ADVERTISEMENT

ನಿವೃತ್ತರ ಪಿಂಚಣಿಗಾಗಿ ಕಾನೂನು ಹೋರಾಟ: ಬ್ಯಾಂಕ್ ನಿವೃತ್ತ ನೌಕರರ ಸಂಘ

ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 13:23 IST
Last Updated 26 ಫೆಬ್ರುವರಿ 2020, 13:23 IST
ರಾಯಚೂರಿನ ಕೊಠಾರಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಘದ ತ್ರೈಮಾಸಿಕ ಸಭೆಯಲ್ಲಿ ಸಂಘದ ಕೇಂದ್ರ ಸಮಿತಿ ಕಾರ್ಯದರ್ಶಿ ರೋಹಿಣಿರಾವ್‌ ಮಾತನಾಡಿದರು
ರಾಯಚೂರಿನ ಕೊಠಾರಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಘದ ತ್ರೈಮಾಸಿಕ ಸಭೆಯಲ್ಲಿ ಸಂಘದ ಕೇಂದ್ರ ಸಮಿತಿ ಕಾರ್ಯದರ್ಶಿ ರೋಹಿಣಿರಾವ್‌ ಮಾತನಾಡಿದರು   

ರಾಯಚೂರು: ಬ್ಯಾಂಕ್ ಪಿಂಚಣಿದಾರರ ಹಲವಾರು ನ್ಯಾಯಯುತ ಬೇಡಿಕೆಗಳಿಗೆ ಪರಿಹಾರ ಪಡೆಯಲು ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಿವೃತ್ತ ನೌಕರರ ಸಂಘದ (ಎಸ್‌ಬಿಎಚ್‌ಆರ್‌ಇಎ) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿಣಿ ರಾವ್ ಹೇಳಿದರು.

ಎಸ್‌ಬಿಎಚ್‌ಆರ್‌ಇಎ ರಾಯಚೂರು ಘಟಕದಿಂದ ಕೊಠಾರಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಘದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ಬ್ಯಾಂಕ್ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ವಿಳಂಬ ಪ್ರಕ್ರಿಯೆಯಿಂದ ನೆನೆಗುದಿಗೆ ಬಿದ್ದಿರುವ ಬ್ಯಾಂಕ್ ಪಿಂಚಣಿದಾರರ ಹಲವಾರು ಬೇಡಿಕೆಗಳಿಗೆ ಕಾನೂನು ಹೋರಾಟವೊಂದೇ ಉಳಿದಿರುವ ಮಾರ್ಗ ಎಂದು ಅಭಿಪ್ರಾಯಪಟ್ಟರು.

ADVERTISEMENT

ಪಿಂಚಣಿ ನಿಯಮಗಳ 37ನೇ ವಿಧಿ, ನೀಡಬೇಕಾಗಿರುವ ಕಮ್ಯುಟೇಶನ್ ಬಾಕಿ, ಐದು ವರ್ಷಗಳ ಸಂಕ್ಷೇಪ ಅನುಕೂಲಗಳು, ದ್ವಿಪಕ್ಷೀಯ ಒಪ್ಪಂದ, ಪಿಂಚಣಿ ನಿಗದಿಗೆ ವಿಶೇಷ ಭತ್ಯವನ್ನು ಅನ್ವಯಗೊಳಿಸುವುದು ಸೇರಿ ಹಲವು ಅಂಶಗಳ ಕುರಿತು ರೋಹಿಣಿ ಅವರು ಮಾಹಿತಿ ನೀಡಿದರು.

ಬರುವ ಮಾರ್ಚ್‌ 8 ರಂದು ಇಂದೋರಿನಲ್ಲಿ ಆಯೋಜಿಸಲಾಗಿರುವ ಸ್ಟೇಟ್ ಬ್ಯಾಂಕ್ ನಿವೃತ್ತರ ಸಂಘದ (ಎಸ್‌ಬಿಆರ್‌ಎ) ಸಭೆಯಲ್ಲಿ ಎಲ್ಲ ಸಹವರ್ತಿ ಬ್ಯಾಂಕುಗಳು ತಮ್ಮ ಆಯಾ ವಿಷಯಾಧಾರಿತ ಅಂಶಗಳ ಇತ್ಯರ್ಥಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಈ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್‌ ನ್ಯಾಯವಾದಿಗಳನ್ನು ಕೂಡ ನೇಮಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಸ್‌ಬಿಎಚ್‌ಆರ್‌ಇಎ ಈಗಾಗಲೇ ಸ್ಥಾಪಿಸಿರುವ ‘ಕಾನೂನು ನಿಧಿ’ಗೆ ಪಿಂಚಣಿದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಕೇವಲ ಕಾನೂನು ಹೋರಾಟಕ್ಕೆ ಮಾತ್ರ ಮೀಸಲಿಡಲಾಗುವುದು ಎಂದು ತಿಳಿಸಿದರು.

ಕಲ್ಯಾಣಕಾರಿ ಶಿವಪ್ರತಾಪ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ತಾವರಗೆರೆಯ ಶೇಖರಗೌಡ ಸರನಾಡಗೌಡರ್ ಮತ್ತು ಗಂಗಾವತಿಯ ಮಂಗಳೂರ ರಾಘವೇಂದ್ರ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

70 ವರ್ಷ ಪೂರೈಸಿದ ನವಲಿ ಗುರುರಾಜರಾವ್ ಮತ್ತು ಶರೀಷಾಬೀ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.

ಸಂಘದ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಉಪ್ಪು ಸುಧಾಕರ, ಕಾರ್ಯಕಾರಿ ಸಮಿತಿ ಸದಸ್ಯ ಎಚ್‌ಜಿ ಶ್ರೇಣಿಕ್, ನಿವೃತ್ತ ಎಜಿಎಂ ಪಿ.ವಿ.ಜಿ.ಕೆ ಮೂರ್ತಿ, ಎಸ್‌ಬಿಎಚ್ ಸಿಬ್ಬಂದಿ ಸಂಘದ ಮಾಜಿ ಅಧ್ಯಕ್ಷ ನಾರಾಯಣರಾವ್, ಸ್ಥಳೀಯ ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಪೋತುಗಂಟಿ ವಿಕ್ರಂ ಅವರು ಮುಖ್ಯ ಅತಿಥಿಗಳಾಗಿದ್ದರು. ಸಂಘದ ಕೇಂದ್ರ ಸಮಿತಿ ಸದಸ್ಯ ಪಿ. ಹನುಮಾನ್ ಸಾಗರ್ ಸ್ವಾಗತಿಸಿ, ಸಂಘದ ಚಟುವಟಿಕೆಗಳ ವರದಿ ವಾಚನ ಮಾಡಿದರು.

ರಮೇಶ ಹೀರಾ ಪ್ರಾರ್ಥಿಸಿದರು. ಸಾಬಿರ್ ಅಹಮದ್ ಅವರು ನಿರೂಪಿಸಿದರು. ಶ್ರೀನಿವಾಸ ಗಟ್ಟು ಪರಿಚಯ ನೀಡಿದರು. ಭೀಷ್ಮಾಚಾರ್ ವಂದನೆ ಸಲ್ಲಿಸಿದರು. ಈಚೆಗೆ ನಿಧನರಾದ ಮಠದ ತಾತಯ್ಯ, ಎನ್‌ಎಸ್ ಪೇಶ್ಕಾರ್, ನರಸಮ್ಮ ಭಂಡಾರಿ, ಶಾಲಿನಿ ವೈಎಸ್ ಪಾಟೀಲ್ ಬಂಧುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.