ADVERTISEMENT

ಮಾನ್ವಿ: ವಿವಿಧೆಡೆ ಸಂಭ್ರಮದ ಕ್ರಿಸ್‌ಮಸ್ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 16:00 IST
Last Updated 25 ಡಿಸೆಂಬರ್ 2024, 16:00 IST
ಮಾನ್ವಿ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಬುಧವಾರ ಶಾಸಕ ಜಿ.ಹಂಪಯ್ಯ ನಾಯಕ ಕ್ರಿಸ್‌ಮಸ್ ಪ್ರಯುಕ್ತ ಫಾದರ್ ವಿಲಿಯಂ ಪ್ರಭು ಅವರನ್ನು ಸನ್ಮಾನಿಸಿ ಹಬ್ಬದ ಶುಭಾಶಯ ತಿಳಿಸಿದರು
ಮಾನ್ವಿ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಬುಧವಾರ ಶಾಸಕ ಜಿ.ಹಂಪಯ್ಯ ನಾಯಕ ಕ್ರಿಸ್‌ಮಸ್ ಪ್ರಯುಕ್ತ ಫಾದರ್ ವಿಲಿಯಂ ಪ್ರಭು ಅವರನ್ನು ಸನ್ಮಾನಿಸಿ ಹಬ್ಬದ ಶುಭಾಶಯ ತಿಳಿಸಿದರು   

ಮಾನ್ವಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಕೋನಾಪುರಪೇಟೆಯ ಸೇಂಟ್ ಮೇರಿಸ್ ಚರ್ಚ್‌ನಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಚರ್ಚ್ ಹೊರಗಡೆ ವಿದ್ಯುತ್ ದೀಪಗಳ ಅಲಂಕಾರ ಮಾಡಿ ಗೋದಲಿಗೆ ಬಣ್ಣಬಣ್ಣದ ಬಲೂನ್ ಹಾಗೂ ಅಲಂಕಾರದ ವಿದ್ಯುತ್‌ದೀಪಗಳನ್ನು ಆಳವಡಿಸಲಾಗಿತ್ತು. ಯೇಸುಕ್ರಿಸ್ತನ ಜನನದ ಸ್ಮರಣಾರ್ಥವಾಗಿ ಮಂಗಳವಾರ ರಾತ್ರಿ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿಸಲಾಯಿತು.

ಚರ್ಚ್‌ನ ಫಾದರ್ ವಿನ್ಸೆಂಟ್ ಸುರೇಶ, ಲೊಯೋಲ ಸಂಸ್ಥೆಯ ಫಾದರ್ ಅವಿನಾಶ ಕ್ರಿಸ್ತನ ಜನನದ ಕುರಿತು ವಿಶೇಷ ಪ್ರಭೋದನೆ ನೀಡಿದರು.

ADVERTISEMENT

ಪೂಜೆಯ ನಂತರ ರಾತ್ರಿ ಬಾಲಯೇಸುವಿನ ಮೂರ್ತಿಯೊಂದಿಗೆ ಮನೆ ಮನೆಗೆ ತೆರಳಿದ ಯುವಕರು ವಾದ್ಯಗಳೊಂದಿಗೆ ಗಾಯನ, ಭಜನಾ ಹಾಡುತ್ತಾ ಕಿಸ್ತನ ಜನನವನ್ನು ಕೊಂಡಾಡಿದರು.

ಬುಧವಾರ ಬೆಳಿಗ್ಗೆ ಕ್ರಿಸ್‌ಮಸ್‌ ಹಬ್ಬದ ಪೂಜೆ ನೆರವೇರಿತು. ನಂತರ ಕೇಕ್ ವಿತರಿಸಲಾಯಿತು. ಸಮುದಾಯದವರು ಪರಸ್ಪರ ಹಬ್ಬದ ಶುಭಾಶಯ ಕೋರಿದರು.

ಶಾಸಕ ಜಿ.ಹಂಪಯ್ಯ ನಾಯಕ ಹಾಗೂ ಇತರ ಗಣ್ಯರು, ಮುಖಂಡರು ಚರ್ಚ್‌ಗೆ ಭೇಟಿ ನೀಡಿ ಗುರುಗಳಿಗೆ ಕೇಕ್ ನೀಡಿ, ಸನ್ಮಾನಿಸಿ ಶುಭಾಶಯ ಕೋರಿದರು. ನಂತರ ಪೋತ್ನಾಳ ಗ್ರಾಮದ ಸಂತ ಕ್ಲಾರಾ ವಿಹಾರ ಚರ್ಚ್‌ಗೆ ಭೇಟಿ ನೀಡಿದ ಶಾಸಕರು ಫಾದರ್ ವಿಲಿಯಂ ಪ್ರಭು ಅವರನ್ನು ಸನ್ಮಾನಿಸಿ ಹಬ್ಬದ ಶುಭಾಶಯ ತಿಳಿಸಿದರು.

ಚರ್ಚ್ ಆವರಣದಲ್ಲಿ ಸಂಜೆ ಸರ್ವಧರ್ಮ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಂತರ ಯುವಕ–ಯುವತಿಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸರ್ವಧರ್ಮ ಸೇವಾ ವೇಲ್‌ಪೆ‌ರ್ ಟ್ರಸ್ಟ್ ಅಧ್ಯಕ್ಷ ಹನುಮಂತ ಕೋಟೆ ನೇತೃತ್ವದಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ನೆರಳು ಅನಾಥಾಶ್ರಮದಲ್ಲಿ ವಯೋವೃದ್ಧರು ಮತ್ತು ಅನಾಥರಿಗೆ ಹಣ್ಣು ಹಂಪಲು ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಮೆಥೋಡಿಸ್ಟ್ ಚರ್ಚ್, ಹೋಸಾನ್ನ ಚರ್ಚ್ ಸೇರಿದಂತೆ ಗ್ರಾಮೀಣ ಪ್ರದೇಶದ ಜಾಗೀರ ಪನ್ನೂರು, ಪ್ರೋತ್ನಾಳ್‌, ಕುರ್ಡಿ, ಮಾಡಗಿರಿ, ಕಲ್ಲೂರು, ಹರನಹಳ್ಳಿ, ಚೀಕಲಪರ್ವಿ ಮುಂತಾದ ಗ್ರಾಮಗಳ ಚರ್ಚ್‌ಗಳಲ್ಲಿ ಕ್ರೈಸ್ತ ಸಮುದಾಯದವರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮಾನ್ವಿಯ ಸೇಂಟ್ ಮೇರಿಸ್ ಚರ್ಚ್‌ನಲ್ಲಿ ಬುಧವಾರ ಕ್ರಿಸ್‌ಮಸ್ ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.