ADVERTISEMENT

ಮುದಗಲ್: ನಿರುಪಯುಕ್ತವಾದ ನೂತನ ಶಾಲೆ ಕೊಠಡಿಗಳು

ಶರಣ ಪ್ಪ ಆನೆಹೊಸೂರು
Published 25 ಜನವರಿ 2025, 6:56 IST
Last Updated 25 ಜನವರಿ 2025, 6:56 IST
ಲಿಂಗಸುಗೂರು ಸಮೀಪದ ಮಿಂಚೇರಿ ಹೊಸ ಶಾಲೆ ಕಟ್ಟಡದ ಎದುರು ಮುಳ್ಳುಕಂಟಿ ಬೆಳೆದಿರುವುದು
ಲಿಂಗಸುಗೂರು ಸಮೀಪದ ಮಿಂಚೇರಿ ಹೊಸ ಶಾಲೆ ಕಟ್ಟಡದ ಎದುರು ಮುಳ್ಳುಕಂಟಿ ಬೆಳೆದಿರುವುದು   

ಮುದಗಲ್: ಲಿಂಗಸುಗೂರು ತಾಲ್ಲೂಕಿನ ಮಿಂಚೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಶಾಲೆ ಕೊಠಡಿಗಳು ಏಳು ವರ್ಷಗಳಿಂದ ನಿರುಪಯುಕ್ತವಾಗಿವೆ.

ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಹಲವು ಮೂಲಸೌಕರ್ಯಗಳಿಂದ ನಲುಗುತ್ತಿದೆ. 2017-18ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಅನುದಾನದಲ್ಲಿ ಎರಡು ಕೊಠಡಿಗಳನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನಿರ್ಮಿಸಿದೆ. ಏಳು ವರ್ಷ ಗತಿಸಿದರೂ ಇದುವರೆಗೆ ಶಿಕ್ಷಣ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿಲ್ಲ. ಕೊಠಡಿ ಎದುರು ಮುಳ್ಳುಕಂಟಿಗಳು ಬೆಳೆದುನಿಂತಿವೆ. ಶಾಲೆ ಕಾಡಿನಲ್ಲಿ ಇರುವಂತೆ ಭಾಸವಾಗುತ್ತದೆ.

ಹಳೆ ಶಾಲೆಯಲ್ಲಿ ಬಿಸಿಯೂಟದ ಕೊಠಡಿ ಶಿಥಿಲವಾಗಿದೆ. ಬೇರೆ ಕೊಠಡಿಯಲ್ಲಿ ಬಿಸಿಯೂಟದ ಊಟ ತಯಾರಿಸುತ್ತಾರೆ. ಶಾಲೆ ಪಕ್ಕದಲ್ಲಿರುವ ನೀರಿನ ಸಂಗ್ರಹ ತೊಟ್ಟಿಗೆ ನೀರು ಬರದೆ ನಿರುಪಯುಕ್ತವಾಗಿದೆ. ಶಾಲೆಯ ಕೆಲ ಕೊಠಡಿಗಳ ಕಿಟಕಿಗಳು ಕಿತ್ತುಹೋಗಿವೆ. ಕಳೆದ ಮೇ ತಿಂಗಳಲ್ಲಿ ಇಲ್ಲಿದ್ದ ಮುಖ್ಯಶಿಕ್ಷಕ ಮೃತಪಟ್ಟಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಮುಖ್ಯಶಿಕ್ಷಕರಿಗೆ ಇಲಾಖೆ ಅಧಿಕಾರಿಗಳು ಚಾರ್ಜ್‌ ನೀಡಿಲ್ಲ. ಈಗ ಇರುವ ಮುಖ್ಯಶಿಕ್ಷಕನಿಗೆ ಇಲಾಖೆಯಲ್ಲಿ ಕೆಲಸಗಳ ಒತ್ತಡ ಇದೆ. ಇದರಿಂದ ಸರಿಯಾಗಿ ಶಾಲೆಗೆ ಹೋಗುಲು ಆಗುತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.

ADVERTISEMENT
ಲಿಂಗಸುಗೂರು ಸಮೀಪದ ಮಿಂಚೇರಿ ಹೊಸ ಶಾಲೆ ಕಟ್ಟಡದ ಎದುರು ಮುಳ್ಳುಕಂಟಿ ಬೆಳೆದಿರುವುದು

ಶಾಲೆಗೆ ಸರಿಯಾಗಿ ಬರದೇ ಇರುವ ಮುಖ್ಯಶಿಕ್ಷಕರ ಮೊಬೈಲ್‌ಗೆ ಗ್ರಾಮಸ್ಥರು ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಮೊಬೈಲ್‌ನಲ್ಲಿ ಹೆಸರು ಸೇವ್ ಇದ್ದವರ ಕರೆ ಮಾತ್ರ ಸ್ವೀಕಾರ ಮಾಡುತ್ತಾರೆ ಎನ್ನುವ ಆರೋಪ ಇವೆ.

ಹಳೆ ಶಾಲೆಯಲ್ಲಿ ಮೇಲಿಂದ ಮೇಲೆ ಕಳ್ಳತನವಾಗುತ್ತದೆ. ಇಲ್ಲಿನ ಶಿಕ್ಷಕರಿಗೆ ಕಳ್ಳತನ ತಪ್ಪಿಸುವುದು ಸಾಹಸದ ಕೆಲಸವಾಗಿದೆ. ಅನೇಕ ಬಾರಿ ಪೊಲೀಸ್‌ ಠಾಣೆಗೆ ಹೋಗಿ ಮಾಹಿತಿ ನೀಡಲಾಗಿದೆ. ಹಳೆ ಶಾಲೆ ಎದುರು ಧ್ವಜಕಂಬದ ಕಟ್ಟೆ ಕಟ್ಟಿಲ್ಲ. ಶಾಲೆಯು ಹಲವು ಕುಂದು ಕೊರತೆಗಳ ನಡುವೆ ನಡೆಯುತ್ತಿದ್ದರೂ ಇಲಾಖೆ ಮೇಲಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಲಕ್ಷ್ಮಣ ಆರೋಪಿಸಿದರು.

ಲಿಂಗಸುಗೂರು ಸಮೀಪದ ಮಿಂಚೇರಿ ಶಾಲೆ ಮುಂದೆ ನಿರ್ಮಿಸಿದ ನೀರಿನ ಟ್ಯಾಂಕ್ ನಿರುಪಯುಕ್ತವಾಗಿರುವುದು
ಶಾಲೆಯಲ್ಲಿ ನೂತನ ಕೊಠಡಿಗಳು ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳತ್ತೇನೆ
ಹುಂಬಣ್ಣ ರಾಠೋಡ ಬಿಇಒ ಲಿಂಗಸುಗೂರು
ನನಗೆ ಇದುವರೆಗೂ ಮುಖ್ಯಶಿಕ್ಷಕನ ಚಾರ್ಜ್‌ ಕೊಟ್ಟಿಲ್ಲ. ನೂತನ ಶಾಲಾ ಕೊಠಡಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸರ್ಕಾರದ ಕೆಲಸದ ಒತ್ತಡದಲ್ಲಿ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗಲು ತೊಂದರೆಯಾಗಿದೆ
ಶಿವಯ್ಯ ಹಿರೇಮಠ ಮುಖ್ಯಶಿಕ್ಷಕ ಮಿಂಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.