
ಲಿಂಗಸುಗೂರು: ಪಟ್ಟಣದ ಮೂಲಕ ಹಾದು ಹೋಗಿರುವ ಬೀದರ್–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತ ಕಾರಣ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ತಾಲ್ಲೂಕಿನ ಹೊನ್ನಹಳ್ಳಿ ಬಳಿಯಿಂದ ಮಸ್ಕಿ ಪಟ್ಟಣದವರೆಗೆ 31 ಕಿ.ಮೀ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ 2023ರಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೇ ಕಾಮಗಾರಿ ಮುಗಿಯಬೇಕಾಗಿತ್ತು. ಆದರೆ, ಹೆದ್ದಾರಿಗೆ ಭೂಮಿ ಕಳೆದುಕೊಂಡ ಕಸಬಾಲಿಂಗಸುಗೂರು ಹಾಗೂ ಯಲಗಲದಿನ್ನಿ ಗ್ರಾಮದ ಕೆಲ ರೈತರು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯ ಕಾಮಗಾರಿಗೆ ತಡೆ ನೀಡಿತ್ತು.
ಯಲಗಲದಿನ್ನಿ–ಕಸಬಾಲಿಂಗಸುಗೂರು ಗ್ರಾಮದ ಬಳಿ ಮಾತ್ರ ಕಾಮಗಾರಿ ನನೆಗುದಿಗೆ ಬಿದ್ದಿತ್ತು. 2025ರ ಜೂನ್ 11ರಂದು ಧಾರವಾಡದ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಇಲ್ಲಿಗೆ ಬಂದು ರೈತರ ಮನವೂಲಿಸಿ ಕಾಮಗಾರಿ ಆರಂಭಿಸಿದ್ದರು. ಆರಂಭದಲ್ಲಿ ಕೆಲ ದಿನಗಳ ಕಾಲ ಕಾಮಗಾರಿ ನಡೆದರೂ ಮತ್ತೆ ನನೆಗುದಿಗೆ ಬಿತ್ತು. ನನೆಗುದಿಗೆ ಬಿದ್ದು ಆರು ತಿಂಗಳು ಕಳೆದರೂ ಕಾಮಗಾರಿ ಶುರುವಾಗುತ್ತಿಲ್ಲ.
ಪ್ರಯಾಸದ ಸಂಚಾರ: ಹೆದ್ದಾರಿ ಕಾಮಗಾರಿ ಪೈಕಿ ಕೇವಲ ಮೂರು ಕಿ.ಮೀ ನನೆಗುದಿಗೆ ಬಿದ್ದಿರುವುದರಿಂದ ಮೂರು ಕಿ.ಮೀ ಸಂಚಾರ ಮಾಡಿದರೆ ನೂರು ಕಿ.ಮೀ ಸಂಚಾರ ಮಾಡಿದಷ್ಟು ಕೆಟ್ಟ ಅನುಭವವಾಗುತ್ತಿದೆ.
ಹೆದ್ದಾರಿಯಲ್ಲಿಯ ದೊಡ್ಡ ದೊಡ್ಡ ಗುಂಡಿಗಳು, ದಿನ್ನೆಗಳಲ್ಲಿ ಲಾರಿ, ಬಸ್‌ಗಳು ಸಂಚರಿಸಿದರೆ ದೂಳು ಅದರ ಹಿಂದೆ ಬರುವ ಬೈಕ್ ಹಾಗೂ ಸಣ್ಣ ವಾಹನಗಳಿಗೆ ಮೆತ್ತಿಕೊಳ್ಳುತ್ತಿದೆ. ವಾಹನ ಸವಾರರು ದೂಳಿನಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೀಡಾದ ಉದಾಹರಣೆಗಳು ಸಾಕಷ್ಟಿವೆ.
ಈ ಮಾರ್ಗದಲ್ಲಿ ಬಿ.ಇಡಿ, ಕಾನೂನು ಕಾಲೇಜು, ಪ್ರೌಢಶಾಲೆಗಳು, ಪಾಲಿಟೆಕ್ನಿಕ್ ಸೇರಿದಂತೆ ಇತರೆ ಶಾಲಾ-ಕಾಲೇಜುಗಳು ಇರುವುದರಿಂದ ಹೆದ್ದಾರಿಯಲ್ಲಿರುವ ಗುಂಡಿಗಳಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿಬರಬೇಕಾದ ಸವಾಲು ಚಾಲಕರದ್ದಾಗಿದೆ.
ಈ ಹೆದ್ದಾರಿಯಲ್ಲಿ ಸಂಚರಿಸುವ ಬೈಕ್ ಸವಾರರು ಬೆನ್ನು ಮೊಳೆ ಮುರಿದುಕೊಳ್ಳವಂಥ ಸ್ಥಿತಿ ನಿರ್ಮಾಣವಾಗಿದೆ. ಯಲಗಲದಿನ್ನಿ ಗ್ರಾಮದ ಬಳಿ ಇದೇ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ ಎಂದು ವಾಹನ ಸವಾರ ವಿರೂಪಾಕ್ಷ ಹೇಳುತ್ತಾರೆ.
ಹೆದ್ದಾರಿ ಅಗೆಯದೇ ಹಾಗೇ ಬಿಟ್ಟಿದ್ದರೆ ಹಳೆಯ ರಸ್ತೆಯಲ್ಲಿ ದೂಳು ಇಲ್ಲದೆ ಸಂಚಾರ ಮಾಡಬಹುದಾಗಿತ್ತು. ಆದರೆ, ಹೆದ್ದಾರಿ ಅಗೆದಿರುವ ಕಾರಣ ಬೈಕ್ ಸವಾರರು ನಿತ್ಯವೂ ದೂಳಿನಲ್ಲಿ ಸ್ನಾನ ಮಾಡುವಂತಾಗಿದೆ. ಹೆದ್ದಾರಿ ನಿರ್ಮಾಣ ಮಾಡುವವರಿಗೆ ಕನಿಷ್ಠ ಪಕ್ಷ ತೆಗ್ಗು-ದಿನ್ನೆಗಳನ್ನು ಸಮತಟ್ಟು ಮಾಡಿ ಹಾಗೂ ದೂಳು ನಿಯಂತ್ರಣ ಮಾಡಲು ನೀರು ಹಾಕಬೇಕು ಎಂದು ದಸಂಸ ಮುಖಂಡ ಪ್ರಭುಲಿಂಗ ಮೇಗಳಮನಿ ಒತ್ತಾಯಿಸಿದ್ದಾರೆ.
ವಿಶೇಷ ಭೂಸ್ವಾಧೀನಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನ್ಯಾಯಾಲಯದ ಮೂಲಕ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮಾವಾದ ಕೂಡಲೇ ಕಾಮಗಾರಿ ಶುರು ಮಾಡುತ್ತೇವೆ. ಒಂದು ವಾರದಲ್ಲಿ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದುಬಸವಣಪ್ಪ ಕಲಶೆಟ್ಟಿ ಉಪವಿಭಾಧಿಕಾರಿ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.