ADVERTISEMENT

ಲಿಂಗಸುಗೂರು: ತಹಶೀಲ್ದಾರ್‌ ಹೆಸರಲ್ಲಿ ನಕಲಿ ಪ್ರಮಾಣಪತ್ರ ಹಾವಳಿ!

ಲಿಂಗಸುಗೂರು: ದಿನಾಂಕ, ಕ್ರಮ ಸಂಖ್ಯೆ, ಸಹಿ ಎಲ್ಲವೂ ಖೊಟ್ಟಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:46 IST
Last Updated 10 ಅಕ್ಟೋಬರ್ 2025, 7:46 IST
ಲಿಂಗಸುಗೂರಿನಲ್ಲಿ ಸೃಷ್ಟಿಸಲಾಗಿರುವ ಗೇಣಿಯ ನಕಲಿ ತಿಳುವಳಿಕೆ ಪತ್ರ
ಲಿಂಗಸುಗೂರಿನಲ್ಲಿ ಸೃಷ್ಟಿಸಲಾಗಿರುವ ಗೇಣಿಯ ನಕಲಿ ತಿಳುವಳಿಕೆ ಪತ್ರ   

ಲಿಂಗಸುಗೂರು: ತಹಶೀಲ್ದಾರ್‌ ಅವರ ನಕಲಿ ಸಹಿಯುಳ್ಳ ಪ್ರಮಾಣ ಪತ್ರಗಳ ಮಾರಾಟ ದಂಧೆ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದೆ

ಕೃಷಿ ಸಾಲ ಮತ್ತು ಇತರೆ ಸೌಲಭ್ಯಕ್ಕಾಗಿ ಭೂ ಹಿಡುವಳಿ ಪತ್ರ, ಬೇಬಾಕಿ ಪ್ರಮಾಣ ಪತ್ರ, ಗೇಣಿ ತಿಳುವಳಿಕೆ ಪತ್ರಗಳಿಗೆ ತಹಶೀಲ್ದಾರ್‌ ಸಹಿಯನ್ನೇ ನಕಲಿ ಮಾಡಿ ಪ್ರಮಾಣ ಪತ್ರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸುವ ಜಾಲ ಪಟ್ಟಣದಲ್ಲಿ ತಲೆ ಎತ್ತಿದೆ. 

ಕೈ ಬರಹದ ಸಹಿಯುಳ್ಳ ಪ್ರಮಾಣ ಪತ್ರಗಳನ್ನು ಕಂದಾಯ ಇಲಾಖೆ ಬಹುತೇಕ ಪ್ರಮಾಣ ಪತ್ರಗಳನ್ನು ಡಿಜಿಟಲೀಕರಣ ಮಾಡಲಾಗಿದ್ದರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಪರಿಶೀಲನೆ  ನಡೆಸಿ ತಹಶೀಲ್ದಾರ್‌ ಅಥವಾ ಗ್ರೇಡ್-2 ತಹಶೀಲ್ದಾರರ್‌, ಶಿರಸ್ತೆದಾರ್‌ ಅವರ ಡಿಜಿಟಲ್ ಸಹಿ ಹಾಗೂ ಬಾರ್ ಕೋಡ್ ಇರುವ ಪ್ರಮಾಣ ಪತ್ರಗಳನ್ನು ಡೌನಲೋಡ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಆನ್‌ಲೈನ್ ಅರ್ಜಿ ಹಾಕಿದರೆ ಎಲ್ಲಾ ಪ್ರಕ್ರಿಯೆ ಮುಗಿದು ಪ್ರಮಾಣ ಪತ್ರ ಸಿಗುವುದು ತಡವಾಗುತ್ತದೆ ಎಂದು ಖಾಸಗಿ ಕಂಪ್ಯೂಟರ್ ಕೇಂದ್ರದ ವ್ಯಕ್ತಿಗಳು ತಹಶೀಲ್ದಾರ್ ಕಚೇರಿಯಲ್ಲಿ ಭೂ ಹಿಡುವಳಿ ಪತ್ರ, ಬೇಬಾಕಿ ಪ್ರಮಾಣ ಪತ್ರ, ಗೇಣಿ ತಿಳುವಳಿಕೆ ಪತ್ರ ನಾವೇ ಬೇಗ ಮಾಡಿಸಿಕೊಳ್ಳುವುದಾಗಿ ರೈತರಿಗೆ ಸುಳ್ಳು ಹೇಳಿ ಹೆಚ್ಚಿನ ಹಣ ಪಡೆದು ತಹಶೀಲ್ದಾರ್‌ ಅವರ  ನಕಲಿ ಸೀಲ್ ಹಾಗೂ ಸಹಿಯುಳ್ಳ ಪ್ರಮಾಣ ಪತ್ರ ನೀಡುತ್ತಿರುವುದು ಬಹಿರಂಗವಾಗಿದೆ.

ADVERTISEMENT

ಸೀಲ್, ಸಹಿ ಎಲ್ಲವೂ ನಕಲಿ: ಅಸಲಿ ಪ್ರಮಾಣಪತ್ರವನ್ನೇ ಮೀರಿಸುವಂತೆ, ಅನುಮಾನ ಬರದಂತೆ ಅಚ್ಚುಕಟ್ಟಾಗಿ ಕರ್ನಾಟಕ ಸರ್ಕಾರ, ಕ್ರಮಸಂಖ್ಯೆ, ತಹಶೀಲ್ದಾರ್‌ ಸಹಿ ಇರುವ  ನಕಲಿ ಪ್ರಮಾಣ ಪತ್ರ ಸೃಷ್ಟಿಸಲಾಗಿದೆ.

ಎರಡು ವರ್ಷದಿಂದ ದಂಧೆ: ನಕಲಿ ಪ್ರಮಾಣಪತ್ರ ಮಾರಾಟ ದಂಧೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ ಎನ್ನಲಾಗಿದೆ. ಸಾವಿರಾರು ಪ್ರಮಾಣಪತ್ರಗಳು ಈಗಾಗಲೇ ಖಾಸಗಿ ಬ್ಯಾಂಕ್‌ನಲ್ಲಿ ಕೃಷಿ ಸಾಲ ಹಾಗೂ ಇತರೆ ಉದ್ದೇಶಕ್ಕಾಗಿ ಬಳಕೆಯಾಗಿವೆ ಎಂದು ಹೇಳಲಾಗುತ್ತಿದೆ.

ಈ ದಾಖಲೆಗಳಿಗೆ ನಕಲಿ ಸಹಿ ಮಾಡಿ ಪ್ರಮಾಣ ಪತ್ರಗಳನ್ನು ಸೃಷ್ಟಿಸುವ ದಂಧೆ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ರೈತರು ಹಾಗೂ ಖಾಸಗಿ ಬ್ಯಾಂಕ್‌ಗಳು ಮೋಸ ಹೋಗುತ್ತಿರುವುದನ್ನು ತಡೆಯಲು ತಾಲ್ಲೂಕು ಆಡಳಿತ ಕಠಿಣ ಕ್ರಮ ಜರಗಿಸಬೇಕು ಎಂದು ರೈತರು ಆಗ್ರಹಿಸಿದರು.

ಭೂ ಹಿಡುವಳಿಯ ನಕಲಿ ಪತ್ರ

ತಹಶೀಲ್ದಾರ್‌ ಅವರ ನಕಲಿ ಸಹಿಯುಳ್ಳ ನಕಲಿ ಪ್ರಮಾಣ ಪತ್ರಗಳನ್ನು ಹಂಚಿಕೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸುವೆ

ಬಸವಣಪ್ಪ ಕಲಶೆಟ್ಟಿ ಉಪವಿಭಾಗಾಧಿಕಾರಿ ಲಿಂಗಸುಗೂರು 

ಎಲ್ಲಾ ಪ್ರಮಾಣ ಪತ್ರಗಳನ್ನು ಕೈ ಬರಹ ಮೂಲಕ ನೀಡುವುದನ್ನು ನಿಲ್ಲಿಸಿ ಡಿಜಿಟಿಲ್ ಪ್ರಮಾಣ ಪತ್ರಗಳನ್ನು ಆನ್‌ಲೈನ್ ಮೂಲಕವೇ ನೀಡಲಾಗುತ್ತಿದೆ. ಸಾರ್ವಜನಿಕರು ರೈತರು ನಕಲಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಮೋಸ ಹೋಗಬೇಡಿ. ಇದಕ್ಕೆ ಶೀಘ್ರವೇ ಕಡಿವಾಣ ಹಾಕಲಾಗುವುದು

ಸತ್ಯಮ್ಮ ತಹಶೀಲ್ದಾರ್ ಲಿಂಗಸುಗೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.