ADVERTISEMENT

ಜಿಲ್ಲೆಯಲ್ಲಿ ತುಂತುರು ಮಳೆಯಿಂದ ಹೆಚ್ಚಿದ ತಂಪು

ಬಿತ್ತನೆಗೆ ಹದವಾದ ಭೂಮಿ: ಬಿತ್ತನೆಗೆ ರೈತರಿಂದ ನಡೆದಿದೆ ತಯಾರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 12:37 IST
Last Updated 3 ಆಗಸ್ಟ್ 2019, 12:37 IST
ರಾಯಚೂರು ನಗರದಲ್ಲಿ ತುಂತುರು ಮಳೆಯಿಂದ ಭಂಗಿಕುಂಟಾದಿಂದ ಮಹಾವೀರ ವೃತ್ತಕ್ಕೆ ಸಂಚರಿಸುವ ರಸ್ತೆಯು ಕಾಲುವೆಯಾಗಿ ಮಾರ್ಪಟ್ಟಿದೆ
ರಾಯಚೂರು ನಗರದಲ್ಲಿ ತುಂತುರು ಮಳೆಯಿಂದ ಭಂಗಿಕುಂಟಾದಿಂದ ಮಹಾವೀರ ವೃತ್ತಕ್ಕೆ ಸಂಚರಿಸುವ ರಸ್ತೆಯು ಕಾಲುವೆಯಾಗಿ ಮಾರ್ಪಟ್ಟಿದೆ   

ರಾಯಚೂರು: ಜಿಲ್ಲೆಯಾದ್ಯಂತ ಎರಡು ದಿನಗಳಿಂದ ತುಂತುರು ಮಳೆ ಬೀಳುತ್ತಿದ್ದು, ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಮುಂಗಾರು ಮಳೆಯಿಲ್ಲದೆ ನಿರಾಸೆಗೀಡಾಗಿದ್ದ ರೈತರು ಪರ್ಯಾಯ ಬೆಳೆಗಳನ್ನು ಬೆಳೆಯುವುದಕ್ಕೆ ಯೋಜಿಸಿಕೊಂಡು ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ನೀರು ಹರಿದಾಡುವಷ್ಟು ದೊಡ್ಡ ಪ್ರಮಾಣದ ಮಳೆ ಹನಿಗಳು ಬೀಳುತ್ತಿಲ್ಲ. ಆದರೆ, ಇಬ್ಬನಿ ಸುರಿದಂತೆ ಎರಡು ದಿನಗಳಿಂದ ಸತತವಾಗಿ ಮಳೆ ಹನಿಗಳು ಉದುರುತ್ತಿವೆ. ಮಂದಗತಿಯ ಮಳೆ ಹನಿಗಳು ಮಣ್ಣಿನೊಳಗೆ ಸೇರಿಕೊಳ್ಳುತ್ತಿರುವುದರಿಂದ ಭೂಮಿಯಲ್ಲಿ ಒಳ್ಳೆಯ ಹದ ನಿರ್ಮಾಣವಾಗಿದೆ.

ರಾಯಚೂರು ಮತ್ತು ಸಿಂಧನೂರು ನಗರದೊಳಗಿನ ಕಚ್ಚಾರಸ್ತೆಗಳೆಲ್ಲ ಗದ್ದೆಗಳಾಗಿ ಮಾರ್ಪಟ್ಟಿವೆ. ಬಡಾವಣೆಗಳಲ್ಲಿ ಜನರು ಕಾಲ್ನಡಿಗೆ ಮೂಲಕ ಸಂಚರಿಸುವುದು ವಿರಳವಾಗಿದ್ದು, ವಾಹನಗಳ ಓಡಾಟ ಯಥಾಪ್ರಕಾರದಲ್ಲಿದೆ. ಬೀದಿ ವ್ಯಾಪಾರಕ್ಕೆ ಸ್ವಲ್ಪ ತೊಂದರೆಯಾಗಿದೆ ಮತ್ತು ಗ್ರಾಮೀಣ ಭಾಗದಿಂದ ರೈತರು ತರಕಾರಿಗಳನ್ನು ತಂದು ಮಾರಾಟ ಮಾಡುವುದಕ್ಕೆ ಪ್ರಯತ್ನಿಸಿದರೂ ಗ್ರಾಹಕರು ಎಂದಿನಂತೆ ಮಾರುಕಟ್ಟೆಗೆ ಹೋಗುವುದಕ್ಕೆ ಸಾಧ್ಯವಾಗಿಲ್ಲ.

ADVERTISEMENT

ಬಯಲುನಾಡು ರಾಯಚೂರು ಸದ್ಯಕ್ಕೆ ಮಲೆನಾಡಿನಂತೆ ಕಾಣುತ್ತಿದ್ದು, ಎರಡು ದಿನಗಳಿಂದ ಬಿಸಿಲು ಬಿದ್ದಿಲ್ಲ. ಎಲ್ಲೆಡೆಯಲ್ಲೂ ತಂಪು ಗಾಳಿ, ಹಿತವಾದ ವಾತಾವರಣವಿದೆ. ಆದರೆ, ಸದಾ ಬಿಸಿಲು ಸ್ಪರ್ಶದೊಂದಿಗೆ ದುಡಿಯುತ್ತಿದ್ದವರು ಸ್ವಲ್ಪ ಮುದುರಿಕೊಂಡಿದ್ದಾರೆ. ತಂಪು ಹವಾಮಾನ ಕೆಲವರಿಗೆ ಮಬ್ಬು ಆವರಿಸುವಂತೆ ಮಾಡಿದೆ. ಮಳೆ ಬರುತ್ತಿದೆ ಎಂದು ಮನೆಯೊಳಗೆ ಇರುವುದಕ್ಕೂ ಆಗುವುದಿಲ್ಲ. ಮಳೆ ಇಲ್ಲ ಎನ್ನುವ ಹಾಗಿಲ್ಲ.

ಮಾನ್ವಿ, ಸಿರವಾರ, ಕವಿತಾಳ, ಹಟ್ಟಿ, ಮುದಗಲ್‌, ಜಾಲಹಳ್ಳಿ ದೇವದುರ್ಗ ಹಾಗೂ ಲಿಂಗಸುಗೂರಿನಲ್ಲೂ ಮಳೆಯ ಸಿಂಚನ ಮುಂದುವರಿದಿದೆ. ಇದ್ದಕ್ಕಿದ್ದಂತೆ ರಭಸವಾಗಿ ಸುರಿಯುವ ಮಳೆಯು 10 ನಿಮಿಷದೊಳಗೆ ಮಾಯವಾಗುತ್ತಿರುವುದರಿಂದ ರೈತಾಪಿ ಜನರು ವರುಣನನ್ನು ಶಪಿಸುವುದು ಸಾಮಾನ್ಯವಾಗಿತ್ತು. ಕನಿಷ್ಠ ತುಂತುರು ಮಳೆಯಾದರೂ ಎರಡು ದಿನಗಳಿಂದ ಬಿದ್ದು, ನೆಲದಲ್ಲಿ ತೇವಾಂಶ ತುಂಬಿಕೊಂಡಿದೆ ಎಂದು ಸಂತಸ ಪಡುತ್ತಿದ್ದಾರೆ. ಹತ್ತಿ, ತೊಗರಿ, ಸೂರ್ಯಕಾಂತಿ, ಭತ್ತ ಸೇರಿದಂತೆ ವಿವಿಧ ಪರ್ಯಾಯ ಬೆಳೆಯುವುದಕ್ಕೆ ರೈತರು ವಿವಿಧ ತಾಲ್ಲೂಕುಗಳಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

‘ಜಿಲ್ಲೆಯಲ್ಲಿ 37 ರೈತ ಸಂಪರ್ಕ ಕೇಂದ್ರಗಳಿದ್ದು, ಬೀಜ ಮತ್ತು ಗೊಬ್ಬರದ ದಾಸ್ತಾನು ಮಾಡಿಟ್ಟುಕೊಳ್ಳಲಾಗಿದೆ. ಬಿತ್ತನೆ ಕೈಗೊಳ್ಳುವ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಮುಂಗಾರು ಮಳೆ ಬೀಳದೆ ಇರುವುದರಿಂದ ಪರ್ಯಾಯ ಬೆಳೆಗಳನ್ನು ಬೆಳೆಯುವುದಕ್ಕೆ ರೈತರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಕಿರುಹೊತ್ತಿಗೆ ಮತ್ತು ಕರಪತ್ರಗಳನ್ನು ಗ್ರಾಮೀಣ ಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ. ಈ ವರ್ಷ ಸಿರಿಧಾನ್ಯ ಬೆಳೆಯುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂದೆ ಬಂದಿದ್ದಾರೆ. ಅದರಲ್ಲೂ ನವಣೆ ಬಿತ್ತನೆ ಪ್ರದೇಶ ಈ ವರ್ಷ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ಕಡೆ ಬರ, ಇನ್ನೊಂದು ಕಡೆ ನೆರೆ

ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿಕೊಂಡಿದೆ. ಇನ್ನೊಂದು ಕಡೆ ಕೃಷ್ಣಾನದಿ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕಿನ ನದಿತೀರಗಳಲ್ಲಿ ಜನ, ಜಾನುವಾರುಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪ್ರವಾಹವು ಹೆಚ್ಚಳವಾಗುವ ಮುನ್ಸೂಚನೆ ನೀಡಲಾಗಿದೆ.

ಒಂದು ವಾರದಿಂದ ತಂಪು

ಕವಿತಾಳ, ಮುದಗಲ್‌, ಮಸ್ಕಿ ಸೇರಿದಂತೆ ಹಲವೆಡೆ ಒಂದು ವಾರದಿಂದ ಬಿಸಿಲು ಬಿದ್ದಿಲ್ಲ. ತಂಪು ಹವಾಮಾನ ಹರಡಿಕೊಂಡಿದ್ದು ರೈತರು ಜಮೀನುಗಳತ್ತ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಸ್ವಲ್ಪ ಬಿಸಿಲು ಬಿ‌ದ್ದರೆ ಬಿತ್ತನೆಗೆ ಅನುಕೂಲವಾಗುತ್ತದೆ ಎಂದು ಬಹಳಷ್ಟು ರೈತರು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.