಳನ್ನು ಕಾಪಾಡಿಕೊಳ್ಳುವವರಿಗೆ ವಾರಪೂರ್ತಿ ಅಂಗಡಿ ತೆರೆಯಲು ಅವಕಾಶ ಮಾಡಬೇಕು. ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸದವರಿಗೆ ದಂಡ ವಿಧಿಸಬೇಕು’ ಎಂದು ರಾಯಚೂರು ನಗರದ ಬಟ್ಟೆ ವ್ಯಾಪಾರಿ ಗೋವಿಂದ ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.