ADVERTISEMENT

PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!

ಲಿಂಗಸುಗೂರು ತಾಲ್ಲೂಕಿಗೆ ಬರೆ; ಜನರು ಹೈರಾಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 11:47 IST
Last Updated 23 ಜನವರಿ 2026, 11:47 IST
<div class="paragraphs"><p>ಲಿಂಗಸುಗೂರು ಉಪ ವಿಭಾಗ ಕಚೇರಿ</p></div>

ಲಿಂಗಸುಗೂರು ಉಪ ವಿಭಾಗ ಕಚೇರಿ

   

ಲಿಂಗಸುಗೂರು (ರಾಯಚೂರು ಜಿಲ್ಲೆ): ಪಟ್ಟಣದಲ್ಲಿರುವ ಸರ್ಕಾರಿ  ಕಚೇರಿ ಸ್ಥಳಾಂತರ ಮಾಡುವ ಮೂಲಕ ತಾಲ್ಲೂಕಿಗೆ ದ್ರೋಹ ಬಗೆಯ ಕಾರ್ಯ ಎಗ್ಗಿಲ್ಲದೆ ನಡೆದಿದೆ.

1905ವರೆಗೆ ಲಿಂಗಸುಗೂರು ಜಿಲ್ಲಾ ಕೇಂದ್ರವಾಗಿತ್ತು, ಈ ಜಿಲ್ಲೆಯಲ್ಲಿ ಲಿಂಗಸುಗೂರು, ಕುಷ್ಟಗಿ, ಗಂಗಾವತಿ, ಸಿಂಧನೂರು, ಶಹಾಪುರ, ಶೋರಾಪುರ( ಸುರಪುರ) ತಾಲ್ಲೂಕುಗಳನ್ನು ಒಳಗೊಂಡಿತ್ತು. 1905ರಲ್ಲಿ ಲಿಂಗಸುಗೂರು ಜಿಲ್ಲೆಯನ್ನು ರದ್ದುಗೊಳಿಸಿ ರಾಯಚೂರು ಜಿಲ್ಲೆಯಲ್ಲಿ ಸೇರಿಸಲಾಗಿತ್ತು. ಲಿಂಗಸುಗೂರು ತಾಲ್ಲೂಕು ಪ್ರಸ್ತುತ ಕಂದಾಯ ಮತ್ತು ಪೊಲೀಸ್ ಉಪ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಉಪ ವಿಭಾಗದ ಕೇಂದ್ರ ಸ್ಥಾನದಲ್ಲಿ ಸಹಾಯಕ ಆಯುಕ್ತ, ಡಿವೈಎಸ್ಪಿ, ಕೆಪಿಟಿಸಿಎಲ್ ವಿಭಾಗೀಯ ಕಚೇರಿ, ಕೃಷಿ ಉಪ ನಿರ್ದೇಶಕರ ಕಚೇರಿಗಳು ಸೇರಿ ತಾಲ್ಲೂಕು ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಕಚೇರಿಗಳ ಮೇಲೆ ಪಕ್ಕದ ತಾಲ್ಲೂಕಿನ ಜನಪ್ರತಿನಿಧಿಗಳು ಕೆಂಗಣ್ಣು ತಾಲ್ಲೂಕಿನ ಬಿದ್ದು ನಿರಂತರ ಶೋಷಣೆಗೊಳಾಗುತ್ತಿದೆ.

ಸಹಕಾರ ಉಪನಿಬಂಧಕರ ಕಚೇರಿ ಲಿಂಗಸುಗೂರಿಗೆ ಮಂಜೂರಾಗಿತ್ತು, ಆದರೆ ಅದನ್ನು ಲಿಂಗಸುಗೂರಿನಲ್ಲಿ ಸ್ಥಾಪನೆ ಮಾಡದೇ ಸಿಂಧನೂರಿನಲ್ಲಿ ಸ್ಥಾಪನೆ ಮಾಡಿದೆ. ಈಗಲೂ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.

ಪಟ್ಟಣದಲ್ಲಿ 2004ರಲ್ಲಿ ಕೆಪಿಟಿಸಿಎಲ್ ವಿಭಾಗೀಯ ಕಚೇರಿ ಸ್ಥಾಪನೆಯಾಗಿದೆ. ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯನ್ನು ಒಳಗೊಂಡ ಕಚೇರಿ ಈಗಾಗಲೇ ಲಿಂಗಸುಗೂರು ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ  ₹ 70 ಲಕ್ಷ ವ್ಯಯಿಸಿ ಹೊಸದಾಗಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. 2018ರಲ್ಲಿ ಸಿಂಧನೂರಿಗೆ ಸ್ಥಳಾಂತರಿಸುವಂತೆ ಆ ತಾಲ್ಲೂಕಿನ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. 2024ರಲ್ಲಿ ರಾಯಚೂರಿಗೆ ಸ್ಥಳಾಂತರಿಸುವಂತೆ ಅಲ್ಲಿನ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಸ್ಥಳಾಂತರಕ್ಕೆ ಪ್ರಯತ್ನಕ್ಕೆ ಕೈ ಹಾಕಿದ್ದರು. ಆದರೆ, ಇಲ್ಲಿ ಹೋರಾಟ ಆರಂಭವಾಗಿದ್ದರಿಂದ ಸ್ಥಳಾಂತರ ಪ್ರಕ್ರಿಯೆ ಕೈಬಿಡಲಾಗಿದೆ.

ಕೃಷಿ ಉಪ ನಿರ್ದೇಶಕರ ಕಚೇರಿ

ಲಿಂಗಸುಗೂರಲ್ಲಿ 2014ರಲ್ಲಿ ಕೃಷಿ ಉಪ ನಿರ್ದೇಶಕರ-2 ಕಚೇರಿ ಸ್ಥಾಪನೆ ಮಾಡಲಾಗಿದೆ. ಇದಕ್ಕಾಗಿ ಸ್ವಂತ ಕಟ್ಟಡ ಕೂಡ ನಿರ್ಮಾಣ ಮಾಡಲಾಗಿದೆ. 2024ರಿಂದಲೂ ಈ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಕ್ಕೆ ಸರ್ಕಾರದ ಮಟ್ಟದಲ್ಲಿ ಸಿಂಧನೂರಿನ ಚುನಾಯಿತ ಪ್ರತಿನಿಧಿಗಳು ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದಾರೆ. ಆದರೆ ಅವರ ಕನಸು ಈಡೇರುತ್ತಿಲ್ಲ.

ಕೊಟ್ಟು ಕಸಿದುಕೊಂಡ ಸರ್ಕಾರ

2024 ಸೆ.17ರಂದು ಕಲುಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೇರಿಸಲು ನಿರ್ಣಯಿಸಲಾಗಿತ್ತು, ತದನಂತರ 2025-26ನೇ ಸಾಲಿ ಬಜೆಟ್ ನಲ್ಲಿಯೂ ಕೂಡ ಸಿಎಂ ಸಿದ್ಧರಾಮಯ್ಯ ಜಿಲ್ಲಾ ಮಟ್ಟದ ಆಸ್ಪತ್ರೆ ಮೇಲ್ದರ್ಜೇರಿಸಿದ್ದರು. ಜಿಲ್ಲಾ ಮಟ್ಟದ ಆಸ್ಪತ್ರೆ ಮಂಜೂರಾಗಿದ್ದರಿಂದ ಹೊಸ ಕಟ್ಟಡ ನಿರ್ಮಾಣಕ್ಕಾಗಿ ತಾಯಿ ಮಕ್ಕಳ ಆಸ್ಪತ್ರೆ ಪಕ್ಕವೇ 6 ಎಕರೆ ಜಾಗ ಒದಗಿಸಲಾಗಿತ್ತು, ಆದರೆ, 2025 ಮೇ 22ರಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಿಂಗಸುಗೂರಿಗೆ ಮಂಜೂರು ಮಾಡಿದ್ದ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನು ರದ್ದು ಮಾಡಿ ಅದನ್ನು ಏಕಾಏಕಿ ಸಿಂಧನೂರಿಗೆ ಸ್ಥಳಾಂತರ ಮಾಡಿ ನಿರ್ಣಯ ಮಾಡಿ ಇಲ್ಲಿನ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಲಯ

ತಾಲ್ಲೂಕಿನ ಕೇಸುಗಳ ಮಾನದಂಡಗಳ ಆಧಾರದಲ್ಲಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಾಯಂ ಪೀಠ ಮಂಜೂರು ಮಾಡುವಂತೆ ವಕೀಲರ ಸಂಘ ಹೈಕೋರ್ಟ್ ಜನರಲ್ ರಜಿಸ್ಟರ್ ಅವರಿಗೆ ಮನವಿ ಮಾಡಲಾಗಿತ್ತು, ಆದರೆ ಸಿಂಧನೂರಿಗೆ ಮಂಜೂರು ಮಾಡಲಾಗಿದೆ.ಇಲ್ಲಿನ ವಕೀಲರ ಒತ್ತಡದ ಮೇರಿಗೆ 2024 ಡಿಸೆಂಬರ್ 2ರಿಂದ ವಾರದಲ್ಲಿ ಎರಡು ದಿನ ಲಿಂಗಸುಗೂರು ತಾಲ್ಲೂಕು ನ್ಯಾಯಲಯದಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಪೀಠ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಕೇಸ್ ಗಾಗಿ ಸಿಂಧನೂರಿಗೆ ಅಲೆದಾಡುವಂತಾಗಿದೆ.

ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಕಚೇರಿ ಸ್ಥಳಾಂತರ!

ಇಲ್ಲಿನ ಕಚೇರಿಗಳನ್ನು ಸಿಂಧನೂರಿಗೆ ಸ್ಥಳಾಂತರಿಸುವ ಹಿನ್ನಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಲಿಂಗಸುಗೂರು ತಾಲ್ಲೂಕಿನ ಭೌಗೋಳಿಕ ಸೇರಿದಂತೆ ಇತರೆ ಮಾಹಿತಿಗಳನ್ನು ಸುಳ್ಳು ಹೇಳಿ ಸರ್ಕಾರದ ಕಣ್ಣಿಗೆ ಮಣ್ಣರೆಚಿ ಕಚೇರಿ ಸ್ಥಳಾಂತರಕ್ಕೆ ಅಧಿಕಾರಿಗಳ ಮೂಲಕ ಪತ್ರ ಬರೆಸುತ್ತಿದ್ದಾರೆ.

ಫಲನೀಡದ ಹೋರಾಟ

ಒಂದೊಂದಾಗಿ ಕಚೇರಿಯನ್ನು ಸ್ಥಳಾಂತರ ಮಾಡುತ್ತಿರುವುದನ್ನು ವಿರೋಧಿಸಿ ಇಲ್ಲಿನ ಸಾರ್ವಜನಿಕರು ವಿವಿಧ ರೀತಿಯಲ್ಲಿ ಹೋರಾಟ, ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ, ಹೋರಾಟಕ್ಕೆ ಮಣಿದು ಸ್ಥಳಾಂತರ ಪ್ರಕ್ರಿಯೆ ತೋರಿಕೆಗೆ ನಿಲ್ಲಿಸಿದಂತೆ ಮಾಡುವ ಅಧಿಕಾರಿಗಳು,  ಸಿಂಧನೂರಿನ ಮುಖಂಡರ ಒಳಒಳಗೆ ಸ್ಥಳಾಂತರಕ್ಕೆ ಮತ್ತೆ ಕೈ ಹಾಕುವ ಪ್ರಯತ್ನ ನಿರಂತರವಾಗಿದೆ ನಡೆದಿದೆ. ಸ್ಥಳೀಯ ಶಾಸಕರು ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ಹಾಗೂ ಅಧಿವೇಶನದಲ್ಲಿ ಹೋರಾಟ ಮಾಡಲಾಗುತ್ತಿದೆಯಾದರೂ ಅವರ ಹೋರಾಟಕ್ಕೆ ಯಾವುದೇ ಫಲ ಇಲ್ಲದಂತಾಗಿದೆ.

ಬಡಪಾಯಿ ಆದ ತಾಲೂಕು

ಈಗಾಗಲೇ ತಾಲ್ಲೂಕಿನ ಮಂಜೂರಾತಿ ಹಂತದಲ್ಲಿದ್ದ ಪ್ರಾದೇಶಿಕ ಸಾರಿಗೆ ಕಚೇರಿ, ಜಿಲ್ಲಾ ನ್ಯಾಯಾಲಯ, ಸಹಕಾರ ಇಲಾಖೆ, ಜಿಲ್ಲಾ ಮಟ್ಟದ ಆಸ್ಪತ್ರೆ ಕಚೇರಿಗಳು ಸಿಂಧನೂರಿಗೆ ಸ್ಥಳಾಂತರವಾಗಿವೆ. ಒಂದೊಂದಾಗಿ ಕಚೇರಿಯನ್ನು ಸ್ಥಳಾಂತರಕ್ಕೆ ಕೈ ಹಾಕುತ್ತಿರುವುದು ವಿಪರ್ಯಾಸ. ಇಲ್ಲಿರುವ ಕಚೇರಿ ಸ್ಥಳಾಂತರ ಮಾಡುವ ಮೂಲಕ ಉಪವಿಭಾಗ ಕಸಿದುಕೊಂಡು ಬರೀ ತಾಲ್ಲೂಕು ಕೇಂದ್ರವನ್ನಾಗಿ ಮಾಡುವ ಹುನ್ನಾರ ನಡೆಯುತ್ತಲೇ ಇದೆ.

ಜಿಲ್ಲಾ ಮಟ್ಟದ ಆಸ್ಪತ್ರೆ, ಜಿಲ್ಲಾ ನ್ಯಾಯಾಲಯ, ಸಿಂಧನೂರಿಗೆ ಸ್ಥಳಾಂತರಿಕೊಂಡು ಜಿಲ್ಲಾ ಕೇಂದ್ರದಲ್ಲಿರುವ ಕೆಲವು ಕಚೇರಿಗಳನ್ನು ಈಗಾಗಲೇ ಸಿಂಧನೂರಿನಲ್ಲಿವೆ ಹೀಗಾಗಿ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಸಿಂಧನೂರಿನಲ್ಲಿ ಹೋರಾಟ ನಡೆಸುತ್ತಿರುವುದು ಎಷ್ಟು ಸರಿ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಪ್ರಶ್ನಿಸಿದ್ದಾರೆ.

****

“ಜಿಲ್ಲಾ ಮಟ್ಟದ ಆಸ್ಪತ್ರೆ ಸಿಂಧನೂರಿಗೆ ಸ್ಥಳಾಂತರ ಮಾಡಿದ್ದಕ್ಕೆ ಅಧಿವೇಶನದಲ್ಲಿ ಹೋರಾಟ ಮಾಡಿದ್ದೇನೆ, ಬಿಜೆಪಿ ಶಾಸಕರ ಕ್ಷೇತ್ರ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ತಮ್ಮ ಸ್ವಪಕ್ಷದ ಕ್ಷೇತ್ರಕ್ಕೆ ಹಿತ ಕಾಯುವ ಕೆಲಸ ಮಾಡಿ ನಮ್ಮ ಕ್ಷೇತ್ರಕ್ಕೆ ಮೋಸ ಮಾಡುತ್ತಿದೆ. ಇಲ್ಲಿರುವ ಕಚೇರಿಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವ ದುಸ್ಸಾಹಸಕ್ಕೆ ಸರ್ಕಾರವಾಗಲಿ, ಪಕ್ಕದ ಚುನಾಯಿತ ಪ್ರತಿನಿಧಿಗಳಾಗಲಿ ಕೈ ಹಾಕಬಾರದು”
ಮಾನಪ್ಪ ವಜ್ಜಲ್, ಶಾಸಕ ಲಿಂಗಸುಗೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.