ADVERTISEMENT

ಮಸ್ಕಿ: ಅಮೃತ ಯೋಜನೆಯ ಅರೆಬರೆ ಕಾಮಗಾರಿಗೆ ಬೇಸತ್ತ ಜನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:09 IST
Last Updated 20 ಫೆಬ್ರುವರಿ 2026, 5:09 IST
<div class="paragraphs"><p>ಮಸ್ಕಿ ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ಅಮೃತ ಯೋಜನೆ ಪೈಪ್‌ಲೈನ್‌ಗಾಗಿ ರಸ್ತೆ ಅಗೆದು ಹಾಗೇ ಬಿಟ್ಟಿರುವುದು</p></div>

ಮಸ್ಕಿ ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ಅಮೃತ ಯೋಜನೆ ಪೈಪ್‌ಲೈನ್‌ಗಾಗಿ ರಸ್ತೆ ಅಗೆದು ಹಾಗೇ ಬಿಟ್ಟಿರುವುದು

   

ಮಸ್ಕಿ: ಪಟ್ಟಣದಲ್ಲಿ ಜಾರಿಗೊಂಡಿರುವ ‘ಅಮೃತ 2.0’ ಯೋಜನೆಯ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಅರೆಬರೆಯಾಗಿಯೇ ಮುಂದುವರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿವಿಧ ವಾರ್ಡ್‌ಗಳಲ್ಲಿ ಪೈಪ್ ಅಳವಡಿಕೆಗಾಗಿ ರಸ್ತೆಗಳನ್ನು ತೋಡಲಾಗಿದ್ದು, ಬಳಿಕ ಅವುಗಳನ್ನು ಸಮತಟ್ಟಾಗಿ ಮುಚ್ಚದೇ ಬಿಟ್ಟುಬಿಡಲಾಗಿದೆ. ಇದರಿಂದ ರಸ್ತೆಗಳು ಅಸಮತಟ್ಟಾಗಿ, ಅಪಾಯಕಾರಿಯಾಗಿ ಪರಿಣಮಿಸಿದ್ದು ಜನರು ದಿನನಿತ್ಯ ಸಂಚಾರಕ್ಕೆ ಹರಸಾಹಸ ಪಡುತ್ತಿದ್ದಾರೆ.

ADVERTISEMENT

ಕೆಲ ವಾರ್ಡ್‌ಗಳಲ್ಲಿ ರಸ್ತೆಗೆ ಹಾಕಿದ ಫೆವರ್ಸ್‌ಗಳನ್ನು ಕಿತ್ತು ಪೈಪ್ಗಳನ್ನು ಹಾಕಲಾಗಿದೆ. ಬ್ಯಾಂಕ್ ಇತರ ಕಚೇರಿಗಳ ಮುಂದೆ ಪೈಪ್‌ಲೈನ್‌ಗಾಗಿ ಅಗೆದ ಭೂಮಿಯನ್ನು ಮುಚ್ಚದೆ ಹಾಗೆಯೇ ಬಿಡಲಾಗಿದ್ದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

ವಿಶೇಷವಾಗಿ ಮಹಿಳೆಯರು, ಹಿರಿಯರು ಹಾಗೂ ಶಾಲಾ ಮಕ್ಕಳು ನಡೆದು ಹೋಗುವಾಗ ಜಾರಿ ಬೀಳುವ ಭೀತಿ ಎದುರಿಸುತ್ತಿದ್ದಾರೆ. ಬೈಕ್ ಸವಾರರು, ಆಟೊ ಚಾಲಕರು ಹಾಗೂ ಇತರ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಅಪಘಾತದ ಆತಂಕ ಹೆಚ್ಚಾಗಿದೆ.

ಸ್ಥಳೀಯರು ಹಲವು ಬಾರಿ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ ರಸ್ತೆಗಳನ್ನು ಶೀಘ್ರ ಸರಿಪಡಿಸುವಂತೆ ಪುರಸಭೆ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.