ರಾಯಚೂರು: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಡಿ ಬರುವ ಜಿಲ್ಲೆಯ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಸೌಲಭ್ಯಗಳೇ ಇಲ್ಲ.
ಜಿಲ್ಲೆಯ ಪ್ರಮುಖ ಪೆಟ್ರೋಲ್ ಬಂಕ್‌ಗಳ ರಿಟೇಲ್ ಔಟ್‌ಲೆಟ್‌ಗಳಲ್ಲಿ ‘ಕಡ್ಡಾಯ’ ಸೌಲಭ್ಯಗಳನ್ನೇ ಒದಗಿಸದೆ ನಿಯಮ ಉಲ್ಲಂಘಿಸುತ್ತಿದ್ದರೂ ಜಿಲ್ಲಾಡಳಿತ ಗಂಭೀರವಾಗಿಲ್ಲ. ಪೆಟ್ರೋಲ್ ಬಂಕ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಏರ್ ಮಷಿನ್ ಇರಲೇಬೇಕೆಂಬ ನಿಯಮವಿದೆ. ನಿಯಮ ಉಲ್ಲಂಘನೆ ಆಧಾರದ ಮೇಲೆ ಬಂಕ್ ಮಾಲೀಕರಿಗೆ ದಂಡ ವಿಧಿಸಬೇಕಾದ ಸಂಬಂಧಿತ ಇಲಾಖೆಯ ಅಧಿಕಾರಿಗಳೂ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪೆಟ್ರೋಲ್ ಬಂಕ್‌ಗಳಲ್ಲಿ ಏರ್ ಮಷಿನ್ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯೂ ಇಲ್ಲ. ನಿನ್ನೆಯಿಂದ ತಾಂತ್ರಿಕ ದೋಷ ಕಾಣಿಸಿಕೊಂಡಿದೆ, ಕೆಲಸದವರು ಬಂದಿಲ್ಲ ಇತ್ಯಾದಿ ಅನೇಕ ಬಗೆಯ ಸುಳ್ಳು ಹೇಳಿ ಗ್ರಾಹಕರ ದಿಕ್ಕು ತಪ್ಪಿಸುತ್ತಿದ್ದಾರೆ.
1960–70ರ ದಶಕದಲ್ಲಿ ಆರಂಭವಾದ ಹಳೆಯ ಪೆಟ್ರೋಲ್ ಬಂಕ್‌ಗಳಿಗೆ ಸ್ಥಳದ ಕೊರತೆ ಎದುರಾಗಿದೆ. ಹೀಗಾಗಿ ಶೌಚಾಲಯ ನಿರ್ಮಿಸಿಲ್ಲ. ಏರ್ ಮಷಿನ್ ಹಾಳಾಗಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮ್ಯಾನೇಜರ್ ಭರವಸೆ ಕೊಡುತ್ತಾರೆ.
ಕೆಲ ಪೆಟ್ರೋಲ್ ಬಂಕ್ ಮಾಲೀಕರು ವಾಹನಗಳ ಪಂಕ್ಚರ್ ತೆಗೆಯುವ ವ್ಯಕ್ತಿಗಳಿಗೆ ಏರ್‌ಮಷಿನ್ ಹಾಗೂ ಅದರ ಪಕ್ಕದ ಜಾಗವನ್ನು ಬಾಡಿಗೆ ಕೊಟ್ಟಿದ್ದಾರೆ. ಅಲ್ಲಿ ಒಂದು ಟಯರ್‌ಗೆ ಗಾಳಿ ತುಂಬಿಸಲು ಕನಿಷ್ಠ ₹ 5 ಶುಲ್ಕ ಪಡೆಯಲಾಗುತ್ತಿದೆ. ಬಂಕ್ ಮಾಲೀಕರು ಸೇವೆ ಹೆಸರಲ್ಲಿ ವ್ಯವಹಾರಕ್ಕೆ ಇಳಿದಿರುವುದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
‘ಎಲ್ಲ ಪೆಟ್ರೋಲ್ ಬಂಕ್ ಕಂಪನಿಗಳ ಅಧಿಕಾರಿಗಳಿಗೆ ಪತ್ರ ಬರೆದು ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಸೂಚಿಸಲಾಗಿದೆ. ಪೆಟ್ರೋಲಿಯಂ ಕಂಪನಿಗಳ ಅಧಿಕಾರಿಗಳು ಲಿಖಿತ ಭರವಸೆ ಕೊಟ್ಟರೂ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿದ್ದಾರೆ. ಬಂಕ್‌ಗಳಿಗೆ ಭೇಟಿಕೊಟ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾಂತಗೇರಿ ಹೇಳುತ್ತಾರೆ.
ಪೂರಕ ಮಾಹಿತಿ: ಡಿ.ಎಚ್.ಕಂಬಳಿ, ಬಸವರಾಜ ನಂದಿಕೋಲಮಠ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ, ಪ್ರಕಾಶ ಮಸ್ಕಿ, ಅಮರೇಶ ನಾಯಕ, ಮಂಜುನಾಥ ಬಳ್ಳಾರಿ, ಶರಣಪ್ಪ ಆನೆಹೊಸೂರು, ಅಲಿಬಾಬಾ ಪಟೇಲ್, ಪಿ.ಕೃಷ್ಣ ಸಿರವಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.