ಲಿಂಗಸುಗೂರು: ಬಸ್ ಚಲಿಸುವಾಗ ರಸ್ತೆಯ ಬದಿಯಲ್ಲಿ ನಿಂತಿದ್ದ ಯುವಕನಿಗೆ ಕೆಸರು ಸಿಡಿದಿದ್ದಕ್ಕೆ, ಯುವಕ ಹಾಗೂ ಬಸ್ ಚಾಲಕ, ನಿರ್ವಾಹಕ ನಡುವೆ ಮಾತಿನ ಚಕಮಕಿ ನಡೆದಿದೆ. ಹೀಗಾಗಿ, ತನ್ನ ಮೇಲೆ ಕೇಸ್ ದಾಖಲಿಸುತ್ತಾರೆಂದು ಹೆದರಿದ ಯುವಕ ನೇಣಿಗೆ ಶರಣಾಗಿರುವ ಘಟನೆ ತಾಲ್ಲೂಕಿನ ಹುನುಕುಂಟಿ ಗ್ರಾಮದಲ್ಲಿ ನಡೆದಿದೆ.
ಕುಟಂಬಸ್ಥರು ಸಾರಿಗೆ ಘಟಕದ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಹುನಕುಂಟಿ ಗ್ರಾಮದ ಮುತ್ತಣ್ಣ ದೇವಪ್ಪ ಕುರಿ (18) ನೇಣಿಗೆ ಶರಣಾದ ಯುವಕನಾಗಿದ್ದಾನೆ. ಮೃತ ಯುವಕನ ಕುಟಂಬಸ್ಥರು ಹಾಗೂ ಗ್ರಾಮಸ್ಥರು ಪಟ್ಟಣದ ಸಾರಿಗೆ ಘಟಕದ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಕೆಲವೊತ್ತು ವಾತಾವರಣ ಬಿಗುವಿನಿಂದ ಕೂಡಿತ್ತು.
ಹಿನ್ನಲೆ
ಸಜ್ಜಲಗುಡ್ಡ-ಬೆಂಗಳೂರು ಮಾರ್ಗದ ಬಸ್ ಬುಧವಾರ ಸಂಜೆ ಸಜ್ಜಲಗುಡ್ಡಕ್ಕೆ ತೆರಳುವಾಗ ಹುನುಕುಂಟಿ ಗ್ರಾಮದಲ್ಲಿ ಮುತ್ತಣ್ಣ ದೇವಪ್ಪ ಕುರಿ ಎಂಬ ಯುವಕನಿಗೆ ಕೆಸರು ಸಿಡಿದಿದ್ದರಿಂದ ಬಸ್ ಚಾಲಕ ಹಾಗೂ ನಿರ್ವಾಹಕ ನಡುವೆ ಮಾತಿನ ಚಕಮಕಿ ನಡೆದು ಆ ಗುಂಪಿನಲ್ಲಿ ಯಾರೋ ಕಿಡಿಗೇಡಿಗಳು ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದಾರೆ.
ಚಾಲಕ ಮತ್ತು ನಿರ್ವಾಹಕ ಡ್ಯೂಟಿಗೆ ಹೋಗದೆ ನೇರವಾಗಿ ಸಾರಿಗೆ ಘಟಕಕ್ಕೆ ಬಸ್ ತಂದು ನಿಲ್ಲಿಸಿದ್ದಾರೆ.
ಗುರವಾರ ಬೆಳಿಗ್ಗೆ ಬಸ್ ಚಾಲಕ ಹಾಗೂ ನಿರ್ವಾಹಕ ತಮ್ಮ ಮೇಲೆ ಹಲ್ಲೆ ಮಾಡಿರುವ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ತೆರಳಿದ್ದಾರೆ.
ಈ ವಿಷಯ ಮುತ್ತಣ್ಣನಿಗೆ ಗೊತ್ತಾಗಿ ನನ್ನ ಮೇಲೆ ಕೇಸ್ ಆಗುತ್ತೆ ಎಂದು ಹೆದರಿಕೊಂಡು ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುತ್ತಣ್ಣನ ಸಾವಿಗೆ ಚಾಲಕ ಮತ್ತು ನಿರ್ವಾಹಕ ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿ ಕುಟಂಬಸ್ಥರು ಹಾಗೂ ಗ್ರಾಮಸ್ಥರು ಪಟ್ಟಣದ ಸಾರಿಗೆ ಘಟಕದ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಪಿಐ ಪುಂಡಲೀಕ ಪಟೇದಾರ್, ಮುದಗಲ್ ಪಿಎಸ್ಐ ವೆಂಕಟೇಶ, ನಾಗಪ್ಪ ದೌಡಾಯಿಸಿ ಘಟನೆ ಬಗ್ಗೆ ದೂರು ನೀಡಿದರೆ ತನಿಖೆ ಮಾಡಿ ತಪ್ಪಿಸ್ಥತರ ವಿರುದ್ಧ ಕ್ರಮ ಜರುಗಿಸುವುದಾಗಿ ಕುಟಂಬಸ್ಥರ ಮನವೊಲಿಸಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.