ADVERTISEMENT

ಲಿಂಗಸುಗೂರು: ಬರೀ ಮಾತಲ್ಲೇ ಉಳಿದ ‘ಸೇತುವೆ ನಿರ್ಮಾಣ’

ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ಮೂರು ನಡುಗಡ್ಡೆಗಳ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 7:14 IST
Last Updated 16 ಏಪ್ರಿಲ್ 2025, 7:14 IST
ಲಿಂಗಸುಗೂರು ತಾಲ್ಲೂಕಿನ ಕಡದರಗಡ್ಡಿ–ಗೋನವಾಟ್ಲವರೆಗೆ ಸೇತುವೆ ನಿರ್ಮಾಣಕ್ಕಾಗಿ 2022ರಲ್ಲಿ ಮಣ್ಣು ಪರೀಕ್ಷೆ, ಸೇರಿ ಇತರೆ ಸರ್ವೆ ಮಾಡಲಾಗಿತ್ತು
ಲಿಂಗಸುಗೂರು ತಾಲ್ಲೂಕಿನ ಕಡದರಗಡ್ಡಿ–ಗೋನವಾಟ್ಲವರೆಗೆ ಸೇತುವೆ ನಿರ್ಮಾಣಕ್ಕಾಗಿ 2022ರಲ್ಲಿ ಮಣ್ಣು ಪರೀಕ್ಷೆ, ಸೇರಿ ಇತರೆ ಸರ್ವೆ ಮಾಡಲಾಗಿತ್ತು   

ಲಿಂಗಸುಗೂರು: ತಾಲ್ಲೂಕಿನ ಪ್ರವಾಹ ಪೀಡಿತ ನಡುಗಡ್ಡೆಗಳಿಗೆ ಸಂಪರ್ಕ ಸೇತುವೆ ಕಲ್ಪಿಸುವ, ಶಾಶ್ವತ ಪರಿಹಾರ ಒದಗಿಸುವ ಸರ್ಕಾರದ ಭರವಸೆಗಳು ಬರೀ ಮಾತಲ್ಲೇ ಉಳಿದಿವೆ.

‘ಮಳೆ ಬರದಿದ್ದರೂ ಕಷ್ಟ, ಬಂದರೂ ಕಷ್ಟ’ ಎಂಬುದು ಕೃಷ್ಣಾ ನದಿ ಪ್ರವಾಹದಲ್ಲಿ ದ್ವೀಪವಾಗಿ ಬದಲಾಗುವ ತಾಲ್ಲೂಕಿನ ಮಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿಗಳ ವಾಸಿಗಳ ಅಳಲು. ಕೃಷ್ಣಾ ನದಿ ಉಕ್ಕಿ ಹರಿಯುವ ಜುಲೈ– ಆಗಸ್ಟ್‌ನಲ್ಲಿ ಎದುರಾಗುವ ಸಂಕಷ್ಟ ಇವರಿಗೆ ವರ್ಷವಿಡೀ ಆತಂಕವಾಗಿ ಕಾಡುತ್ತದೆ. ನದಿಯಲ್ಲಿ ಎಷ್ಟೇ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೂ ತೆಪ್ಪದಲ್ಲಿ ತಿರುಗಾಟ ಮಾತ್ರ ಇನ್ನೂ ತಪ್ಪಿಲ್ಲ.

ಕಾರ್ಯರೂಪಕ್ಕೆ ಬಾರದ ಸೇತುವೆ: ನಡುಗಡ್ಡೆಗಳಿಗೆ ಮತ್ತು ಕೃಷ್ಣಾ ತೀರದ ಗ್ರಾಮಗಳಿಗೆ ಸೇತುವೆ ನಿರ್ಮಾಣ ಭರವಸೆ ಬರೀ ಮಾತಲ್ಲೇ ಉಳಿದಿದೆ. ಕಡದರಗಡ್ಡಿಯಿಂದ ಗೋನವಾಟ್ಲಗೆ, ಯಳಗುಂದಿಯಿಂದ ಕರಕಲಗಡ್ಡಿ ನಡುಗಡ್ಡೆ, ಕರಕಲಗಡ್ಡಿಯಿಂದ ಮಾದರಗಡ್ಡಿಗೆ ಕಾಲ್ನಡಿಗೆ ಸೇತುವೆ ನಿರ್ಮಾಣಕ್ಕಾಗಿ ಸರ್ವೆ ಮಾಡಿ 2019ರಲ್ಲಿ ಕೆಕೆಆರ್‌ಡಿಬಿಯಿಂದ ₹4.40 ಕೋಟಿ ಅನುದಾನ ಒದಗಿಸಲಾಗಿತ್ತು. ಆದರೂ ಸೇತುವೆ ನಿರ್ಮಾಣವಾಗಲಿಲ್ಲ.

ADVERTISEMENT

ಇದೇ ಸ್ಥಳದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ಮಂಡಳಿಯ ಆಗಿನ ಅಧ್ಯಕ್ಷರಾಗಿದ್ದ ಕೆ.ಶಿವನಗೌಡ ನಾಯಕ ಮೂರು ಕಡೆಗಳಲ್ಲಿ ಸೇತುವೆ ನಿರ್ಮಾಣಕ್ಕಾಗಿ ₹25 ಕೋಟಿ ಅನುದಾನ ಒದಗಿಸಿದ್ದರು. ಇದಕ್ಕಾಗಿ 2022ರಲ್ಲಿ ಕಡದರಗಡ್ಡಿ ಗ್ರಾಮದ ಬಳಿ ಸರ್ವೆ ಮಾಡಿ, ಮಣ್ಣು ಪರೀಕ್ಷೆ ಮಾಡಲಾಗಿತ್ತು. ಅದೂ ಕಾರ್ಯರೂಪಕ್ಕೆ ಬರಲಿಲ್ಲ.

ಇದೀಗ ಮೂರು ನಡುಗಡ್ಡೆಗಳಿಗೆ ಕಾಲ್ನಡಿಗೆ ಸೇತುವೆ ನಿರ್ಮಾಣ ಹಾಗೂ ಶೀಲಹಳ್ಳಿ ಸೇತುವೆ ಎತ್ತರಿಸಲು 2025ರ ಫೆಬ್ರುವರಿಯಲ್ಲಿ ಸಮೀಕ್ಷೆ ಮಾಡಿ, ಡಿಪಿಆರ್ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ.

ಸ್ಥಳಾಂತರಿಸಿ ಬಿಡಿ: ನಡುಗಡ್ಡೆ ನಿವಾಸಿಗಳು ಮೂಲಸೌಕರ್ಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಪ್ರವಾಹದ ಸಂದರ್ಭದಲ್ಲಿ ನದಿ ದಾಟುವಾಗ ತೆಪ್ಪದಿಂದ ಬಿದ್ದು ಒಬ್ಬರು ನೀರು ಪಾಲಾಗಿದ್ದಾರೆ. ಹಲವು ವರ್ಷ ಕಳೆದಿವೆ. ಅವರ ದೇಹ ಪತ್ತೆಯಾಗದ ಕಾರಣ ಜಿಲ್ಲಾಡಳಿತ ಮೃತ ಎಂದು ಘೋಷಿಸಲು ಸಿದ್ಧವಿಲ್ಲ. ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನೂ ಕೊಡಲು ಸಿದ್ಧವಿಲ್ಲ. ಸಮಸ್ಯೆ ಮುಂದೂಡುತ್ತ ಹೋಗುವ ಬದಲು ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಎಂಬುದು ನಡುಗಡ್ಡೆ ವಾಸಿಗಳ ಒತ್ತಾಯ.

ಮಳೆಗಾಲದಲ್ಲಿ ನಡುಗಡ್ಡೆ ಬಿಡುವಂತೆ ಅಧಿಕಾರಿಗಳು ಸೂಚನೆ ಕೊಡುತ್ತಾರೆ. ಕೃಷ್ಣಾ ನದಿಗೆ ಪ್ರವಾಹ ಬಂದಾಗ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ನದಿ ಆಚೆ ನಿಂತು ಫೋಟೊ ತೆಗೆಸಿಕೊಂಡು ಹೋಗುತ್ತಾರೆ. ಅಧಿಕಾರಿಗಳು ಎರಡು ವರ್ಷ ಇಲ್ಲಿ ಬಂದು ಕೆಲಸ ಮಾಡಿ ಹೋಗುತ್ತಾರೆ. ಹೊಸ ಅಧಿಕಾರಿಗಳು ಬಂದ ನಂತರ ಮತ್ತೆ ನಾವು ಸಮಸ್ಯೆ ತೋಡಿಕೊಳ್ಳಬೇಕು. ಸಮಸ್ಯೆಗೆ ಮಾತ್ರ ಶಾಶ್ವತ ಪರಿಹಾರ ದೊರಕುತ್ತಿಲ್ಲ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸುತ್ತಾರೆ.

‘ನಡುಗಡ್ಡೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸೇತುವೆ ನಿರ್ಮಿಸುವ ಬದಲು, ಮೂರು ನಡುಗಡ್ಡೆಗಳಲ್ಲಿ ಪೂರ್ವಿಕರ ಕಾಲದಿಂದಲೂ ಉಳುಮೆ ಮಾಡುತ್ತಿರುವ 66 ಎಕರೆ 25 ಗುಂಟೆ ಕೃಷಿ ಭೂಮಿ ಇದೆ. ಇದನ್ನು ಸರ್ಕಾರ ಖರೀದಿಸಿ, ನಮಗೆಲ್ಲ ಪರ್ಯಾಯವಾಗಿ ಯಳಗುಂದಿ ಸುತ್ತಲಿನ ಸರ್ಕಾರಿ ಭೂಮಿ ನೀಡಬೇಕು. ಮೂರು ನಡುಗಡ್ಡೆವಾಸಿಗಳಿಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಟ್ಟರೆ ಅಲ್ಲಿಗೆ ಶಾಶ್ವತವಾಗಿ ಸ್ಥಳಾಂತರವಾಗುತ್ತೇವೆ’ ಎನ್ನುತ್ತಾರೆ ನಡುಗಡ್ಡೆ ನಿವಾಸಿ ಆದಪ್ಪ.

2025ರ ಫೆಬ್ರುವರಿಯಲ್ಲಿ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಎತ್ತರಿಸಲು ಸರ್ವೆ ಮಾಡಿ ಗುರುತು ಮಾಡಿರುವುದು
ಶೀಲಹಳ್ಳಿ ಸೇತುವೆ ಎತ್ತರಿಸಲು ನಡುಗಡ್ಡೆಗಳಿಗೆ ಕಾಲ್ನಡಿಗೆ ಸೇತುವೆಗಳ ನಿರ್ಮಾಣಕ್ಕೆ ಸರ್ವೆ ಆಗಿದೆ. ಸಮೀಕ್ಷಾ ತಂಡ ಡಿಪಿಆರ್ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ತೀರ್ಮಾನಿಸುತ್ತಾರೆ
ಬಸವಣ್ಣೆಪ್ಪ ಕಲಶೆಟ್ಟಿ ಉಪವಿಭಾಗಾಧಿಕಾರಿ ಲಿಂಗಸುಗೂರು
ನಡುಗಡ್ಡೆಗಳಿಗೆ ಶಾಶ್ವತ ಪರಿಹಾರ ಒದಗಿಸಿ ಸ್ಥಳಾಂತರ ಮಾಡುವಂತೆ ಲೆಕ್ಕವಿಲ್ಲದಷ್ಟು ಮನವಿ ಸಲ್ಲಿಸಿದ್ದೇವೆ. ಆದರೂ ನಡುಗಡ್ಡೆಗಳ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ಭಾವ ತಳೆದಿದೆ
ಶರಣಪ್ಪ ಕಟ್ಟಿಮನಿ ತಾಲ್ಲೂಕು ಸಂಚಾಲಕ ದಸಂಸ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.