ADVERTISEMENT

ರಾಯಚೂರು | ನಾಯಿ, ನವಿಲು ತಿಂದು ಊರು ಪ್ರವೇಶಿಸಿದ ಚಿರತೆ: ಜನರಲ್ಲಿ ಆತಂಕ

ಡಿ.ರಾಮಪುರದ ಪರಮೇಶ್ವರ ಬೆಟ್ಟದಲ್ಲಿ ನೆಲೆ

ಚಂದ್ರಕಾಂತ ಮಸಾನಿ
Published 2 ಜುಲೈ 2025, 6:09 IST
Last Updated 2 ಜುಲೈ 2025, 6:09 IST
ರಾಯಚೂರು ತಾಲ್ಲೂಕಿನ ಡಿ.ರಾಮಪುರದ ಪರಮೇಶ್ವರ ಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆ
ರಾಯಚೂರು ತಾಲ್ಲೂಕಿನ ಡಿ.ರಾಮಪುರದ ಪರಮೇಶ್ವರ ಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆ   

ರಾಯಚೂರು: ತಾಲ್ಲೂಕಿನ ಡೊಂಗರಾಂಪುರ ಗ್ರಾಮದ ಪರಮೇಶ್ವರ ಬೆಟ್ಟದಲ್ಲಿ ಒಂದೂವರೆ ತಿಂಗಳಿಂದ ಚಿರತೆಯೊಂದು ಓಡಾಡುತ್ತಿದೆ. ಗ್ರಾಮದ ಹೊರವಲಯದಲ್ಲಿ ಬೀದಿ ನಾಯಿಗಳು ಹಾಗೂ ಬೆಟ್ಟದಲ್ಲಿ ನವಿಲು ತಿಂದು ಮುಗಿಸಿರುವ ಚಿರತೆ ಇದೀಗ ಊರೊಳಗೆ ಪ್ರವೇಶಿಸಲು ಆರಂಭಿಸಿದೆ.

ಬೆಟ್ಟದ ಬಂಡೆಗಲ್ಲಿನ ಮೇಲೆ ಪ್ರಾಣಿ ಮಾಂಸ ಹಾಗೂ ಪಕ್ಷಿಗಳನ್ನು ತಿಂದಿರುವ ಕುರುಹು ಕಂಡು ಬಂದಿದೆ. ಗ್ರಾಮದ ಸುತ್ತ ಚಿರತೆ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಹೀಗಾಗಿ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಗ್ರಾಮದ ಜನ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಸಂಜೆ ನಂತರ ರಾಯಚೂರು ನಗರಕ್ಕೆ ಬಂದು ಹೋಗಲು ಜನ ಹಿಂಜರಿಯುತ್ತಿದ್ದಾರೆ.

ಊರ ಅಂಚಿನಲ್ಲಿರುವ ಮನೆಗಳಲ್ಲಿ ವಾಸವಾಗಿರುವ ಕುಟುಂಬಗಳು ಸಂಜೆಯಾಗುತ್ತಲೇ ಆತಂಕದಿಂದ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿವೆ. ದನಕರುಗಳನ್ನು ಮೇಯಿಸಲು ಹೋಗುವುದು ಹಾಗೂ ಜಾನುವಾರುಗಳಿಗೆ ಮೇವು ತರಲು ಹೋಗುವುದು ಸಹ ಕಷ್ಟವಾಗಿದೆ. ಬೆಟ್ಟದಲ್ಲಿ ಹಸಿರು ನಳನಳಿಸುತ್ತಿದ್ದರೂ ದನಗಳಿಗೆ ಒಣ ಮೇವು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಗ್ರಾಮದ ಅಂಚಿನಲ್ಲಿರುವ ಕಾವಲಿ ಅಶೋಕ ಅವರ ಮನೆಯ ಕೊಟ್ಟಿಗೆಯಲ್ಲಿ ಮೂರು ದನಗಳನ್ನು ಕಟ್ಟಲಾಗುತ್ತಿದೆ. ದನಗಳ ವಾಸನೆಯ ಜಾಡು ಹಿಡಿದು ಚಿರತೆ ಬಾಗಿಲವರೆಗೂ ಬಂದು ಹೋಗಿದೆ. ಚಿರತೆಯ ಹೆಜ್ಜೆ ಗುರುತುಗಳನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗೆ ಹೋಗಿ ಅಧಿಕಾರಿಗಳಿಗೆ ತೋರಿಸಲಾಗಿದೆ’ ಎಂದು ಗ್ರಾಮದ ರೈತ ರಂಗನಾಥ ಪೊಲೀಸ್‌ ಪಾಟೀಲ ಹೇಳಿದ್ದಾರೆ.

15 ದಿನಗಳ ಹಿಂದೆ ದನಗಳಿಗೆ ಮೇವು ತರಲು ಹೊಲಗಳಿಗೆ ಹೋಗುವ ಮೊದಲು ಗ್ರಾಮಸ್ಥರು ಡ್ರೋನ್‌ ಕ್ಯಾಮೆರಾದಿಂದ ಬೆಟ್ಟದ ಮೇಲೆ ವೀಕ್ಷಣೆ ಮಾಡಿದಾಗ ಚಿರತೆ ಬಂಡೆ ಗಲ್ಲಿನ ಮೇಲೆ ಕುಳಿತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡ್ರೋನ್‌ ಶಬ್ದಕ್ಕೆ ಬಂಡೆಗಲ್ಲಿನ ಮಧ್ಯೆ ಓಡಿ ಹೋಗಿದೆ.

‘ಅರಣ್ಯ ಇಲಾಖೆಯ ಡಿಸಿಎಫ್ ಅವರಿಗೆ ಎಂಟು ಬಾರಿ ಕರೆ ಮಾಡಿದ್ದೆ. ಒಮ್ಮೆಯೂ ಅವರು ಕರೆ ಸ್ವೀಕರಿಸಲಿಲ್ಲ. ಕೊನೆಗೆ ರಾಯಚೂರಿನಲ್ಲಿರುವ ಅವರ ಕಚೇರಿಗೆ ಹೋಗಿ ಬಂದೆ. ಕಚೇರಿಯಲ್ಲೂ ಅವರು ಸಿಗದ ಕಾರಣ ಎಸಿಎಫ್‌ ಅವರನ್ನು ಭೇಟಿಯಾಗಿ ಚಿರತೆ ಹಿಡಿದು ಜನ ಜಾನುವಾರುಗಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡು ಬಂದಿರುವೆ’ ಎಂದು ಗ್ರಾಮದ ರೈತ ರಂಗನಾಥ ಪೊಲೀಸ್‍ ಪಾಟೀಲ ತಿಳಿಸಿದರು.

‘ಗ್ರಾಮಸ್ಥರು ಸಂಜೆ ಹಾಗೂ ಬೆಳಗಿನ ವೇಳೆಯಲ್ಲಿ ಒಬ್ಬರೇ ಸಂಚರಿಸದಂತೆ ಗ್ರಾಮದಲ್ಲಿ ಡಂಗೂರ ಬಾರಿಸಲಾಗಿದೆ. ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಒಂದು ಬೋನು ಸಹ ಇಡಲಾಗಿದೆ. ಇಷ್ಟು ಬಿಟ್ಟು ನಾವೇನು ಮಾಡಲು ಸಾಧ್ಯವೆಂದು ಅರಣ್ಯ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಯಚೂರು ತಾಲ್ಲೂಕಿನ ಡಿ.ರಾಮಪುರದ ಹೊಲದಲ್ಲಿ ಪತ್ತೆಯಾಗಿರುವ ಚಿರತೆ ಹೆಜ್ಜೆ ಗುರುತುಗಳು

ಬಂಡೆಗಲ್ಲಿನ ಮಧ್ಯೆ ಚಿರತೆ ವಾಸ

‘ಮೇ 20ರಂದು ಡಿ.ರಾಮಪುರದ ಬೆಟ್ಟದಲ್ಲಿ ಚಿರತೆ ಬಂದಿರುವುದು ಖಚಿತವಾಗಿದೆ. ಎರಡೂವರೆ ಮೂರು ವರ್ಷದ ಚಿರತೆ ಪರಮೇಶ್ವರ ಬೆಟ್ಟದಲ್ಲಿ ಬಂಡೆಗಲ್ಲಿನ ಮಧ್ಯೆ ನೆಲೆಯೂರಿರುವ ಶಂಕೆ ಇದೆ. 15 ದಿನಗಳ ಹಿಂದೆ ಡ್ರೋನ್‌ ಕ್ಯಾಮೆರಾ ನೆರವಿನಿಂದಲೂ ಚಿರತೆಯನ್ನು ಗುರುತಿಸಲಾಗಿದೆ’ ಎಂದು ಆರ್‌ಎಫ್‌ಒ ರಾಜೇಶ ನಾಯಕ ತಿಳಿಸುತ್ತಾರೆ. ‘ಚಿರತೆ ಹಿಡಿಯಲು ಗ್ರಾಮದಲ್ಲಿ ಒಂದು ಬೋನು ಇಡಲಾಗಿದೆ. ಬೆಟ್ಟದ ಮೇಲೆ ಒಂದು ಮನೆಯಲ್ಲಿ ದನ–ಕರುಗಳು ಹಾಗೂ ಕೋಳಿಗಳಿವೆ. ಅವರಿಗೆ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆ ನೀಡಿ ಬರಲಾಗಿದೆ. ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಅವರು ಗ್ರಾಮದ ಪರಿಸರದ ಮೇಲೆ ನಿಗಾ ಇಟ್ಟಿದ್ದಾರೆ’ ಎಂದು ಹೇಳುತ್ತಾರೆ.

ರಾಯಚೂರು ತಾಲ್ಲೂಕಿನ ಡಿ.ರಾಮಪುರ ಗ್ರಾಮದ ಹೊರವಲಯ ಹಾಗೂ ಬೆಟ್ಟಪ್ರದೇಶದಲ್ಲಿ ಒಬ್ಬೊಬ್ಬರೇ ಸಂಚರಿಸದಂತೆ ಗ್ರಾಮದಲ್ಲಿ ಡಂಗೂರ ಬಾರಿಸಲಾಗಿದೆ
-ರಾಜೇಶ ನಾಯಕ, ಆರ್‌ಎಫ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.