
ಲಿಂಗಸುಗೂರು: ಪಟ್ಟಣದ ಪ್ರಮುಖ ರಸ್ತೆಗಳ ಬದಿಯ ಡಬ್ಬಾ ಅಂಗಡಿಗಳನ್ನು ತೆರವು ಮಾಡಬಾರದು ಎಂದು ಆಗ್ರಹಿಸಿ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ತಾಲ್ಲೂಕು ಘಟಕದ ನೇತೃತ್ವದಲ್ಲಿ ವ್ಯಾಪಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪುರಸಭೆ ಕಚೇರಿ ಬಳಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ, ನಂತರ ಅಲ್ಲಿಂದ ಗಡಿಯಾರ ವೃತ್ತದ ಮೂಲಕ ಉಪವಿಭಾಗಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡಿತು.
ಪಟ್ಟಣದ ವಿವಿಧ ಪ್ರಮುಖ ರಸ್ತೆಗಳ ಬದಿಯಲ್ಲಿ ತಳ್ಳುವ ಬಂಡಿ, ಡಬ್ಬಾ ಅಂಗಡಿಗಳನ್ನು ಇಟ್ಟು ಜೀವನೋಪಾಯಕ್ಕಾಗಿ ವಿವಿಧ ವ್ಯಾಪಾರ ಮಾಡಲಾಗುತ್ತಿದೆ. ಆದರೆ, ಜ.29ರಂದು ಎಲ್ಲಾ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಲು ದಿನ ನಿಗದಿ ಮಾಡಲಾಗಿದೆ. ಇದರಿಂದ ಸಾಲ ಮಾಡಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಸಾಲದ ಕಂತು ಕಟ್ಟಲು ಕಷ್ಟಕವಾಗುತ್ತದೆ. ಸಂಚಾರಕ್ಕೆ ತೊಂದರೆಯಾಗದಂತೆ ವಹಿವಾಟು ನಡೆಸಲಾಗುವುದು. ಯಾವುದೇ ಕಾರಣಕ್ಕೂ ಅಂಗಡಿಗಳನ್ನು ತೆರವುಗೊಳಿಸಬಾರದು ಎಂದು ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಯೇಸುಮಿತ್ರ ಒತ್ತಾಯಿಸಿದರು.
ಗಡುವು: ನಂತರ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಪಿಐ ಹೊಸಕೇರಪ್ಪ,‘ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ, ತೀರಾ ರಸ್ತೆಗೆ ಹೊಂದಿಕೊಂಡೇ ವ್ಯಾಪಾರ ಮಾಡುವುದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ವಹಿವಾಟು ನಡೆಸುವುದು, ಮಾಂಸದ ತುಂಡು, ತಿಂಡಿ–ತಿನಿಸು, ಗಲೀಜು ನೀರು ರಸ್ತೆಗೆ ಸುರಿಯುವುದು, ರಾತ್ರಿ 10 ಗಂಟೆ ನಂತರವೂ ವಹಿವಾಟು ನಡೆಸುವ ಕುರಿತು ಪುರಸಭೆ, ಉಪವಿಭಾಗಾಧಿಕಾರಿಗೆ ಸಾಕಷ್ಟು ದೂರುಗಳು ಬಂದಿವೆ’ ಎಂದರು.
‘ಸಿಂಧನೂರು ನಗರದಲ್ಲಿ ತೆರವುಗೊಳಿಸಿದ ಮಾದರಿಯಲ್ಲಿ ಜ.29ರಂದು ಪಟ್ಟಣದ ಎಲ್ಲಾ ವೃತ್ತಗಳಲ್ಲಿ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇನ್ನೂ ನಾಲ್ಕು ದಿನಗಳ ಗಡುವು ನೀಡಲಾಗುತ್ತಿದೆ. ಅಷ್ಟರೊಳಗಾಗಿ ವ್ಯಾಪಾರಿಗಳು ಈ ಹಿಂದಿನ ವರ್ತನೆ ಸುಧಾರಿಸಿಕೊಂಡು ಸಂಚಾರಕ್ಕೆ ತೊಂದರೆಯಾಗದಂತೆ, ಸ್ವಚ್ಛತೆ ಕಾಪಾಡಿಕೊಂಡು ವ್ಯಾಪಾರ ಮಾಡಬೇಕು. ರಾತ್ರಿ 10 ಗಂಟೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಬೇಕು. ಒಂದು ವೇಳೆ ಹಳೆಯ ಚಾಳಿ ಮುಂದುವರಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.
ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಮಹಿಬೂಬು ಪಾಷಾ, ಹಶ್ಮತ್, ಡಿಎಸ್ಎಸ್‌ನ ನೀಲಕಂಠ, ರೇಣುಕಾ ನಿತ್ಯಾನಂದ, ರಾಬಿಯಾ, ಶರಣಪ್ಪ ಹುನುಕುಂಟಿ, ಬಸವರಾಜ ಸ್ವಾಮಿ, ಮಹಾಂತೇಶ ಹೂಗಾರ, ಪಂಪಣ್ಣ ಹೂಗಾರ, ಬಾಷಾ, ನಾಗರಾಜ, ಶರಣಪ್ಪ, ರಫಿ, ಶಿವು, ಮಂಜುನಾಥ, ಲಾಲಮ್ಮ, ಬಾಲಮ್ಮ, ವಿಜಯಕುಮಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.