ADVERTISEMENT

‘ಸಪ್ತರಾತ್ರೋತ್ಸವ‘ ಕಾರ್ಯಕ್ರಮಗಳು ಆರಂಭ

ರಾಯರ 351ನೇ ಆರಾಧನಾ ಮಹೋತ್ಸವ: ಶ್ರೀಗಳಿಂದ ಧ್ವಜಾರೋಹಣ, ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 15:41 IST
Last Updated 10 ಆಗಸ್ಟ್ 2022, 15:41 IST
ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ಕಾರ್ಯಕ್ರಮಗಳಿಗೆ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಬುಧವಾರ ಅಶ್ವಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಚಾಲನೆ ನೀಡಿದರು.
ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ಕಾರ್ಯಕ್ರಮಗಳಿಗೆ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಬುಧವಾರ ಅಶ್ವಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಚಾಲನೆ ನೀಡಿದರು.   

ರಾಯಚೂರು: ಶ್ರೀರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವವು ಶ್ರಾವಣಮಾಸದ ಶುಕ್ಲಪಕ್ಷ ಚತುರ್ದಶಿ ವಿದ್ಯುಕ್ತವಾಗಿ ಆರಂಭವಾಗಿದ್ದು, ತನಿಮಿತ್ತ ಸಪ್ತರಾತ್ರೋತ್ಸವ ಕಾರ್ಯಕ್ರಮಗಳಿಗೆ ಮಠದ ಪೀಠಾಧಿಪತಿ ಶ್ರೀಸುಬುಧೇಂಧ್ರ ತೀರ್ಥರು ಬುಧವಾರದಿಂದ ಚಾಲನೆ ನೀಡಿದರು.

ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಮೊದಲು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಮಠದಲ್ಲಿ ಪೂರ್ಣಕುಂಭ, ವಾದ್ಯಮೇಳಗಳು, ಮಂತ್ರಘೋಷಗಳು ಮೊಳಗಿದವು. ಶ್ರೀಕಾರಹಾಕಿದ ನಂತರ ಶ್ರೀಮಠದ ಆವರಣದಲ್ಲಿ ಧ್ವಜಾರೋಹಣ, ಗೋವು, ಅಶ್ವ ,ಗಜ, ಲಕ್ಷ್ಮೀ ಹಾಗೂ ಧಾನ್ಯ ಪೂಜೆಗಳನ್ನು ಸ್ವಾಮೀಜಿ ವಿಧಿವತ್ತಾಗಿ ನೆರವೇರಿಸಿದರು.

ಆಗಸ್ಟ್‌ 16 ರವರೆಗೂ ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ಜರುಗಲಿದ್ದು, ಪ್ರತಿದಿನವೂ ರಾಯರ ಮೂಲ ವೃಂದಾವನಕ್ಕೆ ವಿಶೇಷ ಪೂಜೆಗಳು, ಮಹಾಸಂಸ್ಥಾನ ಪ್ರತಿಮೆಗಳ ಪೂಜೆ, ಪಂಚಾಭಿಷೇಕ, ಪ್ರಾಕಾರ ರಥೋತ್ಸವಗಳು ನಡೆಯುವುದು ಈ ವರ್ಷ ವಿಶೇಷತೆಯಿಂದ ಕೂಡಿದೆ.

ADVERTISEMENT

ಕೋವಿಡ್ ಮಹಾಮಾರಿ ಕಾರಣದಿಂದ ಎರಡು ವರ್ಷಗಳಿಂದ ಆರಾಧನಾ ಮಹೋತ್ಸವದಿಂದ ದೂರ ಉಳಿದಿದ್ದ ಭಕ್ತರು ಈ ವರ್ಷ ನಿರ್ಭಿತಿಯಿಂದ ಮಂತ್ರಾಲಯದತ್ತ ಬರುತ್ತಿದ್ದಾರೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆಲೆಯೂರಿದ್ದು, ವಾರವಿಡೀ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವೃಂದಾವನ ದರ್ಶನಕ್ಕೆ ಬಂದು ಹೋಗುವ ಭಕ್ತರ ಸಂಖ್ಯೆಯಲ್ಲೂ ಭಾರಿ ಹೆಚ್ಚಳವಾಗಿದೆ.

ಅಪಾರ ಸಂಖ್ಯೆಯ ಭಕ್ತರ ಆಗಮನವನ್ನು ಗಮನದಲ್ಲಿಟ್ಟು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಖುದ್ದಾಗಿ ಪರಿಶೀಲಿಸಿ ಹಲವು ವ್ಯವಸ್ಥೆಗಳನ್ನು ಮಾಡಿಸಿದ್ದಾರೆ. ಮುಖ್ಯವಾಗಿ ವಾಹನಗಳ ನಿಲುಗಡೆ, ಅನ್ನಪ್ರಸಾದ, ಶುದ್ಧ ಕುಡಿಯುವ ನೀರು ಮತ್ತು ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ.

ಮಂತ್ರಾಲಯ ಮಠದ ವಸತಿಗೃಹಗಳಲ್ಲಿ ಮತ್ತು ಖಾಸಗಿ ವಸತಿಗೃಹಗಳಲ್ಲಿ ಈಗಾಗಲೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಉಳಿದುಕೊಂಡಿದ್ದಾರೆ. ಆಗಸ್ಟ್‌ 12 ರಂದು ರಾಯರ ಪೂರ್ವರಾಧನೆ, 13 ರಂದು ಮಧ್ಯಾರಾಧನೆ ಹಾಗೂ 14 ರಂದು ಉತ್ತರಾರಾಧನೆ ನಡೆಯಲಿದೆ. ಆ ಪ್ರಮುಖ ಮೂರು ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಲಿದ್ದಾರೆ.

ತುಂಗಾಸ್ನಾನ: ಈ ಬಾರಿ ತುಂಗಾನದಿಯಲ್ಲಿ ಪುಣ್ಯಸ್ನಾನ ಮಾಡುವುದಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿಲ್ಲ. ನದಿಯಲ್ಲಿ ಪ್ರವಾಹ ಏರುತ್ತಿರುವುದರಿಂದ, ಮಠದಿಂದ ವ್ಯವಸ್ಥೆ ಮಾಡಿರುವ ಕಡೆಗಳಲ್ಲಿ ನದಿನೀರಿನ ಸ್ನಾನ ಮಾಡಬಹುದಾಗಿದೆ. ನದಿಯತ್ತ ತೆರಳದಂತೆ ಭಕ್ತರಿಗೆ ಸೂಚನೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.