ADVERTISEMENT

ಮತ್ತೊಮ್ಮೆ ಮೋದಿ ಸರ್ಕಾರಕ್ಕಾಗಿ ರಾಯಚೂರು ಮಹಿಳೆಯಿಂದ ‘ಬುಲೆಟ್’ ಸವಾರಿ

21 ಸಾವಿರ ಕಿ.ಮೀ.ಬೈಕ್‌ ಸವಾರಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 8:37 IST
Last Updated 5 ಮಾರ್ಚ್ 2024, 8:37 IST
<div class="paragraphs"><p>ರಾಯಚೂರು ಮೂಲದ ಮಹಿಳೆ ರಾಜಲಕ್ಷ್ಮಿ ಮಂದಾ</p></div>

ರಾಯಚೂರು ಮೂಲದ ಮಹಿಳೆ ರಾಜಲಕ್ಷ್ಮಿ ಮಂದಾ

   

ಹೊಸಪೇಟೆ (ವಿಜಯನಗರ): ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದೊಂದಿಗೆ ರಾಯಚೂರು ಮೂಲದ ಮಹಿಳೆ ರಾಜಲಕ್ಷ್ಮಿ ಮಂದಾ ಅವರು ಮದುರೆಯಿಂದ ಬುಲೆಟ್ ಬೈಕ್‌ನಲ್ಲಿ ರ‍್ಯಾಲಿ ಆರಂಭಿಸಿದ್ದು, ಮಂಗಳವಾರ ಹೊಸಪೇಟೆಯಿಂದ ಬಳ್ಳಾರಿಯತ್ತ ತೆರಳಿದರು.

ಫೆಬ್ರುವರಿ 12ರಂದು ಆರಂಭವಾಗಿರುವ ರ‍್ಯಾಲಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶವನ್ನು ಕ್ರಮಿಸಿ, ಚಿಕ್ಕಬಳ್ಳಾಪುರ ಮೂಲಕ ರಾಜ್ಯ ಪ್ರವೇಶಿಸಿದ್ದು, ಈಗಾಗಲೇ 4,500 ಕಿ.ಮೀ.ಕ್ರಮಿಸಿದೆ. ಒಟ್ಟು 15 ರಾಜ್ಯಗಳನ್ನು ಕ್ರಮಿಸಿಲಿರುವ ರ‍್ಯಾಲಿ 21 ಸಾವಿರ ಕಿ.ಮೀ.ಸಂಚರಿಸಿ ಏಪ್ರಿಲ್ 18ರಂದು ದೆಹಲಿ ತಲುಪಲಿದೆ.

ADVERTISEMENT

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಬೈಕ್‌ ಸಾಹಸದ ಬಗ್ಗೆ ಮಾಹಿತಿ ನೀಡಿದ ರಾಜಲಕ್ಷ್ಮಿ ಮಂದಾ, ಪ್ರಧಾನಿ ಮೋದಿ ಅವರ 10 ವರ್ಷದ ಆಡಳಿತದಿಂದ ದೇಶ ಬಹಳಷ್ಟು ಸುಧಾರಣೆ ಕಂಡಿದೆ, ಇನ್ನೂ ಒಂದು ಅವಧಿಗೆ ಅವರೇ ಪ್ರಧಾನಿಯಾದರೆ ದೇಶ ಇನ್ನಷ್ಟು ವೇಗವಾಗಿ ಪ್ರಗತಿ ಹೊಂದಿವುದು ನಿಶ್ಚಿತ, ಇದನ್ನು ತಾವು ಹೋದ ಕಡೆಗಳಲ್ಲಿ ಪ್ರಚಾರ ಮಾಡುತ್ತ ಹೋಗುವುದಾಗಿ ಹೇಳಿದರು.

ಸೋಮವಾರ ಸಂಜೆ ಕೊಪ್ಪಳದಿಂದ ಹೊಸಪೇಟೆಗೆ ಪ್ರವೇಶಿಸಿದ್ದ ಅವರು, ನಗರದ ವಿವಿಧ ಕಡೆಗಳಲ್ಲಿ ಬೈಕ್‌ ರ‍್ಯಾಲಿ ನಡೆಸಿ ನರೇಂದ್ರ ಮೋದಿ ಅವರಿಗೆ ಬೆಂಬಲ ಯಾಚಿಸಿದ್ದಲ್ಲದೆ, ಮಹಿಳೆಯರು ಸಾಹಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನ್ನೂ ಸಾರಿದ್ದರು.

24 ಮಂದಿಯ ತಂಡದೊಂದಿಗೆ ರ‍್ಯಾಲಿ 

ಲೀಗಲ್‌ ರೈಟ್ಸ್ ಕೌನ್ಸಿಲ್‌–ಇಂಡಿಯಾ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರಾಜಲಕ್ಷ್ಮಿ ಅವರ ಜತೆಗೆ 24 ಮಂದಿಯ ತಂಡ ಇದ್ದು, ಬುಲೆಟ್ ಬೈಕ್‌ನಲ್ಲಿ ರಾಜಲಕ್ಷ್ಮಿ ಅವರೊಬ್ಬರೇ ಸವಾರಿ ಮಾಡುತ್ತಾರೆ. ಉಳಿದವರು ಒಂದು ಟ್ರಕ್‌ನಲ್ಲಿ ಅವರನ್ನು ಹಿಂಬಾಲಿಸುತ್ತಾರೆ.

ವಾರಾಣಸಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿರುವ ರಾಜಲಕ್ಷ್ಮಿ ಅವರು 9.5 ಟನ್‌ ತೂಕದ ವಾಹನವನ್ನು ನಿರಾಯಾಸವಾಗಿ ಎಳೆದು ಗಿನ್ನೆಸ್‌ ದಾಖಲೆ ಮಾಡಿದ ಗಟ್ಟಿಗಿತ್ತಿ. ಯೋಗ ಸಾಧಕಿಯೂ ಆಗಿರುವ ಅವರು, ದೇಶದ 85 ಕಡೆಗಳಲ್ಲಿ ಟ್ರಕ್‌ ಎಳೆಯುವ ಸಾಹಸ ಪ್ರದರ್ಶಿಸಿದ್ದಾರೆ. ಆರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಅವರು ಚೆನ್ನೈಯಲ್ಲಿ ಹಿಂದಿ ಶಾಲೆಯೊಂದನ್ನು ತೆರೆದು 11,000ಕ್ಕೂ ಅಧಿಕ ಮಂದಿಗೆ ಹಿಂದಿ ಕಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.