ಲಿಂಗಸುಗೂರು ಪಟ್ಟಣದಲ್ಲಿರುವ ತಾಲ್ಲೂಕು ಆಯುಷ್ ಆಸ್ಪತ್ರೆ
Administration not giving site to AYUSH hospitals
ಲಿಂಗಸುಗೂರು: ಆಯುರ್ವೇದ ಚಿಕಿತ್ಸೆ ಬಗ್ಗೆ ಜನರಲ್ಲಿ ಒಲವು ಹೆಚ್ಚುತ್ತಿರುವ ಮಧ್ಯೆಯೇ ತಾಲ್ಲೂಕಿನಲ್ಲಿ ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ನಿವೇಶನ ನೀಡಲು ತಾಲ್ಲೂಕು ಆಡಳಿತ ನಿರಾಸಕ್ತಿ ತೋರುತ್ತಿದೆ.
ಅಲೋಪಥಿ ಚಿಕಿತ್ಸೆಯತ್ತ ಒಲವು ತೋರುತ್ತಿರುವವರ ನಡುವೆಯೂ ಜತೆಗೆ ನಾನಾ ಗಿಡಮೂಲಿಕೆ, ಮನೆ ಮದ್ದಿನಿಂದಾಗಿಯೇ ಕೆಲ ರೋಗ ವಾಸಿಯಾಗುತ್ತದೆ ಎಂದು ಬಲವಾಗಿ ನಂಬುತ್ತಿರುವವರ ಸಂಖ್ಯೆಯೂ ಇತ್ತೀಚೆಗೆ ಹೆಚ್ಚುತ್ತಿದೆ. ಇದೇ ಮುತುವರ್ಜಿಯಿಂದ ಜಿಲ್ಲಾ ಆಯುಷ್ ಇಲಾಖೆ ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಆಯುಷ್ ಚಿಕಿತ್ಸಾಲಯ ತೆರಯಬೇಕೆಂಬ ಉದ್ದೇಶದಿಂದ ನಿವೇಶನ ಒದಗಿಸುವಂತೆ ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದೆ.
ವರ್ಷದ ಹಿಂದೆ ಪತ್ರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿ 10 ಹಾಸಿಗೆ ಸಾಮಾರ್ಥ್ಯದ ತಾಲ್ಲೂಕು ಆಯುಷ್ ಆಸ್ಪತ್ರೆ ಸ್ಥಾಪಿಸಲಾಗಿದೆ. 30 ಹಾಸಿಗೆ ಸಾಮಾರ್ಥ್ಯದ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕಾಗಿ ಎರಡು ಎಕರೆ, ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ, ಆನಾಹೊಸೂರು, ನಾಗರಾಳ ಗ್ರಾಮದಲ್ಲಿ ಆಯುಷ್ ಚಿಕಿತ್ಸಾಲಯಕ್ಕಾಗಿ 200X200 ಅಳತೆ ನಿವೇಶನ, ನಾಗಲಾಪುರು, ಗುರುಗುಂಟಾ, ಗೆಜ್ಜಲಗಟ್ಟಾ, ಚಿತ್ತಾಪುರು, ಆಮದಿಹಾಳ, ಈಚನಾಳ, ಬಯ್ಯಾಪುರ, ರೋಡಲಬಂಡಾ, ಮಾವಿನಭಾವಿ, ಸಜ್ಜಲಗುಡ್ಡ, ದೇವಭೂಪುರ ಗ್ರಾಮದಲ್ಲಿ 100X200 ಅಳತೆ ನಿವೇಶನ ಒದಗಿಸುವಂತೆ 2024ರ ಆಗಸ್ಟ್ 28ರಂದು ಜಿಲ್ಲಾ ಆಯುಷ್ ಅಧಿಕಾರಿ ಇಲ್ಲಿನ ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ. ಪತ್ರ ಬರೆದು ಒಂದು ವರ್ಷ ಕಳೆದರೂ ಸ್ಪಂದನೆ ಇಲ್ಲದಾಗಿದೆ.
ಗ್ರಾಮೀಣ ಭಾಗದಲ್ಲಿ ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳನ್ನು ನಿರ್ಮಾಣ ಮಾಡಲು ನಿವೇಶನ ಒದಗಿಸಿದರೆ, ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಜಿಲ್ಲಾ ಆಯುಷ್ ಅಧಿಕಾರಿಗಳ ಮುಖಾಂತರ ರಾಜ್ಯ ಆಯುಷ್ ಇಲಾಖೆಗೆ ಪ್ರಸ್ತಾವ ಕಳುಹಿಸಿದರೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಲಿದೆ. ಆದರೆ, ಆಯುಷ್ ಆಸ್ಪತ್ರೆ ಕಟ್ಟಡ ಕಟ್ಟಲು ಸರ್ಕಾರ ಹಣ ಬಿಡುಗಡೆಗೊಳಿಸಿದ್ದರೆ ಮಾತ್ರ ಜಾಗ ಒದಗಿಸುತ್ತೇವೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಿದ್ದು ನೀ ಕೊಡೆ ನಾ ಬಿಡೆ ಎನ್ನುವಂತಾಗಿದೆ ಎಂದು ಹೇಳಲಾಗುತ್ತಿದೆ.
ಪಟ್ಟಣದಲ್ಲಿ 30 ಹಾಸಿಗೆ ಸಾಮಾರ್ಥ್ಯದ ಆಯುಷ್ ಆಸ್ಪತ್ರೆಗಾಗಿ ಎರಡು ಎಕರೆ ಜಾಗದ ಅಗತ್ಯವಿದ್ದು ಇದಕ್ಕಾಗಿ ತಾಯಿ ಮಕ್ಕಳ ಆಸ್ಪತ್ರೆ ಪಕ್ಕದಲ್ಲಿರುವ ನಿವೇಶನ ಒದಗಿಸುವಂತೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಅಲೆದಾಡಿದರೂ ಏನೂ ಪ್ರಯೋಜನ ಆಗದಾಗಿದೆ ಎಂದು ಹೆಸರೇಳಿಚ್ಚಿಸದ ಸಿಬ್ಬಂದಿ ತಿಳಿಸಿದ್ದಾರೆ.
‘ಕೆಡಿಪಿ ಸಭೆಯಲ್ಲಿ ಸಚಿವರ ಗಮನಕ್ಕೆ’
ಲಿಂಗಸುಗೂರು ಪಟ್ಟಣ ಸೇರಿ ಒಟ್ಟು 15 ಕಡೆಗಳಲ್ಲಿ ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ನಿವೇಶನ ಒದಗಿಸಿದರೆ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗುವುದು. ಈ ಬಗ್ಗೆ ತಹಶೀಲ್ದಾರ್ ಭೇಟಿ ಮಾಡಿದ್ದೇನೆ. ಲಿಂಗಸುಗೂರಿನಲ್ಲಿ ಇತ್ತೀಚಿಗೆ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ಅವರ ಗಮನಕ್ಕೆ ತಂದಿದ್ದೇನೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ ತಿಳಿಸಿದರು.
‘ಟೆಂಡರ್ ಹಂತದ ಯೋಜನೆಗಳಿಗೆ ಆದ್ಯತೆ’
ಸರ್ಕಾರಿ ಜಾಗ ಕಡಿಮೆ ಇರುವುದರಿಂದ ಅನುದಾನ ಬಿಡುಗಡೆಯಾಗಿ ಟೆಂಡರ್ ಹಂತದಲ್ಲಿರುವ ಯೋಜನೆಗಳಿಗೆ ಜಾಗ ನೀಡಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಆದರೆ, ಆಯುಷ್ ಆಸ್ಪತ್ರೆ ಕಟ್ಟಲು ಅನುದಾನ ಬಿಡುಗಡೆ ಆಗಿಲ್ಲ. ಎರಡು ಎಕರೆ ಜಾಗ ಮೀಸಲಿಡುವಂತೆ ಆಯುಷ್ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
– ಬಸವಣಪ್ಪ ಕಲಶೆಟ್ಟಿ, ಉಪವಿಭಾಗಾಧಿಕಾರಿ, ಲಿಂಗಸುಗೂರು
ಗ್ರಾಮೀಣ ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಆಯುಷ್ ಚಿಕಿತ್ಸಾಲಯಗಳಿಗೆ ನಿವೇಶನ ಒದಗಿಸಲು ತಾಲ್ಲೂಕು ಆಡಳಿತ ಮುಂದಾಗಬೇಕು– ಹನುಮಂತ ನಾಯಕ, ಅಧ್ಯಕ್ಷ, ಜಯ ಕರ್ನಾಟಕ ರಕ್ಷಣಾ ಸೇನೆ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.