ADVERTISEMENT

ಮಾನ್ವಿ | ಜಂಬೂ ಸವಾರಿ: ಗಮನ ಸೆಳೆದ ಕಲಾ ತಂಡಗಳು

ಮಾನ್ವಿ: ಕಲ್ಮಠದ ದಸರಾ ಕುಂಭೋತ್ಸವ ಪಂಚ ಪೀಠಾಧೀಶರ ಅಡ್ಡ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:38 IST
Last Updated 7 ಅಕ್ಟೋಬರ್ 2025, 5:38 IST
ಮಾನ್ವಿಯಲ್ಲಿ ಸೋಮವಾರ ಕಲ್ಮಠದ ಸುವರ್ಣ ದಸರಾ ಮಹೋತ್ಸವದ ಅಂಗವಾಗಿ ಜಂಬೂ ಸವಾರಿ ಮೆರವಣಿಗೆ ನಡೆಯಿತು
ಮಾನ್ವಿಯಲ್ಲಿ ಸೋಮವಾರ ಕಲ್ಮಠದ ಸುವರ್ಣ ದಸರಾ ಮಹೋತ್ಸವದ ಅಂಗವಾಗಿ ಜಂಬೂ ಸವಾರಿ ಮೆರವಣಿಗೆ ನಡೆಯಿತು   

ಮಾನ್ವಿ: ಪಟ್ಟಣದ ಐತಿಹಾಸಿಕ ಮುಕ್ತಾಗುಚ್ಛ ಬೃಹನ್ಮಠ ಕಲ್ಮಠದ ಸುವರ್ಣ ದಸರಾ ಮಹೋತ್ಸವದ ಅಂಗವಾಗಿ ಕುಂಭೋತ್ಸವ, ಜಂಬೂ ಸವಾರಿ ಹಾಗೂ ಪಂಚ ಪೀಠಾಧೀಶರ ಅಡ್ಡ ಪಲ್ಲಕ್ಕಿ ಮಹೋತ್ಸವ ಮೆರವಣಿಗೆ ಸೋಮವಾರ ಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕಲ್ಮಠದಲ್ಲಿ ಪೀಠಾಧ್ಯಕ್ಷ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದೇವಿಯ ರಜತ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಂಸದ ಜಿ.ಕುಮಾರ ನಾಯಕ ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

50 ಕೆ.ಜಿ ತೂಕದ ಬೆಳ್ಳಿಯ ನೂತನ ಅಂಬಾರಿ ಹಾಗೂ ಪಂಚ ಲೋಹದ ಉತ್ಸವ ಮೂರ್ತಿಯ ಲೋಕಾರ್ಪಣೆ ನಡೆಯಿತು.

ಆನೆಯ ಮೇಲೆ ನೂತನ ಅಂಬಾರಿಯಲ್ಲಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆ ಆರಂಭಗೊಂಡಿತು. ಕುಂಭ–ಕಳಸ ಹೊತ್ತ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾದರು.

ಪಂಚ ಪೀಠಾಧೀಶರಾದ ರಂಭಾಪುರಿ, ಶ್ರೀಶೈಲ, ಕೇದಾರ, ಕಾಶಿ ಮತ್ತು ಉಜ್ಜಯಿನಿ ಪೀಠಾಧ್ಯಕ್ಷರ ಅಡ್ಡ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು.

ಪಟ್ಟಣದ ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಬಸವ ವೃತ್ತದ ಮಾರ್ಗವಾಗಿ ಮಹಾಲಕ್ಷ್ಮಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ನಂತರ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಅಂತ್ಯಗೊಂಡಿತು.

ಮೆರವಣಿಗೆಯಲ್ಲಿ ಶಾಲಾ ಮಕ್ಕಳ ಸ್ತಬ್ಧಚಿತ್ರಗಳು ಹಾಗೂ ‌ನೀರಮಾನ್ವಿಯ ಕನಕದಾಸ ಯುವಕ ಮಂಡಳಿಯ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.

ವಿವಿಧ ಮಠಾಧೀಶರು, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ರಾಜಕೀಯ ಪಕ್ಷಗಳ ಗಣ್ಯರು ಹಾಗೂ ಸಂಘ–ಸಂಸ್ಥೆಗಳ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮಾನ್ವಿಯಲ್ಲಿ ಸೋಮವಾರ ಕಲ್ಮಠದ ಸುವರ್ಣ ದಸರಾ ಮಹೋತ್ಸವದ ಅಂಗವಾಗಿ ಪಂಚ ಪೀಠಾಧೀಶರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು

‘ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ’

‘ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಬಾಳಿ ಬೆಳಕಾದವರು ಬಸವಣ್ಣನವರು. ಅವರು ಯಾವುದೇ ಹೊಸ ಧರ್ಮ ಹುಟ್ಟು ಹಾಕಿಲ್ಲ. ಪಂಚ ಪೀಠಗಳವರು ಬಸವಣ್ಣನವರ ವಿರೋಧಿಗಳಲ್ಲ’ ಎಂದು ರಂಭಾಪುರಿ ಉಜ್ಜಯಿನಿ ಕೇದಾರ ಶ್ರೀಶೈಲ ಮತ್ತು ಕಾಶಿ ಪೀಠಗಳ ಪಂಚ ಪೀಠಾಧೀಶರು ಜಂಟಿ ಹೇಳಿಕೆ ನೀಡಿದ್ದಾರೆ. ‘ಬಸವಣ್ಣನವರಿಗಿಂತಲೂ ಮೊದಲೇ ವೀರಶೈವ ಧರ್ಮ ಇತ್ತು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಎಲ್ಲರನ್ನೂ ಅಪ್ಪಿಕೊಂಡ ಬಸವಣ್ಣನವರ ಘನ ವ್ಯಕ್ತಿತ್ವ ಬಹಳ ದೊಡ್ಡದು. ಆದರೆ ಇಂದು ಬಸವಣ್ಣನವರ ಹೆಸರಿನಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುತ್ತಿರುವುದು ಖೇದದ ಸಂಗತಿ’ ಎಂದಿದ್ದಾರೆ. ‘ಬಸವಣ್ಣನವರ ವಿಚಾರಧಾರೆಗಳನ್ನು ಹೇಳುವವರು ಅವರ ಆದರ್ಶಗಳನ್ನು ಪರಿಪಾಲಿಸುತ್ತಿಲ್ಲ. ಆಡುವ ಮಾತು ಒಂದು ನಡೆಯುವ ದಾರಿ ಇನ್ನೊಂದು ಅವರದಾಗಿದೆ. ಅಶ್ವಥ ವೃಕ್ಷದಂತಿರುವ ವೀರಶೈವ ಅಥವಾ ಲಿಂಗಾಯತ ಹಿಂದೂ ಧರ್ಮದ ಒಂದು ಅಂಗವಾಗಿದೆ. ಹೊರತು ಪ್ರತ್ಯೇಕ ಧರ್ಮ ಅಲ್ಲ’ ಎಂದು ಹೇಳಿದ್ದಾರೆ. ‘ಸಂವಿಧಾನದಲ್ಲಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ದೊರಕಿಸಿಕೊಡಬೇಕು ಎಂಬ ಅಖಿಲ ಭಾರತ ವೀರಶೈವ ಮಹಾಸಭಾದ ಬೇಡಿಕೆಗೆ ಮಾನ್ಯತೆ ಸಿಕ್ಕಿರುವುದಿಲ್ಲ. ಪ್ರತ್ಯೇಕ ಧರ್ಮಕ್ಕೆ ಅವಕಾಶಗಳಿಲ್ಲದಿದ್ದರೂ ಕೆಲವು ರಾಜಕೀಯ ಪ್ರೇರಿತ ಶಕ್ತಿಗಳಿಂದಾಗಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ವೀರಶೈವ ಲಿಂಗಾಯತ ಸಮುದಾಯದ ಜನರಲ್ಲಿ ತಪ್ಪು ಅಭಿಪ್ರಾಯಗಳನ್ನು ಹುಟ್ಟು ಹಾಕುತ್ತಿರುವುದು ಒಳ್ಳೆಯದಲ್ಲ’ ಎಂದಿದ್ದಾರೆ. ‘ರಾಜಕೀಯದಿಂದ ದೂರವಿದ್ದು ಧರ್ಮದ ಪಾವಿತ್ರ್ಯತೆ ಕಾಪಾಡಿಕೊಂಡು ಬರುವ ಅವಶ್ಯಕತೆ ಇದೆ. ಧರ್ಮ ಸಮಾಜ ಒಡೆಯುತ್ತಿರುವ ಇಂಥ ಸಂಘಟನೆಗಳನ್ನು ಅಖಿಲ ಭಾರತ ವೀರಶೈವ ಮಹಾಸಭಾ ನಿಯಂತ್ರಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.