ADVERTISEMENT

ಕಿಡ್ನಿ ವೈಫಲ್ಯ,ಸಮಯಕ್ಕೆ ಸಿಗದ ಸೌಲಭ್ಯ:ಹೆಚ್ಚುವರಿ ಡಯಾಲಿಸಿಸ್ ಯಂತ್ರಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:24 IST
Last Updated 23 ಜನವರಿ 2026, 8:24 IST
ಮಾನ್ವಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಯಂತ್ರ
ಮಾನ್ವಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಯಂತ್ರ   

ಮಾನ್ವಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳ ಪೂರೈಕೆಗೆ ಬೇಡಿಕೆ ಹೆಚ್ಚಾಗಿದೆ.

ತಾಲ್ಲೂಕಿನ ಗ್ರಾಮೀಣ ಭಾಗದ ರೋಗಿಗಳಿಗೆ ಉಚಿತವಾಗಿ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಈ ಘಟಕ ಯಶಸ್ವಿಯಾಗಿದೆ. ಡಯಾಲಿಸಿಸ್ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ರಾಯಚೂರು, ಹುಬ್ಬಳ್ಳಿ, ಹೈದರಾಬಾದ್, ಬೆಂಗಳೂರು ನಗರಗಳಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು ತಪ್ಪಿದೆ.

2018ರಲ್ಲಿ ಆರಂಭವಾದ ಸ್ಥಳೀಯ ಡಯಾಲಿಸಿಸ್ ಘಟಕದ ನಿರ್ವಹಣೆ ಜವಾಬ್ದಾರಿಯನ್ನು ಐದು ವರ್ಷಗಳ ವರೆಗೆ ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಪ್ರಸ್ತುತ ಡಯಾಲಿಸಿಸ್ ಘಟಕವನ್ನು ಆರೋಗ್ಯ ಇಲಾಖೆ ನಿರ್ವಹಣೆ ಮಾಡುತ್ತಿದೆ.

ADVERTISEMENT

ಘಟಕದಲ್ಲಿ ಇಬ್ಬರು ತಂತ್ರಜ್ಞರು ಹಾಗೂ ಇಬ್ಬರು ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಘಟಕದಲ್ಲಿ ಮೂರು ಡಯಾಲಿಸಿಸ್ ಯಂತ್ರಗಳಿದ್ದು ಒಟ್ಟು 25 ರೋಗಿಗಳು ಪ್ರತಿ ವಾರ 2-3 ಬಾರಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ದಿನ 8-9 ಜನ ರೋಗಿಗಳು ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದು ಘಟಕವು ಇಡೀ ದಿನ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಎನ್ನಲಾಗಿದೆ.

ಹೆಚ್ಚಿನ ಸಂಖ್ಯೆಯ ರೋಗಿಗಳು ಡಯಾಲಿಸಿಸ್ ಚಿಕಿತ್ಸೆಗೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಯಂತ್ರಗಳ ಕೊರತೆಯಿಂದ ರೋಗಿಗಳು ಅಗತ್ಯ ಸಮಯಕ್ಕೆ ಡಯಾಲಿಸಿಸ್ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಜಿಲ್ಲೆಯ ಸಿಂಧನೂರು ಹಾಗೂ ಲಿಂಗಸೂಗುರು ತಾಲ್ಲೂಕುಗಳ ಘಟಕಗಳಲ್ಲಿ ಮಾನ್ವಿ ಘಟಕಕ್ಕಿಂತ ಕಡಿಮೆ ಸಂಖ್ಯೆಯ ರೋಗಿಗಳಿದ್ದರೂ ತಲಾ 6 ಡಯಾಲಿಸಿಸ್ ಯಂತ್ರಗಳನ್ನು ಹೊಂದಿವೆ. ಕಾರಣ ಮಾನ್ವಿ ಡಯಾಲಿಸಿಸ್ ಘಟಕಕ್ಕೆ ಹೆಚ್ಚುವರಿಯಾಗಿ ಎರಡು ಅಥವಾ ಮೂರು ಡಯಾಲಿಸಿಸ್ ಯಂತ್ರಗಳನ್ನು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಪೂರೈಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಮಾನ್ವಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಚಿಕಿತ್ಸಾ ಘಟಕ
ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚುವರಿಯಾಗಿ ಯಂತ್ರಗಳ ಅಗತ್ಯದ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ
ಡಾ.ಶರಣಬಸವರಾಜ ಗೌಡ ತಾಲ್ಲೂಕು ಆರೋಗ್ಯಾಧಿಕಾರಿ ಮಾನ್ವಿ
ರೋಗಿಗಳ ಸಂಖ್ಯೆ ಹೆಚ್ಚಿದ್ದು ಇನ್ನೂ ಎರಡು ಅಥವಾ ಮೂರು ಡಯಾಲಿಸಿಸ್ ಯಂತ್ರಗಳ ವ್ಯವಸ್ಥೆ ಕಲ್ಪಿಸಿದರೆ ರೋಗಿಗಳ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ನೀಡಬಹುದು.
ಮರಿಸ್ವಾಮಿ ತಂತ್ರಜ್ಞ ಡಯಾಲಿಸಿಸ್ ಚಿಕಿತ್ಸಾ ಘಟಕ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.