ADVERTISEMENT

ಮೇವು, ಕುಡಿಯುವ ನೀರಿನ‌ ನಿರ್ವಹಣೆ ಅಗತ್ಯ: ಶಾಸಕ ಜಿ.ಹಂಪಯ್ಯ

ಮಾನ್ವಿ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೆರೆಗಳ ಭರ್ತಿಗೆ ಶಾಸಕ ಜಿ.ಹಂಪಯ್ಯ ನಾಯಕ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 13:18 IST
Last Updated 24 ಫೆಬ್ರುವರಿ 2024, 13:18 IST
ಮಾನ್ವಿಯಲ್ಲಿ ಶನಿವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿದರು
ಮಾನ್ವಿಯಲ್ಲಿ ಶನಿವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿದರು   

ಮಾನ್ವಿ: ‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಡೆಯಲು ಮುಂಜಾಗ್ರತೆಯಾಗಿ ಗ್ರಾಮೀಣ ಭಾಗದ ಎಲ್ಲಾ ಕುಡಿಯುವ ನೀರಿನ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಜಿ.ಹಂಪಯ್ಯ ನಾಯಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶನಿವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೇಸಿಗೆಯಲ್ಲಿ ಮಾನ್ವಿ ಮತ್ತು ಸಿರವಾರ ತಾಲ್ಲೂಕುಗಳಲ್ಲಿ ಸಮರ್ಪಕ ಕುಡಿಯುವ ನೀರು ಹಾಗೂ ಮೇವು ಸಂಗ್ರಹಣೆ ವ್ಯವಸ್ಥೆ ಮಾಡಿಕೊಳ್ಳುವ ಅಗತ್ಯವಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆಗಾಗಿ ಮಾರ್ಚ್ 5ರಿಂದ ಮಾರ್ಚ್ 16ರವರೆಗೆ ತುಂಗಭದ್ರಾ ಎಡದಂಡೆ ನಾಲೆಯ ಮೂಲಕ ಗಣೆಕಲ್ ಜಲಾಶಯ ಹಾಗೂ ಕೆರೆಗಳನ್ನು ತುಂಬಿಸಲು ಪ್ರತಿದಿನ 1,200 ಕ್ಯೂಸೆಕ್ ನೀರು ಹರಿಸಲಾಗುತ್ತದೆ’ ಎಂದರು.

ADVERTISEMENT

‌‘ಮಾನ್ವಿ, ಸಿರವಾರ ತಾಲ್ಲೂಕುಗಳಿಗೆ ವಿತರಣಾ ಕಾಲುವೆ ಸಂಖ್ಯೆ 72,76,84, 92 ಸೇರಿದಂತೆ ಇತರೆ ಕಾಲುವೆಗಳ ಮೂಲಕ ಕೆರೆಗಳ ಭರ್ತಿಗೆ ನೀರು ಹರಿಸಲಾಗುವುದು. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಬೇಕಾಗಿರುವ ನೀರಿನ ಪ್ರಮಾಣದ ನಿಖರ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು. ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಪಿಡಿಒಗಳು ಹಾಗೂ ಮಾನ್ವಿ ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿದಲ್ಲಿ ಜಿಲ್ಲಾಧಿಕಾರಿ ಜತೆಗೆ ಚರ್ಚೆ ನಡೆಸಿ ಅಗತ್ಯ ಪ್ರಮಾಣದಲ್ಲಿ ನೀರನ್ನು ಕಾಲುವೆಗಳಿಗೆ ಹರಿಸಲು ಸಾಧ್ಯ’ ಎಂದು ಅವರು ತಿಳಿಸಿದರು.

ಮಾನ್ವಿ ತಹಶೀಲ್ದಾರ್ ಜಗದೀಶ್ ಚೌರ್, ಸಿರವಾರ ತಹಶೀಲ್ದಾರ್ ಮಲ್ಲಿಕಾರ್ಜುನ, ಮಾನ್ವಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಾದ ಖಾಲೀದ್ ಅಹಮ್ಮದ್ ಹಾಗೂ ಶರ್ಪುನ್ನೀಸಾ ಬೇಗಂ, ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮಿ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮಾನ್ವಿಯಲ್ಲಿ ಶನಿವಾರ ಶಾಸಕ ಜಿ.ಹಂಪಯ್ಯ ನಾಯಕ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್‌ ಸಮಿತಿಯ ಸಭೆ ನಡೆಯಿತು

‘₹50 ಲಕ್ಷ ಅನುದಾನ’

‘ಕೊಳವೆ ಬಾವಿಗಳ ದುರಸ್ತಿ ಹಾಗೂ ನೂತನ ಕೊಳವೆ ಬಾವಿಗಳನ್ನು ಕೊರೆಯಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಬರ ಪರಿಸ್ಥಿತಿಯ ನಿರ್ವಹಣೆಗೆ ಮಾನ್ವಿ ಸಿರವಾರ ತಾಲ್ಲೂಕಿನಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಸರ್ಕಾರ ತಲಾ ₹25 ಲಕ್ಷದಂತೆ ಒಟ್ಟು ₹50 ಲಕ್ಷ ಅನುದಾನವನ್ನು ನೀಡಿದೆ. ರೈತರಿಗೆ ಜಾನುವಾರುಗಳಿಗೆ ಮೇವನ್ನು ಬೆಳೆಯಲು ಪಶು ಇಲಾಖೆಯಿಂದ ರೈತರಿಗೆ ಮೇವಿನ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಸಿರವಾರ ತಾಲ್ಲೂಕಿನಲ್ಲಿ 2 ಹಾಗೂ ಮಾನ್ವಿ ತಾಲೂಕಿನಲ್ಲಿ ಎರಡು ಮೇವಿನ ಬ್ಯಾಂಕುಗಳನ್ನು ಪ್ರಾರಂಭಿಸಿ ಮೇವಿನ ಸಂಗ್ರಹಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.